ಸತತ 3ನೇ ಬಾರಿಯೂ ಕರ್ನಾಟಕಕ್ಕೆ ಲಭಿಸಿದ ರಾಷ್ಟ್ರೀಯ ಇ-ಪುರಸ್ಕಾರ್ ಪ್ರಶಸ್ತಿ

Kannada News

24-04-2017 376

ಲಖನೌ - 24: ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಮೂಲಕ ಪಂಚಾಯ್ತಿತಿಗಳ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯಗಳು ಮಾಡಿರುವ ಉನ್ನತ ಪ್ರಯತ್ನಗಳನ್ನು ಗುರುತಿಸಿ, ಪಂಚಾಯಿತಿ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆಯ ಆಧಾರದ ಮೇಲೆ ನೀಡಲಾಗುವ ರಾಷ್ಟ್ರೀಯ ಇ-ಪುರಸ್ಕಾರ್ ಪ್ರಶಸ್ತಿಯನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದ ಅಂಗವಾಗಿ ಕೇಂದ್ರ ಸರ್ಕಾರದ ವತಿಯಿಂದ ಇಂದು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಎಚ್.ಕೆ.ಪಾಟೀಲ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕಾದೇವಿಯವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅನುಪಸ್ಥಿತಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ರವರು ಪ್ರದಾನ ಮಾಡಿದರು. 
ಒಂದೇ ಸರ್ಕಾರದ ಅವಧಿಯಲ್ಲಿ ಸತತವಾಗಿ ಮೂರನೇ ಬಾರಿ ಈ ಪ್ರಶಸ್ತಿಗೆ ಬಾಜೀನರಾಗಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  ಹ್ಯಾಟ್ರಿಕ್ ಸಾಧಿಸಿದೆ. ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಿದ ಸಂವಿಧಾನದ 73ನೇ ತಿದ್ದುಪಡಿ ಅಂಗೀಕಾರವಾದ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ರಾಷ್ಟ್ರದಲ್ಲಿ 2,48,160  ಗ್ರಾಮ ಪಂಚಾಯತಿಗಳಿದ್ದು, 6284 ತಾಲ್ಲೂಕ ಪಂಚಾಯಿತಿ ಮತ್ತು 595  ಜಿಲ್ಲಾ ಪಂಚಾಯಿತಿಗಳು  ಕಾರ್ಯನಿರ್ವಹಿಸುತ್ತಿವೆ.  ಈ ಸಂಸ್ಥೆಗಳ ವಿವಿಧ ಕಾರ್ಯ ನಿರ್ವಹಣೆ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು  ನೀಡಲಾಗುತ್ತದೆ.   
      ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಅಭಿವ್ರದ್ದಿ ಪಡಿಸಿ ಕಳೆದ 3 ½ ವರ್ಷಗಳಿಂದ  ಅನುಷ್ಠಾನಗೊಳಿಸುತ್ತಿರುವ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಮಹತ್ವ ಕಾರ್ಯತತ್ಪರತೆ ಮತ್ತು ದಕ್ಷತೆಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಿದೆ.  ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಆರೋಹಣ ಮಾಡದೇ ಈಗ ಯಾವುದೇ ಬಿಲ್ಲುಗಳು ಪಾವತಿಯಾಗದ ವ್ಯವಸ್ಥೆ ಸೃಷ್ಟಿ ಮಾಡಿರುವುದರಿಂದ  ಕರ್ನಾಟಕ ಸರ್ಕಾರದ ಗ್ರಾಮೀಣಾಭಿವ್ರದ್ದಿ ಮತ್ತು ಪಂಚಾಯತ್   ರಾಜ್ ಇಲಾಖೆ ಅತ್ಯಂತ ಹೆಚ್ಚು ಪಾರದರ್ಶಕ ವ್ಯವಸ್ಥೆಯನ್ನು ಹೊಂದಿರುವುದನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. 
  ಅದೂ ಅಲ್ಲದೇ  ಇದೇ ಸಂದರ್ಭದಲ್ಲಿ ನಾನಾಜಿ ದೇಶಮುಖ ರಾಷ್ಟ್ರಿಯ ಗೌರವ ಗ್ರಾಮ ಸಭಾ ಪುರಸ್ಕಾರಕ್ಕೆ  ಆಯ್ಕೆಯಾಗಿದ್ದ ಶಿವಮೊಗ್ಗ ಜಿಲ್ಲಾ ತೀರ್ಥಹಳ್ಳಿ ತಾಲೂಕಿನ ಮಳಿಗೆ ಗ್ರಾಮ ಪಂಚಾಯಿತಿಯ  ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು .  
    ದೀನದಯಾಳ್ ಪಂಚಾಯಿತಿ ಸಶಕ್ತಿಕರಣ  ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕ ಪಂಚಾಯಿತಿಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ,  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು  ಮತ್ತು ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಕೇಸರಮಡು ಗ್ರಾಮ ಪಂಚಾಯಿತಿ,  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ, ಗ್ರಾಮ ಪಂಚಾಯಿತಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಮತ್ತು ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿಗಳು ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿಯವರು  ಪ್ರಶಸ್ತಿಗಳನ್ನು ನೀಡಿ  ಗೌರವಿಸಿದರು.
     ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ಯ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೊಮರ್  ಮತ್ತು  ಕೇಂದ್ರ  ಕೃಷಿ ಮತ್ತು   ರೈತ ಕಲ್ಯಾಣ ಮತ್ತು ಪಂಚಾಯತ್ ರಾಜ್  ಸಚಿವರಾದ ಶ್ರಿ ಪುರಷೋತ್ತಮ ರೂಪಾಲ  ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಶ್ರೀ ಜಿತೇಂದ್ರ ಶಂಕರ ಮಾಥೋರ ಮತ್ತು ಎಲ್ಲಾ ರಾಜ್ಯಗಳಿಂದ  ಆಗಮಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯೆ ಸಚಿವರು ಹಾಗೂ ಕಾರ್ಯದರ್ಶಿಗಳು ಹಾಗೂ ಪ್ರಶಸ್ತಿ ಪುರಸ್ಕತ ಪಂಚಾಯತ್ ರಾಜ್ ಸಂಸ್ಥೆಗಳ  ಪ್ರತಿನಿಧಿಗಳು  ಸಮಾರಂಭದಲ್ಲಿ ಭಾಗವಹಿಸಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ