'ಗಾಂಧಿ ಹತ್ಯೆಯನ್ನು ಸಮರ್ಥಿಸುತ್ತಿರುವುದು ದುರಂತ’

The biggest tragedy is to justify the assassination of Mahatma Gandhi

30-01-2018

ಬೆಂಗಳೂರು: ಗಾಂಧಿಯಂತಹ ಜಾತ್ಯಾತೀತ ನಾಯಕರನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಪರಂಪರೆಯವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮಾರ್ಮಿಕವಾಗಿ ಕರೆ ನೀಡಿದ್ದಾರೆ.

ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಗಾಂಧಿ ಪ್ರತಿಮೆಗೆ ಸರ್ವೋದಯ ದಿನದ ಅಂಗವಾಗಿ ಇಂದು ಮಾಲಾರ್ಪಣೆ ಮಾಡಿದ ಅವರು ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಗಾಂಧಿಯವರು ನಿಜವಾದ ಅರ್ಥದಲ್ಲಿ ಜನಪರ ನಾಯಕ, ಸರ್ವಧರ್ಮ ಸಹಿಷ್ಣು,ಜಾತ್ಯಾತೀತ ನಾಯಕ.ಅಂತಹ ಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ಸಮರ್ಥಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಅವರ ಬಗ್ಗೆ ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳು ಕಷ್ಟಕರವಾಗಲಿವೆ ಎಂದು ಹೇಳಿದರು.

ಮಹದಾಯಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ಗೋವಾ ಸ್ಪೀಕರ್ ಯಾರು ಎಂದು ಪ್ರಶ್ನಿಸಿದ ಅವರು,ಗೋವಾ ಈ ವಿಚಾರದಲ್ಲಿ ಅನಗತ್ಯ ಕ್ಯಾತೆ ತೆಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ನ್ಯಾಯಾಧೀಕರಣವಿದೆ. ನ್ಯಾಯಾಲಯವೂ ಇದೆ. ಒಂದು ರಾಜ್ಯಕ್ಕೆ ಕದ್ದು ಬಂದು ನೋಡಿಕೊಂಡು ಹೋದವರಿಗೆ ಉತ್ತರ ಕೊಡಬೇಕಾಗಿಲ್ಲ. ಅನಗತ್ಯ ಕ್ಯಾತೆ ತೆಗೆಯುವುದೇ ಅವರಿಗೆ ಹವ್ಯಾಸವಾಗಿದೆ ಎಂದು ಕಿಡಿಕಾರಿದರು.

ಮಹದಾಯಿಯ 45 ಟಿಎಂಸಿ ಅಡಿ ನೀರು ನಮ್ಮ ರಾಜ್ಯದಲ್ಲೇ ಉತ್ಪತ್ತಿಯಾಗುತ್ತದೆ. ಅಂದರೆ ಮಳೆಯಿಂದಾಗಿ ಈ ನೀರು ನದಿ ಸೇರುತ್ತದೆ. ಅಲ್ಲದೆ 200 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗುತ್ತಿದೆ. ಇದನ್ನು ಗೋವಾ ಅಥವಾ ಮಹಾರಾಷ್ಟ್ರ ಬಳಸಿಕೊಳ್ಳುತ್ತಿಲ್ಲ.ಹಾಗಿದ್ದೂ ಸಹ ನಮ್ಮ ಪಾಲೀನ ನೀರಿನ ಹಕ್ಕಿಗಾಗಿ ಕೇಳುತ್ತಿರುವ 7.56 ಟಿಎಂಸಿ ನೀರನ್ನು ಕೊಡುತ್ತಿಲ್ಲ ಎಂದು ಹರಿಹಾಯ್ದರು.

ಮಹದಾಯಿ ನದಿ ಪಾತ್ರದಲ್ಲಿ ನಿಯಮ ಉಲ್ಲಂಘಿಸಿ ಕಾಲುವೆ ನಿರ್ಮಿಸಿಲ್ಲ. ಗೋವಾ ರಾಜ್ಯದ ಯಾವುದೇ ನಿರ್ಣಯ ನಮಗೆ ಸಂಬಂಧಪಡುವುದಿಲ್ಲ. ಮಹದಾಯಿ ವಿವಾದ ನ್ಯಾಯಾಧೀಕರಣದ ಮುಂದಿದ್ದು, ವಿಚಾರಣೆ ಹಂತದಲ್ಲಿದೆ. ಫೆ.6ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಮಹದಾಯಿ ನದಿ ಪಾತ್ರದ ಕಣಕುಂಬಿಗೆ ಕದ್ದು ಬಂದಿದ್ದಾರೆ. ಹೇಳಿ ಬಂದಿದ್ದರೆ ಶಿಷ್ಟಾಚಾರದ ಪ್ರಕಾರ ವ್ಯವಸ್ಥೆ ಮಾಡುತ್ತಿದ್ದೆವು. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಹೋಗುವಾಗ ಹೇಳಿ ಹೋಗುವ ಸೌಜನ್ಯ ಇರಬೇಕು. ಆದರೆ, ಕದ್ದು ಬಂದಿರುವುದನ್ನು ತಾವು ಖಂಡಿಸುತ್ತೇವೆ ಎಂದರು.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ಹತ್ಯೆಯನ್ನು ಸಮರ್ಥಿಸುತ್ತಿರುವುದು ದೊಡ್ಡ ದುರಂತ. ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಗೋಡ್ಸೆ ಪರಿವಾರದವರೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಮತೀಯವಾದಿಗಳು ಎಂದು ಹೇಳಿದರು. ಮಹಾತ್ಮಗಾಂಧೀಜಿ ಜೀನವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡು ಬದುಕಿದರು. ದೇಶದಲ್ಲಿ ಎಲ್ಲೇ ಕೋಮು ಸಂಘರ್ಷಗಳು ಉಂಟಾದರೂ ಸಾಂತ್ವನ ಹೇಳುತ್ತಿದ್ದರು. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ಅವರ ಕೋಮಸೌಹಾರ್ದತಾ ದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ. ಜಾತ್ಯಾತೀತತೆಯನ್ನು ಎತ್ತಿಹಿಡಿದಿದ್ದರು ಎಂದು ವಿವರಿಸಿದರು.

ಅವರ ತತ್ವಾದರ್ಶಗಳನ್ನು ಅನುಸರಿಸಬೇಕು. ಅದರಿಂದ ಸೌಹಾರ್ದ ವಾತಾವರಣ ನೆಲಸಲಿದೆ ಎಂದು ಹೇಳಿದರು. ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸರ್ವೋದಯ ದಿನ ಎಂದು ಆಚರಿಸಿ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಚ್.ಆಂಜನೇಯ, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿಜಯ್‍ ಭಾಸ್ಕರ್ ಮತ್ತಿತರರಿದ್ದರು.


ಸಂಬಂಧಿತ ಟ್ಯಾಗ್ಗಳು

siddramaiah Nathuram Godse ರಾಷ್ಟ್ರಪಿತ ಗಾಂಧೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ