ಕಿಡ್ನಾಪರ್ ಗೆ ಗುಂಡೇಟು: ನಾಲ್ವರ ಬಂಧನ

police shootout on kidnaper: Four arrested

30-01-2018

ಬೆಂಗಳೂರು: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಅಮ್ಮನ ಹುಟ್ಟುಹಬ್ಬದಂದೇ ಅಪಹರಿಸಿ 35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳನ್ನು ಕೆಂಗೇರಿ ಬಳಿ ಬೆನ್ನಟ್ಟಿ ಓರ್ವನ ಕಾಲಿಗೆ ಗುಂಡು ಹಾರಿಸಿ ನಾಲ್ವರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಪಿ ಅಗ್ರಹಾರದ ಮಂಜುನಾಥ ನಗರದಲ್ಲಿನ ಮನೆಯ ಮುಂಭಾಗ ಕಳೆದ ಭಾನುವಾರ(ಜ.28)ರಾತ್ರಿ 9ರ ವೇಳೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಚಂದನ್ ಎಂಬ 5 ವರ್ಷದ ಬಾಲಕನ್ನು ಅಪಹರಿಸಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಐವರಲ್ಲಿ ನಾಲ್ವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಲೆಗೆ ಕೆಡವಿದ್ದಾರೆ.

ದುಷ್ಕರ್ಮಿಗಳು ನಿನ್ನೆ ರಾತ್ರಿ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‍ನ ಕೊಮ್ಮಘಟ್ಟ ರಸ್ತೆಯಲ್ಲಿ ಸ್ಯಾಂಟ್ರೊ ಕಾರಿನಲ್ಲಿ ಹೋಗುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಾಲಕ ಚಂದನ್‍ನನ್ನು ರಕ್ಷಿಸಿ ಪೋಷಕರ ಮಡಿಲಿಗೆ ಒಪ್ಪಿಸಿ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ಬ್ಯಾಟರಾಯನಪುರದ ಕಸ್ತೂರಿ ನಗರದ ದಿವ್ಯತೇಜ ಅಲಿಯಾಸ್ ಡಿಜೆ (22) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಜೊತೆ ಅಪಹರಣದ ರೂವಾರಿ ಮಂಜುನಾಥ್ ನಗರದ ಅಭಿಷೇಕ್ (23), ವಿಠ್ಠಲ್ ನಗರದ ಶ್ರೀಕಾಂತ್ (19), ಕಸ್ತೂರಬಾ ನಗರದ ಹರ್ಷಿತ್ (18)ನನ್ನು ಬಂಧಿಸಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ಆರೋಪಿ ಅಭಿಷೇಕ್ ಅವರ ತಂದೆ ಚಂದ್ರರಾವ್ ಅವರು ತುಮಕೂರು ಮೂಲದ ಮಿನಿಬಸ್ ಚಾಲಕ ರಾಜೇಶ್ ಅವರಿಗೆ ತಮ್ಮ ಮನೆಯ ಮೊದಲ ಮಹಡಿಯನ್ನು ಬಾಡಿಗೆಗೆ ಕೊಟ್ಟಿದ್ದರು. ರಾಜೇಶ್ ಆಟೊ, ಸ್ವಿಫ್ಟ್ ಕಾರನ್ನು ಖರೀದಿಸಿ ಬಾಡಿಗೆಗೆ ಬಿಟ್ಟು ಸ್ಥಿತಿವಂತರಂತೆ ಕಂಡುಬರುತ್ತಿದ್ದರು ಅಲ್ಲದೆ ರಾಜೇಶ್ ಅವರ ತಂದೆಗೆ ತುಮಕೂರಿನ ಬಳಿ 23 ಎಕರೆ ಬೆಲೆ ಬಾಳುವ ಜಮೀನು ಇತ್ತು.

ಅಭಿಷೇಕ್ ಟ್ರಾವೆಲ್ಸ್ ಏಜೆನ್ಸಿ ಇಟ್ಟುಕೊಂಡಿದ್ದು, ಅದರಲ್ಲಿ ಸರಿಯಾಗಿ ಹಣ ಸಂಪಾದಿಸದೆ ನಷ್ಟ ಅನುಭವಿಸಿದ್ದ. ತಂದೆ ಈತನ ವರ್ತನೆಯನ್ನು ನೋಡಿ ಹಣಕಾಸಿನ ಸಹಾಯ ಮಾಡಿರಲಿಲ್ಲ. ಇದರಿಂದ ಹೇಗಾದರೂ ಮಾಡಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತಮ್ಮ ಮನೆಯ ಮೇಲೆ ಬಾಡಿಗೆಗಿದ್ದ ರಾಜೇಶ್ ಅವರ ಆರ್ಥಿಕ ಸ್ಥಿತಿ ಗಮನಿಸಿ ಅವರ ಮಗನನ್ನು ಅಪಹರಿಸುವ ಸಂಚು ರೂಪಿಸಿದ್ದನು.

ತಾಯಿಯ ಹುಟ್ಟುಹಬ್ಬ: ಕಳೆದ ಜ. 28 ರಂದು ಬಾಲಕ ಚಂದನ್‍ನ ತಾಯಿ ಮಾಲಾ ಅವರ ಹುಟ್ಟುಹಬ್ಬವಿತ್ತು. ಅಂದು ರಾತ್ರಿ 9ರ ವೇಳೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಾಲಾ ಹಾಗೂ ರಾಜೇಶ್ ದಂಪತಿ ದೇವಸ್ಥಾನಕ್ಕೆ ಹೋಗಲು ಮಗನನ್ನು ಸಿದ್ಧಪಡಿಸಿ ಹೊರಗಡೆ ಆಟವಾಡಲು ಕಳುಹಿಸಿದ್ದರು. ಆಟವಾಡಲು ಹೋದ ಚಂದನ್ ಬಹಳ ಸಮಯ ಕಳೆದರೂ ಮನೆಗೆ ಬಾರದಿದ್ದರಿಂದ ಹುಡುಕಾಡಿಕೊಂಡು ಬಂದ ರಾಜೇಶ್ ಅವರಿಗೆ ಆಟವಾಡುತ್ತಿದ್ದ ಬಾಲಕರು ನಿಮ್ಮ ಮಾವ ಬಂದಿದ್ದಾರೆ ಎಂದು ಚಂದನ್‍ನನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ತನ್ನ ಜೊತೆಗೆ ಕರೆದುಕೊಂಡು ತಿಳಿಸಿದ್ದರು.

ಆತಂಕಗೊಂಡು ಹುಡುಕಾಟ ನಡೆಸಿದ ರಾಜೇಶ್ ದಂಪತಿ, ಚಂದನ್ ಪತ್ತೆಯಾಗದಿದ್ದಕ್ಕೆ ಪೊಲೀಸ್ ಠಾಣೆಗೆ ಹೋಗಲು ಸಿದ್ಧತೆ ನಡೆಸುವಾಗಲೇ ದುಷ್ಕರ್ಮಿಯೊಬ್ಬ ಅವರ ಮೊಬೈಲ್‍ಗೆ ಕರೆ ಮಾಡಿ ನಿಮ್ಮ ಮಗು ಬೇಕಾದರೆ 30 ಸಾವಿರ ಕೊಡಿ ಎಂದು ಕರೆ ಸ್ಥಗಿತಗೊಳಿಸಿದ್ದ. ಮರು ದಿನ ಮುಂಜಾನೆ ಮತ್ತೆ ಕರೆ ಮಾಡಿ 35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನು.

ಕಾರಿನಲ್ಲಿ ತಿರುಗಾಟ: ರಾತ್ರಿಯೇ ರಾಜೇಶ್ ಅವರು ಕೆಪಿ ಅಗ್ರಹಾರ ಪೊಲೀಸರಿಗೆ ದೂರು ನೀಡಿ ಮಗು ಅಪಹರಣದ ಸಂಪೂರ್ಣ ಮಾಹಿತಿ ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ, ಚೇತನ್‍ಸಿಂಗ್ ಅವರು ಆರೋಪಿಗಳ ಪತ್ತೆಗಾಗಿ ಇನ್ಸ್ಪೆಕ್ಟರ್ ಗಳಾದ ಮಂಜು, ನಿರಂಜನ್ ಕುಮಾರ್, ಸಬ್‍ ಇನ್ಸ್‍ಪೆಕ್ಟರ್ ಪ್ರಭುಸ್ವಾಮಿ ಅವರ ನೇತೃತ್ವದಲ್ಲಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿದ್ದರು.

ದುಷ್ಕರ್ಮಿಗಳು ಕರೆ ಮಾಡಿದ ಮೊಬೈಲ್ ಟವರ್ ಆಧರಿಸಿ ಕಾರ್ಯಾಚರಣೆಗಿಳಿದ ವಿಶೇಷ ತಂಡಗಳು ನಿನ್ನೆ ಇಡೀ ದಿನ ಶೋಧ ನಡೆಸಿ ಮಧ್ಯರಾತ್ರಿ ವಿಶ್ವೇಶ್ವರಯ್ಯ ಲೇಔಟ್ ಬಳಿ ದುಷ್ಕರ್ಮಿಗಳು ಸ್ಯಾಂಟ್ರೊ ಕಾರಿನಲ್ಲಿ ಹೋಗುತ್ತಿದ್ದ  ಮಾಹಿತಿಯನ್ನು ಪತ್ತೆ ಹಚ್ಚಿದವು.

ಕೂಡಲೇ ಅಲ್ಲಿಗೆ ಧಾವಿಸಿದ ಕೆಪಿ ಅಗ್ರಹಾರ ಪೊಲೀಸ್ ಇನ್ಸ್ ಪೆಕ್ಟರ್ ಮಂಜು ಅವರ ತಂಡ ಸ್ಯಾಂಟ್ರೊ ಕಾರನ್ನು ಅಡ್ಡಗಟ್ಟಿತು. ಈ ವೇಳೆ ಕಾರು ಚಲಾಯಿಸುತ್ತಿದ್ದ ಆರೋಪಿ ದಿವ್ಯತೇಜ ಕಾರು ನಿಲ್ಲಿಸಿ ಕೆಳಗಿಳಿದು ವಶಕ್ಕೆ ಪಡೆಯಲು ಬಂದ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಪೊಲೀಸರ ಮೇಲೆ ಹಲ್ಲೆ: ಶರಣಾಗುವಂತೆ ವಿನಂತಿಸಿದರೂ ಮಚ್ಚು ಹಿಡಿದು ಪೊಲೀಸರತ್ತ ನುಗ್ಗಿದಾಗ ಮಂಜುನಾಥ್ ಅವರು 2 ಸುತ್ತು ಗುಂಡು ಹಾರಿಸಿದ್ದು, 1 ಗುಂಡು ದಿವ್ಯತೇಜನ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಕೂಡಲೇ ಪೊಲೀಸರು ಸುತ್ತುವರೆದು ಕಾರಿನಲ್ಲಿದ್ದ ಅಭಿಷೇಕ್, ಶ್ರೀಕಾಂತ್, ಹರ್ಷಿತ್‍ನನ್ನು ಬಂಧಿಸಿ, ಕಾರಿನಲ್ಲಿದ್ದ ಬಾಲಕ ಚಂದನ್‍ನನ್ನು ರಕ್ಷಿಸಿ ಪೋಷಕರ ಮಡಿಲಿಗೆ ಒಪ್ಪಿಸಿ, ಗಾಯಗೊಂಡಿರುವ ದಿವ್ಯತೇಜನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುಂಡೇಟು ತಗುಲಿರುವ ದಿವ್ಯತೇಜ ಮೊದಲು ಹಚ್ಚೆ ಹಾಕುವ ಅಂಗಡಿ ಇಟ್ಟುಕೊಂಡಿದ್ದು, ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಶ್ರೀಕಾಂತ್ ಹಾಗೂ ಹರ್ಷಿತ್ ಮೊದಲ ಬಾರಿಗೆ ಅಪರಾಧ ಕೃತ್ಯಕ್ಕಿಳಿದಿರುವುದು ಕಂಡು ಬಂದಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

kidnapper shoot out ಆರೋಪಿ ಮಿನಿಬಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • pkisvjzbhw
  • uqolgknxfl