"ಅರಿವು ನೂತನ ತಂತ್ರಾಂಶ"ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

Kannada News

25-04-2017

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆಯಡಿ ಆಯ್ಕೆಯಾದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವಾಗಿ ರೂ. 20 ಕೋಟಿ ಮೊತ್ತದ ಚೆಕ್ ನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಸ್ತಾಂತರಿಸಿ "ಅರಿವು ನೂತನ ತಂತ್ರಾಂಶ"ಕ್ಕೆ ಮುಖ್ಯಮಂತ್ರಿ ಗಳು ಚಾಲನೆ ನೀಡಿದರು. 

ಹೆಚ್ಚು ಅಂಕ ಗಳಿಸುವ ಮೂಲಕ ಅರಿವು ಶಿಕ್ಷಣ ಸಾಲ ಯೋಜನೆಯನ್ನು  ಸದುಪಯೋಗಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು  ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ಶಿಕ್ಷಣ ಸಾಲ ಯೋಜನೆಯಡಿ  ಆಯ್ಕೆಯಾದ ಫಲಾನುಭವೀ ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವು ಒದಗಿಸಲು ಬೋಧನಾ ಶುಲ್ಕವನ್ನು ಮುಂಗಡವಾಗಿ ಪಾವತಿಸಲು 20 ಕೋಟಿ ರೂ ಮೊತ್ತದ ಚೆಕ್ಕನ್ನು  ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ ನಂತರ ಅರಿವು 0.2 ಹೊಸ ತಂತ್ರಾಂಶಕ್ಕೆ  ಚಾಲನೆ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಅವರು   2017 ನೇ ಸಾಲಿನ ವೃತ್ತಿಪರ ಶಿಕ್ಷಣ ಹಾಗೂ ಇನ್ನಿತರ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ  ಹಾಜರಾಗುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಹೊಸ ತಂತ್ರಾಂಶದ                   ಮುಖಾಂತರ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಈ ತಂತ್ರಾಂಶದ ಬಳಕೆಯಿಂದ  ಅರ್ಜಿಯ ಪರಿಶೀಲನಾ ಪ್ರಕ್ರಿಯೆ ಅತ್ಯಂತ ಕ್ಷಿಪ್ರವಾಗಿ ನಡೆಯಲು ಅನುಕೂಲವಾಗಲಿದೆ ಎಂದರು. 
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು  ಅರಿವು ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಅದರಂತೆ, 2014-15 ನೇ ಸಾಲಿನಲ್ಲಿ  19,044 ಫಲಾನುಭವಿಗಳಿಗೆ 51.82 ಕೋಟಿ ರೂ, 2015-16 ನೇ ಸಾಲಿನಲ್ಲಿ 24,518 ಫಲಾನುಭವಿಗಳಿಗೆ 69.07 ಕೋಟಿ ರೂ ಹಾಗೂ 2016-17 ನೇ ಸಾಲಿನಲ್ಲಿ 23,822 ಫಲಾನುಭವಿಗಳಿಗೆ  82.79 ಕೋಟಿ ರೂ ವೆಚ್ಚ ಮಾಡಲಾಗಿದೆ. ಅರಿವು ಯೋಜನೆಗೆ ಪ್ರಸಕ್ತ ಸಾಲಿನಲ್ಲಿ   100 ಕೋಟಿ ರೂ ಮೀಸಲಿರಿಸಲಾಗಿದೆ ಎಂದು ಅಂಕಿ-ಅಂಶಗಳನ್ನು ವಿವರಿಸಿದರು. 
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು ಟಿ ಖಾದರ್,  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ, ಕೋಲಾರ ಲೋಕಸಭಾ ಸದಸ್ಯ ಕೆ ಹೆಚ್ ಮುನಿಯಪ್ಪ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಅಲ್ಪಸಂಖ್ಯಾತರ ಇಲಾಖೆಯ  ಸರ್ಕಾರದ ಕಾರ್ಯದರ್ಶಿ ಮೊಹಮದ್ ಮೊಹಸಿನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ  ಅಧ್ಯಕ್ಷ ಎಂ ಎ ಗಫೂರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎನ್ ಟಿ  ಅಬ್ರೂ ಅವರೂ ಸೇರಿದಂತೆ  ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ