ಹಣಕಾಸು ಸಚಿವರ ಭ್ರೀಫ್‌ಕೇಸ್ ವೃತ್ತಾಂತ…

why Indian finance ministers carry a briefcase on budget day

30-01-2018

ಸಾಮಾನ್ಯವಾಗಿ ಪ್ರತಿ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್ ಮಂಡನೆ ಮಾಡುತ್ತವೆ. ಬಜೆಟ್ ಅಂದರೆ ಆಯವ್ಯಯ, ಹಂಗಂದ್ರೆ ಸರ್ಕಾರದ ಆದಾಯ, ಖರ್ಚು ವೆಚ್ಚ, ಸಾಲ ಮತ್ತು ಶಿಕ್ಷಣ, ಆರೋಗ್ಯ, ರಕ್ಷಣೆ ಇತ್ಯಾದಿ ವಿವಿಧ ವಲಯಗಳಿಗೆ, ಹೊಸ ಯೋಜನೆಗಳಿಗೆ ಬಿಡುಗಡೆ ಮಾಡಬೇಕು ಅಂತಿರೋ ಹಣ ಇತ್ಯಾದಿಗಳ ಬಗ್ಗೆ ಸಿದ್ಧಪಡಿಸಿರೋ ಒಂದು ದಾಖಲೆ ಪತ್ರ. ಇದನ್ನು ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಹಣಕಾಸು ಖಾತೆ ಹೊಂದಿರೋ ಸಚಿವರು ಮಂಡನೆ ಮಾಡುತ್ತಾರೆ.

ನೀವು ನೋಡಿರ್ತೀರಿ, ಪ್ರತಿ ಬಾರಿಯೂ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವರು ಕೈಯಲ್ಲಿ ಒಂದು ಬ್ರೀಫ್ ಕೇಸ್ ಹಿಡಿದು ಸದನಕ್ಕೆ ಆಗಮಿಸುತ್ತಾರೆ. ಆದರೆ, ಈ ಬ್ರೀಫ್ ಕೇಸ್ ನಲ್ಲಿ ಏನಿರುತ್ತೆ? ಯಾತಕ್ಕಾಗಿ ಇದನ್ನು ಹಿಡಿದುಕೊಂಡು ಬರುತ್ತಾರೆ? ಅನ್ನೋದು ಜನಸಾಮಾನ್ಯರಲ್ಲಿ ಹೆಚ್ಚಿನ ಜನರಿಗೆ ಗೊತ್ತಿರೋದಿಲ್ಲ. ಹೀಗಾಗಿ, ಈ ವರ್ಷದ ಬಜೆಟ್ ಮಂಡನೆಗೆ ಮುನ್ನ ಈ ವಿಚಾರದ ಬಗ್ಗೆ ತಿಳಿದುಕೊಂಡುಬಿಡೋಣ.

ಲ್ಯಾಟಿನ್ ಭಾಷೆಯಲ್ಲಿ ಬುಲ್ಗ ಅಂದರೆ ಒಂದು ಸಣ್ಣ ಚೀಲ ಅಥವ ಪರ್ಸ್ ಎಂದು ಅರ್ಥ. ಆನಂತರ ಫ್ರಾನ್ಸ್ ದೇಶದಲ್ಲಿ ಇದು ಬೌಜೆಟ್ಟಿ ಎಂದಾಯಿತು. ಆ ಬಳಿಕ ಬಜೆಟ್ ಮತ್ತು ಚರ್ಮದ ಚೀಲ ಒಂದರ ಜೊತೆಗೊಂದು ಬೆಸೆದುಕೊಂಡಿವೆ.

ಬಜೆಟ್ ಮಂಡನೆ ದಿವಸ ಸದನಕ್ಕೆ ಪೆಟ್ಟಿಗೆ ಹಿಡಿದುಕೊಂಡು ಬರುವ ಸಂಪ್ರದಾಯ ಭಾರತದಲ್ಲಿ ಆರಂಭವಾಗಿದ್ದು 1947ರಲ್ಲಿ. ಆದರೆ, ಇದು ಬ್ರಿಟಿಷರು ಆರಂಭಿಸಿದ ಸಂಪ್ರದಾಯ. ಸುಮಾರು ನೂರೈವತ್ತು ವರ್ಷಗಳಿಗೂ ಹಿಂದೆ ಬ್ರಿಟನ್ ದೇಶದ ರಾಣಿ, ಅಲ್ಲಿನ ಹಣಕಾಸು ಸಚಿವರಿಗೆ ಚರ್ಮವನ್ನು ಬಳಸಿ ತಯಾರಿಸಿದ ಬಜೆಟ್ ಬಾಕ್ಸ್ ಅನ್ನು ಕೊಡುಗೆಯಾಗಿ ಕೊಟ್ಟಿದ್ದರಂತೆ. 1860ರ ಬಳಿಕ ಅದೇ ಪೆಟ್ಟಿಗೆಯನ್ನು ಮುಂದಿನ ಹಣಕಾಸು ಸಚಿವರಿಗೆ ಹಸ್ತಾಂತರಿಸಲಾಗುತ್ತಿತ್ತಂತೆ. ಆದರೆ, 1947ರಲ್ಲಿ ಭಾರತದ ಮೊದಲ ಹಣಕಾಸು ಸಚಿವ ಆರ್‌.ಕೆ.ಶಣ್ಮುಗಮ್ ಚೆಟ್ಟಿಯವರು ಬಜೆಟ್ ಮಂಡನೆ ದಿನ ಸಂಸತ್ತಿಗೆ ಬರುವಾಗ ಒಂದು ಬ್ರೀಫ್ ಕೇಸ್ ಹಿಡಿದುಕೊಂಡುಬಂದಿದ್ದರು.

ಆ ಹೊತ್ತಿನಿಂದ ಆರಂಭಿಸಿ ಮೊರಾರ್ಜಿ ದೇಸಾಯಿ, ಮಧು ದಂಡವತೆ, ಪ್ರಣಬ್ ಮುಖರ್ಜಿ, ಡಾ.ಮನ್ ಮೋಹನ್ ಸಿಂಗ್, ಪಿ.ಚಿದಂಬರಂ ಇತ್ಯಾದಿ ಮಹನೀಯರೂ ಸೇರಿದಂತೆ ಇವತ್ತಿನ ಹಣಕಾಸು ಸಚಿವ ಅರುಣ್ ಜೇಟ್ಲಿವರೆಗೆ ಬಜೆಟ್ ಮಂಡಿಸಿದ ಎಲ್ಲ ಹಣಕಾಸು ಸಚಿವರೂ ಅದೇ ಪರಂಪರೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇದೇ ಹಣಕಾಸು ಸಚಿವರ ಭ್ರೀಫ್ ಕೇಸ್ ವೃತ್ತಾಂತ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ