ಸ್ಲಮ್‌ನೊಳಗೊಂದು ರಾತ್ರಿ!

Tourists offered night

30-01-2018

ಸಾಮಾನ್ಯವಾಗಿ ಪ್ರವಾಸಿಗರ ಅನುಕೂಲಕ್ಕಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಐಶಾರಾಮಿ ಹೋಟೆಲ್‌ಗಳಿರುತ್ತವೆ, ಉಳಿದ ಪ್ರವಾಸಿ ತಾಣಗಳಲ್ಲಿ ಹೋಟೆಲ್‌ಗಳು, ರೆಸಾರ್ಟ್‌ಗಳು, ಲಾಡ್ಜ್‌ಗಳು ಮತ್ತು ಹೋಮ್ ಸ್ಟೇ ಅಂದರೆ ಮನೆಗಳಲ್ಲಿ ಅತಿಥಿಯಾಗಿ ಉಳಿದುಕೊಳ್ಳುವ ವ್ಯವಸ್ಥೆಗಳಿರುತ್ತವೆ. ಆದರೆ, ಇದೀಗ ಮುಂಬೈ ಮಹಾನಗರದಲ್ಲಿ ಪ್ರವಾಸಿಗರಿಗೆ ಒಂದು ವಿಶಿಷ್ಟ ಅನುಭವ ನೀಡುವ ಪ್ರಯತ್ನ ಆರಂಭವಾಗಿದೆ.

ಮುಂಬೈ ಮಹಾನಗರಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಅಲ್ಲಿನ ಸ್ಲಮ್‌ನಲ್ಲಿ ಒಂದು ರಾತ್ರಿ ಕಳೆಯುವ ಅನುಭವ ನೀಡಲು ಕೆಲವರು ಮುಂದಾಗಿದ್ದಾರೆ.  ಭಾರತದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈ ಮಹಾನಗರದ ಜನಸಂಖ್ಯೆ ಸುಮಾರು 2 ಕೋಟಿ. ಆದರೆ, ಮುಂಬೈ ನಗರದ ಶೇ.60 ರಷ್ಟು ಜನ ಸ್ಲಮ್‌ಗಳಲ್ಲೇ ವಾಸ ಮಾಡುತ್ತಾರೆ, ಹೀಗಾಗಿ ಈ ನಗರವನ್ನು ‘ಸ್ಲಮ್‌ಬೈ’ ಎಂದೂ ಕರೆಯುತ್ತಾರೆ. ಇಂಥ ನಗರದಲ್ಲಿರುವ ಸ್ಲಮ್‌ಗಳು ಅಂದರೇನು? ಅಲ್ಲಿನ ಜನ ಹೇಗಿರುತ್ತಾರೆ? ಅವರ ಬದುಕು ಹೇಗಿರುತ್ತದೆ? ಅನ್ನುವುದನ್ನು ಅರ್ಥಮಾಡಿಸುವ ಸಲುವಾಗಿ ಇಂಥದ್ದೊಂದು ವ್ಯವಸ್ಥೆ ಮಾಡಲಾಗುತ್ತಿದೆಯಂತೆ. 

ಮುಂಬೈನ ಸರ್ಕಾರೇತರ ಸಂಸ್ಥೆಗಾಗಿ ಕೆಲಸ ಮಾಡುವ ಡೇವಿಡ್ ಬಿಜ್ಲ್ ಎಂಬ ಡಚ್ ದೇಶದ ನಾಗರಿಕ ಮತ್ತು ಸ್ಲಮ್ ನಿವಾಸಿ ರವಿ ಸಾನ್ಸಿ ಎಂಬವರು ಜೊತೆಯಾಗಿ ಇಂಥದ್ದನ್ನು ಆರಂಭಿಸಿದ್ದಾರೆ. ‘ಸ್ಲಮ್‌ಗಳು ಮುಂಬೈ ನಗರದ ಒಂದು ಭಾಗ, ಸುಮ್ಮನೆ ಸ್ಲಮ್‌ಗೆ ಭೇಟಿ ಕೊಟ್ಟು, ಕೆಲವು ಫೋಟೊಗಳನ್ನು ತೆಗೆದುಕೊಂಡು ಹೋಗಿ ಫೇಸ್ ಬುಕ್ ಗೆ ಹಾಕಿಬಿಟ್ಟರೆ ಏನೂ ಗೊತ್ತಾಗುವುದಿಲ್ಲ, ಈ ನಗರದ ಅಸಮಾನತೆಗಳನ್ನು ಯಾರಾದಾರೂ ಅರ್ಥಮಾಡಿಕೊಳ್ಳಲು ಬಯಸಿದಲ್ಲಿ ಅವರು ಇಲ್ಲಿಗೆ ಬಂದು ಇರಬೇಕು’ ಅನ್ನುವುದು ಇವರ ಅಭಿಪ್ರಾಯ. ರಾತ್ರಿಯೊಂದಕ್ಕೆ 2 ಸಾವಿರ ರೂಪಾಯಿ ಕೊಡುವ ಪ್ರವಾಸಿಗನಿಗೆ, ಸ್ಲಮ್‌ನಲ್ಲಿನ ಮನೆಯೊಂದರ ಅಟ್ಟದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗುತ್ತದಂತೆ. ಅಲ್ಲಿ ಹೊಸ ಹಾಸಿಗೆ, ಟಿವಿ ಮತ್ತು ಏರ್‌  ಕಂಡಿಷನರ್ ಇರುತ್ತದಂತೆ. ಇವೆಲ್ಲ ಸೌಲಭ್ಯಗಳು, ಈ ಸ್ಲಮ್‌ ನಿವಾಸಿಗಳಿಗೆ ಸಿಗದೇ ಇರುವ ಐಶಾರಾಮಿ ವ್ಯವಸ್ಥೆಗಳು. ಆದರೆ, ಇಲ್ಲಿ ಉಳಿದುಕೊಳ್ಳುವ ಅತಿಥಿ, ಇತರೆ 50 ಕುಟುಂಬಗಳು ಬಳಸುವ ಸಾರ್ವಜನಿಕ ಶೌಚಾಲಯವನ್ನೇ ಬಳಸಬೇಕು. ಪ್ರವಾಸಿಗರು ಕೊಡುವ ಹಣ, ಯಾವ ಮನೆಯಲ್ಲಿ ಅವರು ಉಳಿದುಕೊಂಡಿರುತ್ತಾರೋ ಆ ಮನೆಯವರಿಗೇ ಸಿಗುತ್ತದಂತೆ.

ಪ್ರವಾಸಿಗರಿಗೆ ಸ್ಲಮ್ ದರ್ಶನ ಮಾಡಿಸಿ, ಅಲ್ಲಿನ ಕೊಳಕು, ಬಡತನ, ಅಪರಾಧಗಳು, ಜನ ಜೀವನದ ವೈವಿಧ್ಯತೆ ಇತ್ಯಾದಿಗಳ ಅನುಭವ  ಕಟ್ಟಿಕೊಡುವ ಈ ಚಿಂತನೆ, ಒಳ್ಳೆಯದು ಎಂದು ಕೆಲವರು ಪ್ರಶಂಸೆ ಮಾಡಿದ್ದಾರೆ. ಆದರೆ, ಇದು ಶೋಷಣೆಗೆ ಮತ್ತು ಅಗೌರವಕ್ಕೆ ಕಾರಣವಾಗುತ್ತದೆ. ಯಾರೋ ಬಂದು ನೋಡಿಕೊಂಡು ಹೋಗಲು ಸ್ಲಮ್ ನಿವಾಸಿಗಳು ಮ್ಯೂಸಿಯಮ್ ನಲ್ಲಿರುವ ಪ್ರಾಣಿಗಳಲ್ಲ, ಇವರೆಲ್ಲರೂ ನೈಜ ಬದುಕನ್ನು ಬದುಕುತ್ತಿರುವ ಸಮುದಾಯದ ಜನರು, ಹೀಗಾಗಿ ಇಂಥದ್ದರ ಅಗತ್ಯವಿಲ್ಲ ಎಂಬ ಟೀಕೆಗಳೂ ಕೂಡ ಕೇಳಿ ಬಂದಿವೆ.


ಸಂಬಂಧಿತ ಟ್ಯಾಗ್ಗಳು

Mumbai slum Resort ಮಹಾನಗರ ರಾಜಧಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ