ಕಿಡ್ನಾಪ್ ಕೇಸ್: ಆರೋಪಿಗೆ 10 ವರ್ಷಗಳ ಜೈಲು

Girl kidnapped: 10 years jail for accuse

30-01-2018

ಬೆಂಗಳೂರು: ಅಪ್ರಾಪ್ತ ಬಾಲಕಿ ಅಪಹರಿಸಿದ್ದವನನ್ನು, ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಅದೇ ಬಾಲಕಿಯನ್ನು ಅಪಹರಿಸಿದ್ದ ಆರೋಪಿ ಗುರು ಎಂಬಾತನಿಗೆ ನಗರದ ಸಿಸಿಹೆಚ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ನೀಡಿ 2 ಲಕ್ಷಗಳ ದಂಡ ವಿಧಿಸಿದೆ.

ಹೊಸಕೆರೆ ಹಳ್ಳಿಯ ಶ್ರೀನಿವಾಸ್ ಎಂಬುವರ 16 ವರ್ಷದ ಅಪ್ರಾಪ್ತ ಬಾಲಕಿಯನ್ನು 2 ಬಾರಿ ಅಪಹರಿಸಿದ್ದ ಬಿಎಸ್‍ಕೆ 3ನೇ ಹಂತದ ಗುರು ಅಲಿಯಾಸ್ ಗೂಸಾ (20)ನಿಗೆ 54ರ ಸಿಸಿಹೆಚ್ ನ್ಯಾಯಾಲಯದ ನ್ಯಾಯಮೂರ್ತಿ ಲತಾಕುಮಾರಿ ಅವರು 10 ವರ್ಷಗಳ ಸಾದಾ ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿ ಗುರು 2015ರ ಜು. 14 ರಂದು ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮನೆಯಿಂದ ಅಪಹರಿಸಿಕೊಂಡು ಹೋಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸಂತ್ರಸ್ತ ಬಾಲಕಿಯು ಆರೋಪಿ ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾಗಿ ಹೇಳಿಕೆ ನೀಡಿದ್ದಳು.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿತ್ತು. ಕೆಲವೇ ದಿನಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ಆರೋಪಿ ಗುರು, ಮತ್ತೆ 2015ರ ಸೆಪ್ಟಂಬರ್ 8 ರಂದು ಜಯನಗರದ ಕಾಲೇಜಿನಲ್ಲಿ ಓದುತ್ತಿದ್ದ ಅದೇ ಬಾಲಕಿಯನ್ನು ಕಾಲೇಜು ಬಳಿಯೇ ಅಪಹರಿಸಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 2 ಪೊಲೀಸ್ ಠಾಣೆಗಳ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿ ಗುರು 2 ಬಾರಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಲತಾಕುಮಾರಿ ಅವರು ಎರಡೂ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿ ಮೊದಲ ಪ್ರಕರಣದಲ್ಲಿ 7 ವರ್ಷಗಳ ಸಾದಾ ಸಜೆ ಹಾಗೂ 1 ಲಕ್ಷ ದಂಡ, 2ನೇ ಪ್ರಕರಣದಲ್ಲಿ 3 ವರ್ಷಗಳ ಕಾಲ ಸಾದಾ ಸಜೆ ಹಾಗೂ 1 ಲಕ್ಷ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಿರಿಯ ಸಾರ್ವಜನಿಕ ಅಭಿಯೋಜಕ ಚಿನ್ನ ವೆಂಕಟರಮಣಪ್ಪ ಅವರು ವಾದ ಮಂಡಿಸಿದ್ದರು.


ಸಂಬಂಧಿತ ಟ್ಯಾಗ್ಗಳು

kidnap Coutr ನ್ಯಾಯಾಲಯ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ