ಬಿಜೆಪಿ ವಿರುದ್ಧ ಇಕ್ಬಾಲ್ ಅನ್ಸಾರಿ ಕಿಡಿ

iqbal Ansari Blames BJP

29-01-2018

ಕೊಪ್ಪಳ: ಸುಳ್ಳು ಹೇಳೋದು, ಮೋಸ ಮಾಡೋದು, ಜನರ ದಾರಿ ತಪ್ಪಿಸುವುದನ್ನೇ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿಕೊಟ್ಟಿದ್ದಾರೆ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಅಮಿತ್ ಷಾ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿಂದು ಮಾತನಾಡಿದ ಅವರು, ಅಮಿತ್ ಷಾ ರಾಜ್ಯಕ್ಕೆ ಕಾಲಿಟ್ಟು ಹೋದ ಮೇಲೆ ಬಿಜೆಪಿಯವರು ದಂಗೆದ್ದು ಹಲ್ಲೆ ಮಾಡುತ್ತಿದ್ದಾರೆ, ಸುಮ್ಮನೆ ಗಲಾಟೆ ಮಾಡೋದು ಆರಂಭ ಮಾಡಿದ್ದಾರೆ ಎಂದು ದೂರಿದರು. ಬಿಜೆಪಿ ಕಾರ್ಯಕರ್ತರು ಎಂದರೆ ಗೂಂಡಾ ಕಾರ್ಯಕರ್ತರು, ಅವರಿಂದ ಗೂಂಡಾಯಿಸಂ ಜಾಸ್ತಿಯಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಅದಲ್ಲದೇ ಬಿಜೆಪಿಯವರು ಹಿಂದುತ್ವ ಕಾರ್ಡ್ ಹಿಡಿದು ನೀವು ಹೀಗೇ ಮಾಡಬೇಕೆಂದು ಒತ್ತಡ ಹಾಕುತ್ತಾರೆ, ಇಲ್ಲದಿದ್ದರೆ ಹೆದರಿಸುತ್ತಾರೆ ಎಂದ ಅವರು, ಗಂಗಾವತಿಯ ಬಿಜೆಪಿ ಮಾಜಿ ಶಾಸಕ ಪರಣ್ಣ ಮುನವಳ್ಳಿಯ ಗೂಂಡಾ ಕಾರ್ಯಕರ್ತರು ಪೊಲೀಸನ್ನೇ ಹೆದರಿಸುತ್ತಾರೆ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಬಿಡುವದಿಲ್ಲ, ನಾವು ಹೇಳಿದ ಹಾಗೆ ಕೇಳದಿದ್ದರೇ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು, ಹೆದರಿಸುತ್ತಾರೆ ಎಂದು ಮಾಜಿ ಶಾಸಕನ ವಿರುದ್ಧ ಆರೋಪಿಸಿದ್ದಾರೆ.

ಇನ್ನು ಧ್ವಜ ಕಟ್ಟುವ ವಿಷಯದಲ್ಲಿ ಬಿಜೆಪಿ ಗೂಂಡಾ ಕಾರ್ಯಕರ್ತರು ದಾಂಧಲೆ ಮಾಡಿದರು,  ಧ್ವಜ ಕಟ್ಟುವ ವಿಚಾರದಲ್ಲಿ ಬಿಜೆಪಿ, ಆರ್.ಎಸ್.ಎಸ್, ಗಂಗಾವತಿಯಲ್ಲಿ ಈ ಹಿಂದೆ ಕೋಮುಗಲಭೆ ಸೃಷ್ಟಿ ಮಾಡಿದ್ದರು. ಹನುಮ ಜಯಂತಿ ವೇಳೆ ಮಚ್ಚು,ಲಾಂಗು,ಡೊಣ್ಣೆ, ಚಾಕುವಿನೊಂದಿಗೆ ಗೂಂಡಾಗಳನ್ನು ಕರೆತಂದರು ಎಂದು ಆರೋಪಿಸಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರಬೇಕೆಂಬ ದಾಹ, ಅಧಿಕಾರ ದಾಹಕ್ಕಾಗಿ ಕೋಮುಗಲಭೆ ಮಾಡಿಸುತ್ತಿದ್ದಾರೆ, ಖುರ್ಚಿ ಮೇಲೆ ಕುಳಿತು ಕೊಳ್ಳಲು ಕೋಮುಗಲಭೆ ಎಬ್ಬಿಸಿ ಕೊಲೆ ಮಾಡಿಸುತ್ತಿದ್ದಾರೆ, ಬಿಪಿಯವರು ಸಂವಿಧಾನ ಆಶಯಗಳಿಗೆ ನಡೆದುಕೊಳ್ಳುವವರಲ್ಲ ಎಂದು ದೂರಿದರು.


ಸಂಬಂಧಿತ ಟ್ಯಾಗ್ಗಳು

IQBAL ANSARI JDS ಮೋಸ ಗೂಂಡಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ