ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ಎಡವಿದ್ಯಾರು.. ?

Kannada News

24-04-2017 378

ಇತ್ತೀಚೆಗೆ ನಡೆದ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ರಾಜಕೀಯ ವಲಯದಲ್ಲಿ ಮಹಾಚುನಾವಣೆ ಎಂದೇ ಗುರುತಿಸಲ್ಪಡುತ್ತಿದೆ. ಅದರಲ್ಲೂ ನಂಜನಗೂಡು ಚುನಾವಣೆಯನ್ನಂತೂ ಚುನಾವಣೆಗಳ ಚುನಾವಣೆ ಎಂದೇ ಕರೆಯಲಾಗುತ್ತಿದೆ.

ಈ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಿಂದ ಬೀಗುತ್ತಿದೆ. ಬಿಜೆಪಿ ಸೋಲಿನಿಂದ ತತ್ತರಿಸುತ್ತಿದೆ. ಕಾಂಗ್ರೆಸ್‍ನಲ್ಲಿ ಗೆಲುವಿಗೆ ಯಾರು ಕಾರಣ ಎಂಬ ಚರ್ಚೆ-ವಿಶ್ಲೇಷಣೆ ನಡೆಯುತ್ತಿರುವ ಬೆನ್ನಲ್ಲೇ ತಮ್ಮಿಂದಾಗಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆವು. ನಾನೇ ಗೆಲುವಿಗೆ ಕಾರಣ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುವರ ಸಂಖ್ಯೆಯೂ ದೊಡ್ಡದಾಗಿದೆ.

ಇವೆಲ್ಲದರ ನಡುವೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಇದು ಸರ್ಕಾರದ ಸಾಧನೆಗೆ ಸಂದ ಗೆಲುವು ಎಂದು ಸಿಎಂ ಗೆಲುವನ್ನು ಸಾಮೂಹಿಕ ನಾಯಕತ್ವಕ್ಕೆ ಅರ್ಪಿಸಿದರೆ ಮತ್ತೆ ಕೆಲವರು ಈ ಗೆಲುವು ಸಿಎಂ ನಾಯಕತ್ವಕ್ಕೆ ಸಂದ ಗೆಲುವು ಎನ್ನುತ್ತಿದ್ದಾರೆ.

ಮತ್ತೊಂದೆಡೆ ಇದು ಮತದಾರರು ನೀಡಿದ ಆಶೀರ್ವಾದ ಇದರಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಈ ಗೆಲುವಿನ ಸಂಭ್ರಮದಿಂದ ಯಾರೂ ಬೀಗಬೇಕಾಗಿಲ್ಲ ಎರಡು ಚುನಾವಣೆ ಗೆದ್ದ ಮಾತ್ರಕ್ಕೆ ಮತ್ತೆ ಅಧಿಕಾರಕ್ಕೆ ಬಂದಂತೆ ಅಲ್ಲ. ಹೀಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯತ್ತ ನಮ್ಮ ಗಮನಹರಿಸುವುದು ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಫರ್ಮಾನು ಹೊರಡಿಸಿದ್ದಾರೆ. ಇಂತಹ ಸ್ವಯಂ ಘೋಷಣೆ, ಫರ್ಮಾನುಗಳೇನೆ ಇರಲಿ ಇಡೀ ಚುನಾವಣೆ ಗಮನಿಸಿದಾಗ ಇಲ್ಲಿ ಗೆದ್ದಿರುವುದು ಮತದಾರ ಮತ್ತು ಮತದಾರನೊಂದಿಗೆ ಸತತ ಒಡನಾಟವಿರುವ ವ್ಯಕ್ತಿತ್ವ.

ಗುಂಡ್ಲು ಪೇಟೆ ವಿಧಾನಸಭಾ ಉಪಚುನಾವಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದೊಂದು ಅನಿರೀಕ್ಷಿತ ಬೆಳವಣಿಗೆ ಯಾರೂ ಬಯಸಿರಲಿಲ್ಲ. ಅನಿರೀಕ್ಷಿತವಾಗಿ ಬಂದೆರಗಿದ ಈ ಚುನಾವಣೆ ರಾಜಕೀಯದಿಂದಾಗಿ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ನಂಜನಗೂಡು ವಿಧಾನಸಭೆ ಉಪಚುನಾವಣೆ ಈ ರೀತಿ ಅಲ್ಲ. ಮಂತ್ರಿ ಮಂಡಲ ವಿಸ್ತರಣೆ ಸಮಯದಲ್ಲಿ ತಮ್ಮನ್ನು ಸಂಪುಟದಿಂದ ಕೈಬಿಟ್ಟ ಕ್ರಮ ಪ್ರತಿಭಟಿಸಿ ಮುಖ್ಯಮಂತ್ರಿ ವಿರುದ್ಧ ಸಮರ ಘೋಷಿಸಿದ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿ ಚುನಾವಣೆಗೆ ಸ್ಪರ್ಧಿಸಿದರು. ಇದು ತಮ್ಮ ಸ್ವಾಭಿಮಾನದ ಪ್ರಶ್ನೆ, ಮಂತ್ರಿ ಮಂಡಲದಿಂದ ಕೈ ಬಿಡುವಾಗ ಸೌಜನ್ಯಕ್ಕಾಗಿ ಒಂದು ಮಾತು ಹೇಳದೆ ನಿರ್ಧಾರ ಕೈಗೊಂಡ ಪರಿಣಾಮ ತಮಗೆ ಅಪಮಾನವಾಗಿದೆ. ಹಿರಿತನವನ್ನೂ ಲೆಕ್ಕಿಸದೇ ಕೈಗೊಂಡ ತೀರ್ಮಾನ ಬೇಸರ ತಂದಿದೆ. ಇದು ತಮಗೆ ಮಾಡಿದ ಅಪಮಾನವಲ್ಲ, ಇಡೀ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ ಎಂದು ಬಣ್ಣಿಸಿದರು

ಇನ್ನೆಂದೂ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ತಾವು ಮೊದಲೇ ಮಾಡಿದ್ದ ತೀರ್ಮಾನ, ಆದರೆ ಸಂಪುಟ ಪುನಾರಚನೆ ವೇಳೆ ತಮ್ಮ ಹಿರಿತನವನ್ನು ಗೌರವಿಸದೆ ಸಿಎಂ ಮಾಡಿದ ಅಪಮಾನದಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇದಕ್ಕೆ ಉತ್ತರ ನೀಡಲು ಈ ಬಾರಿ ಚುನಾವಣೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.

ಶ್ರೀನಿವಾಸ್‍ಪ್ರಸಾದ್ ಹಳೆ ಮೈಸೂರು ಪ್ರಾಂತ್ಯದಲ್ಲಿ ಪ್ರಭಾವಿ ನಾಯಕ, ಅದರಲ್ಲೂ ದಲಿತ ಸಮುದಾಯದ ದೊಡ್ಡ ನಾಯಕ, ಸತತವಾಗಿ ಐದು ಬಾರಿ ಸಂಸತ್‍ಗೆ ಆಯ್ಕೆಯಾಗಿ ಕೇಂದ್ರ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರೂ ಒಂದು ಸಣ್ಣ ಭ್ರಷ್ಟಾಚಾರದ ಆರೋಪವೂ ಇವರ ಮೇಲಿರಲಿಲ್ಲ. ತತ್ವನಿಷ್ಠೆ , ಸಿದ್ಧಾಂತವನ್ನು ಬಿಟ್ಟುಕೊಡದ ಇಂತಹ ನಾಯಕ ತಮ್ಮ ಪಕ್ಷಕ್ಕೆ ಬಂದರೆ ದೊಡ್ಡ ಶಕ್ತಿ ಎಂದು ಭಾವಿಸಿದ ಬಿಜೆಪಿ ನಾಯಕರು ಇವರನ್ನು ಸಂಭ್ರಮದಿಂದ ಪಕ್ಷಕ್ಕೆ ಬರಮಾಡಿಕೊಂಡರು. ಅಷ್ಟೇ ಅಲ್ಲ ಉಪಚುನಾವಣೆಯನ್ನು ಸಂಪೂರ್ಣ ತಾವೇ ನಿರ್ವಹಣೆ ಮಾಡುವ ಘೋಷಣೆ ಮಾಡಿದರು.

ಶ್ರೀನಿವಾಸ್ ಪ್ರಸಾದ್ ನಂಜನಗೂಡು ಪ್ರಾಂತ್ಯದ ಒಟ್ಟು ಪ್ರಭಾವಿ ನಾಯಕ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗಲೂ ಕ್ಷೇತ್ರದ ಜನತೆ ಅವರನ್ನು ಬೆಂಬಲಿಸಿದ್ದರು. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಇವರು ಜನಪ್ರಿಯ. ಇನ್ನು ದಲಿತ ಸಮುದಾಯವಂತೂ ಹಲವು ಕಾಲದಿಂದ ಇವರ ಬೆನ್ನಿಗೆ ನಿಂತಿದೆ. ಇಂತವರು ತಮ್ಮ ಪಕ್ಷಕ್ಕೆ ಬಂದರೆ ದಲಿತ ಸಮುದಾಯದ ಬೆಂಬಲ ತನ್ನಿಂತಾನೇ ಸಿಗಲಿದೆ. ಇದರೊಂದಿಗೆ ರಾಜ್ಯದಲ್ಲಿ ಲಿಂಗಾಯಿತ ಮತ್ತು ದಲಿತ ಸಮೀಕರಣದೊಂದಿಗೆ ಯಶಸ್ಸು ಗಳಿಸಬಹುದು ಎಂದು ಭಾವಿಸಿದ್ದರು.

ಆದರೆ, ಚುನಾವಣೆಯ ಲೆಕ್ಕಾಚಾರವೇ ಬೇರೆ, ಫಲಿತಾಂಶವೇ ಬೇರೆ ಎನ್ನುವುದನ್ನು ಈ ಚುನಾವಣೆ ಸಾಬೀತು ಪಡಿಸಿದೆ. ಸೋಲು ಗೆಲುವಿನ ಬಗ್ಗೆ ನಾಯಕರು ಮತ್ತು ರಾಜಕೀಯ ಪಕ್ಷಗಳ ವಿಶ್ಲೇಷಣೆ ಅಭಿಪ್ರಾಯ ಏನೇ ಇರಲಿ ನಂಜನಗೂಡು ಫಲಿತಾಂಶವನ್ನು ಅವಲೋಕಿಸುವಾಗ ಗೋಚರಿಸುವ ಸತ್ಯವೇ ಬೇರೆ.

ನಂಜನಗೂಡು ಉಪಚುನಾವಣೆ ಅಖಾಡ ಸಜ್ಜುಗೊಂಡಾಗಲೇ ಕಳಲೆ ಕೇಶವ ಮೂರ್ತಿ ಹೆಸರು ಚಲಾವಣೆಗೆ ಬಂದಿದ್ದು. ಎಲ್ಲರೂ ಈ ಕಳಲೆ ಕೇಶವ ಮೂರ್ತಿ ಹರಕೆಯ ಕುರಿ ಎಂದೇ ಭಾವಿಸಿದ್ದರು. ಕಾಂಗ್ರೆಸ್‍ನಲ್ಲಿ ಸಚಿವ ಮಹಾದೇವಪ್ಪ ಅವರ ಪುತ್ರ ಸುನೀಲ್‍ಬೋಸ್ ಆದಿಯಾಗಿ ಯಾರೂ ಹರಕೆಯ ಕುರಿ ಆಗಲು ಸಿದ್ಧರಿಲ್ಲದ ಪರಿಣಾಮ ಜೆಡಿಎಸ್‍ನಿಂದ ಕಳಲೆ ಕೇಶವಮೂರ್ತಿ ಅವರನ್ನು ಕರೆತಂದು ಹರಕೆಯ ಕುರಿಯಾಗಿ ಮಾಡಲಾಗುತ್ತಿದೆ ಎಂದೇ ವ್ಯಾಖ್ಯಾನ ಮಾಡುತ್ತಿದ್ದರು.

ಅದರಲ್ಲೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ವಿಶ್ವನಾಥ್ ಸೇರಿದಂತೆ ಹಲವರು ಕಳಲೆ ಕೇಶವಮೂರ್ತಿ ಅವರನ್ನು ಪಕ್ಷಕ್ಕೆ ಕರೆತಂದು ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ಧ ಹೀನಾಯ ಶಬ್ದ ಬಳಸಿ ಟೀಕೆ ಮಾಡಿದ್ದರು. ವಿಶ್ವನಾಥ್ ಅವರ ಈ ಟೀಕೆಗೆ ಕಾಂಗ್ರೆಸ್‍ನಲ್ಲಿಯ ಹಲವು ನಾಯಕರು ಸಹಮತ ವ್ಯಕ್ತಪಡಿಸಿದರೆ, ಮಾಜಿ ಸಂಸದರೊಬ್ಬರು ತಮ್ಮ ಪಕ್ಷದ ಅಭ್ಯರ್ಥಿಯ ಬಗ್ಗೆ ಈ ರೀತಿ ಮಾತನಾಡುತ್ತಾರೆಂದರೆ ಅಲ್ಲಿಗೆ ನಂಜನಗೂಡಿನಲ್ಲಿ ಕಾಂಗ್ರೆಸ್‍ನ ಕಥೆ ಮುಗಿದಂತೆಯೇ ಎಂದರು. ಉಪಚುನಾವಣೆಯಲ್ಲಿ ಶ್ರೀನಿವಾಸ್‍ಪ್ರಸಾದ್-ಯಡಿಯೂರಪ್ಪ ಎಂಬ ಜೋಡಿಯನ್ನು ಯಾರೂ ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದರೆ,  ಬಿಜೆಪಿ ನಾಯಕರಂತೂ ಗೆಲುವಿನ ಸಂಭ್ರಮ ಆಚರಿಸುವುದೊಂದೆ ಬಾಕಿ ಎಂಬಂತೆ ವರ್ತಿಸತೊಡಗಿದರು. ಆದರೆ ಕಳಲೆ ಕೇಶವಮೂರ್ತಿ ಇಂತಹ ಯಾವುದೇ ಟೀಕೆಗೆ ಪ್ರತಿಕ್ರಿಯಿಸದೇ ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇದ್ದು ಬಿಟ್ಟರು.

ಚುನಾವಣೆ ಮುಗಿದು ಇದೀಗ ಕಳಲೆ ಕೇಶವಮೂರ್ತಿ ಆಯ್ಕೆಯಾಗಿದ್ದಾರೆ. ಇಡೀ ದೇಶ ಗಮನಿಸಿದ ಈ ಚುನಾವಣೆಯಲ್ಲಿ ಅತ್ಯಂತ ಪ್ರಭಾವಿ ಮತ್ತು ಪ್ರಬಲ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಮಣಿಸಿದ ಈ ಕಳಲೆ ಕೇಶವಮೂರ್ತಿ ಯಾರು ಎಂದು ಎಲ್ಲರೂ ಕೇಳುವಂತಾಗಿದೆ.

ಶ್ರೀನಿವಾಸ್ ಪ್ರಸಾದ್ ಅವರನ್ನು ಮಣಿಸಿದ ಕಳಲೆ ಕೇಶವಮೂರ್ತಿ ಎಂಬ ವ್ಯಕ್ತಿ ರಾಜಕೀಯವಾಗಿ ಅನಾಮಧೇಯ. ಆದರೆ ನಂಜನಗೂಡು ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಕಳಲೆ ಕೇಶವಮೂರ್ತಿ ಎಂಬ ಹೆಸರು ಜನಜನಿತ ಕ್ಷೇತ್ರದಲ್ಲಿ ಯಾವುದೇ ಊರಿಗೆ ಹೋಗಿ ಕೇಳಿದರೂ ಹತ್ತಾರು ಮಂದಿ ತಮಗೆ ಕಳಲೆ ಕೇಶವಮೂರ್ತಿ ವ್ಯಯಕ್ತಿಕವಾಗಿ ಪರಿಚಯ ಎಂದು ಹೇಳಿ ಅವರ ಕುರಿತ ಹಲವಾರು ಸಂಗತಿಗಳನ್ನು ಹೇಳುತ್ತಾರೆ.

ನಂಜನಗೂಡಿನ ಕಳಲೆ ಗ್ರಾಮದ ಸಾಮಾನ್ಯ ರೈತ ಎಸ್.ನಂಜಯ್ಯನವರ ಮಗನಾಗಿ ಜನಿಸಿದ ಕಳಲೆ ಕೇಶವಮೂರ್ತಿ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡವರು. ಖ್ಯಾತ ಸಾಹಿತಿ ದೇವನೂರು ಮಹಾದೇವ, ಸಿದ್ದಲಿಂಗಯ್ಯ ಸೇರಿದಂತೆ ಹಲವರ ಪ್ರಭಾವಕ್ಕೆ ಒಳಗಾಗಿ ದಲಿತ ಸಂಘಟನೆಯಲ್ಲಿ ತೊಡಗಿದ್ದ ಅವರಿಗೆ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ವಿಚಾರಧಾರೆಯಲ್ಲಿ ಅಪಾರ ನಂಬಿಕೆ. ಹೀಗಾಗಿ ಈ ತತ್ವದ ಆಧಾರದಲ್ಲಿ ರಚನೆಯಾದ ಜನತಾ ಪರಿವಾರದಲ್ಲಿ ಗುರುತಿಸಿಕೊಂಡರು.

ಜನತಾ ಪರಿವಾರದಲ್ಲಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಿಂದಲೇ ಗುರುತಿಸಿಕೊಂಡಿದ್ದ ಕಳಲೆಪುರದ ಕೇಶವಮೂರ್ತಿ ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದರೂ ಇವರು ಮಾತ್ರ ಪಕ್ಷ ಮತ್ತು ತತ್ವ ನಿಷ್ಠೆಯನ್ನು ಬಿಡದೆ ಜೆಡಿಎಸ್‍ನಲ್ಲೇ ಗುರುತಿಸಿಕೊಂಡರು.

ಜೆಡಿಎಸ್‍ನಲ್ಲಿದ್ದರೂ ವಿವಿಧ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘಟನೆಗಳ ಜತೆ ಸತತ ಒಡನಾಟ ಹೊಂದಿದ್ದ ಕಳಲೆ ಕೇಶವಮೂರ್ತಿ 2008ರಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀನಿವಾಸ್ ಪ್ರಸಾದ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಗಮನ ಸೆಳೆದರು. ಆ ಚುನಾವಣೆಯಲ್ಲಿ ಪ್ರಸಾದ್ ಅವರಿಗೆ ಪ್ರಬಲ ಪೈಪೋಟಿ ನೀಡಿದ ಕಳಲೆ ಕೇವಲ 8 ಸಾವಿರದ 941 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಆಗ ರಾಜ್ಯಾದ್ಯಂತ ಜೆಡಿಎಸ್ ವಿರೋಧಿ ಅಲೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ವಂಚಿಸಿದ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಲಿಂಗಾಯಿತ ಸಮುದಾಯಕ್ಕೆ ಸೇರಿದ ಮತದಾರರು ಜೆಡಿಎಸ್ ವಿರುದ್ದ ಅಭಿಪ್ರಾಯ ಹೊಂದಿದ್ದರು. ಇಂತಹ ಸಮಯದಲ್ಲಿ ಲಿಂಗಾಯಿತರ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಇಷ್ಟೊಂದು ಮತಗಳನ್ನು ಪಡೆಯುವ ಮೂಲಕ ಕಳಲೆ ತಾವು ಕ್ಷೇತ್ರದಲ್ಲಿ ಹೊಂದಿರುವ ಜನಪ್ರಿಯತೆಯನ್ನು ಸಾಬೀತು ಪಡಿಸಿದರು.

2013ರಲ್ಲಿ ಮತ್ತೆ ಜೆಡಿಎಸ್‍ನಿಂದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸ್ಪರ್ಧಿಸಿದ್ದ ಕಳಲೆ ಈ ಬಾರಿ ಮತ್ತಷ್ಟು ಮತಗಳನ್ನು ಪಡೆದರು. ಈ ಅವಧಿಯಲ್ಲಿ ಮೈಸೂರು ಮತ್ತು ಸುತ್ತಮುತ್ತ ಸಿದ್ದರಾಮಯ್ಯ ಪರ ಅಲೆ ಬೀಸುತ್ತಿತ್ತು. ಸಿದ್ದರಾಮಯ್ಯ ಈ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮತದಾರರು ಭಾವಿಸಿ ಸಿದ್ದರಾಮಯ್ಯ ಪರವಾಗಿ ನಿಂತಿದ್ದರು. ಇನ್ನು ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕ ಶ್ರೀನಿವಾಸ್ ಪ್ರಸಾದ್ ಗೆದ್ದರೆ ಪ್ರಮುಖ ಖಾತೆಯೊಂದರ ಮಂತ್ರಿಯಾಗಬಹುದೆಂದು ನಂಜನಗೂಡಿನ ಮತದಾರರು ನಿರೀಕ್ಷಿಸಿದ್ದರು. ಮತ್ತೊಂದೆಡೆ ಲಿಂಗಾಯಿತರ ಮತಗಳನ್ನು ನಂಬಿಕೊಂಡು ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಇಂತಹ ಸಮಯದಲ್ಲಿ ಕಳಲೆ ವರ್ಚಸ್ಸು ಚುನಾವಣೆಯಲ್ಲಿ ಕೆಲಸ ಮಾಡಿತ್ತು. 2008ರ ಚುನಾವಣೆಗಿಂತಲೂ ಹೆಚ್ಚಿನ ಮತಗಳನ್ನು ಗಳಿಸಿದ ಕಳಲೆ ಕೆಲವೇ ಮತಗಳ ಅಂತರದಲ್ಲಿ ಶ್ರೀನಿವಾಸ್ ಪ್ರಸಾದ್ ಎದುರು ಸೋಲು ಕಂಡಿದ್ದರು.

ವಿವಿಧ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದ ಕಳಲೆ ಅವರಿಗೆ ಸೋಲು ಧೃತಿ ಗೆಡಿಸಲಿಲ್ಲ. ಅವಿವಾಹಿತರಾಗಿರುವ ಅಂಧ ಹೃದಯದ ಈ ವ್ಯಕ್ತಿ ಸೋತ ನಂತರ ಒಂದು ದಿನವೂ ವಿರಮಿಸಲಿಲ್ಲ. ಎಂದಿನಂತೆ ಕ್ಷೇತ್ರದೆಲ್ಲಡೆ ಸಂಚಾರ, ಪಕ್ಷ ಸಂಘಟನೆಯ ಜೊತೆಗೆ ಜನಸಾಮಾನ್ಯರ ಅಗತ್ಯತೆಗಳಿಗೆ ತಕ್ಷಣವೇ ಸ್ಪಂಧಿಸುತ್ತಿದ್ದರು.

ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ, ಶಿಕ್ಷಣ ಇಲಾಖೆ ಹೀಗೆ ಯಾವ ಇಲಾಖೆಯಲ್ಲಿ ಕ್ಷೇತ್ರದ ಜನರಿಗೆ ಕೆಲಸದ ಅಗತ್ಯವಿದೆಯೋ ಆ ಕೆಲಸವನ್ನು ತಮ್ಮದೇ ಎಂದು ಭಾವಿಸಿ ಮಾಡುತ್ತಿದ್ದರು ಎಲ್ಲಿಯೂ ಹಣ ಮೊದಲಾದ ಆಮಿಷಗಳಿಗೆ ಬಲಿಯಾಗದೆ ನಿಸ್ವಾರ್ಥ ರೀತಿಯಲ್ಲಿ ಸೇವೆ ಮಾಡುತ್ತಿದ್ದ ಕಳಲೆ ಅವರನ್ನು ಕಂಡರೆ ಸರ್ಕಾರಿ ಅಧಿಕಾರಿಗಳಿಗೂ ಕೂಡಾ ಗೌರವದ ಭಾವನೆ. ಹೀಗಾಗಿ ಕಳಲೆ ಕೇಶವಮೂರ್ತಿ ಯಾವುದಾದರೂ ಕೆಲಸಕ್ಕೆ ಬಂದಿದ್ದಾರೆಂದು ತಿಳಿದರೆ ಅಧಿಕಾರಿಗಳು ಉಳಿದೆಲ್ಲಾ ಕೆಲಸವನ್ನು ಬಿಟ್ಟು ಅವರ ಕೆಲಸ ಮಾಡುತ್ತಿದ್ದರು. ಇದು ಕಳಲೆಯವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತು. ಇನ್ನು ಶ್ರೀನಿವಾಸ್ ಪ್ರಸಾದ್ ಮಂತ್ರಿಯಾದ ನಂತರ ಒಡಾಟ ಇನ್ನೂ ಹೆಚ್ಚಿತು. ಇನ್ನು ಶ್ರೀನಿವಾಸ್ ಪ್ರಸಾದ್ ಅವರ ಅನಾರೋಗ್ಯ ಸಮಸ್ಯೆಯಿಂದಾಗಿ ಮತದಾರರಿಂದ ಕೊಂಚ ದೂರವೇ ಆದರು. ಇದರಿಂದ ಲಾಭ ಪಡೆದವರು ಕಳಲೆ ಕೇಶವಮೂರ್ತಿ.

 ಶ್ರೀನಿವಾಸ್ ಪ್ರಸಾದ್ ಅವರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟ ನಂತರ ಅವರು ಸಿಎಂ ವಿರುದ್ಧ ಸಮರ ಘೋಷಣೆ ಮಾಡಿದರು. ಈ ಮೂಲಕ ಅವರು ಕಾಂಗ್ರೆಸ್‍ನಲ್ಲಿ ಹೆಚ್ಚು ದಿನ ಇರುವುದಿಲ್ಲ. ಶಾಸಕ ಸ್ಥಾನಕ್ಕೆ ಗುಡ್‍ಬೈ ಹೇಳುತ್ತೇವೆ ಹೀಗಾಗಿ ಉಪಚುನಾವಣೆ ಖಚಿತ ಎಂದು ಭಾವಿಸಿದ ಮಂತ್ರಿ ಮಹಾದೇವಪ್ಪ ಕ್ಷೇತ್ರದ ಮೇಲೆ ಕಣ್ಣಿಟ್ಟರು. ತಮ್ಮ ಮಗ ಸುನಿಲ್ ಬೋಸ್ ಅವರನ್ನು ಇಲ್ಲಿಂದ ಆಯ್ಕೆ ಮಾಡಿಸಬೇಕೆಂದು ಪ್ರಯತ್ನ ಆರಂಭಿಸಿದರು. ತಂದೆಯ ಇಚ್ಚೆಯಂತೆ ಸುನಿಲ್ ಬೋಸ್ ನಂಜನಗೂಡಿನಲ್ಲೇ ಠಿಕಾಣಿ ಹೂಡಿ ಕಾರ್ಯಕರ್ತರ ಸಭೆ ನಡೆಸಿದರು. ಮಂತ್ರಿ ಮಹಾದೇವಪ್ಪ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಮಗನಿಗಾಗಿ ರಾಜಕೀಯ ಭೂಮಿಕೆ ಸಿದ್ದಪಡಿಸಿದರು.

ನಿರೀಕ್ಷೆಯಂತೆ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದರು ಸ್ವಾಭಿಮಾನ ಎಂಬ ವಿಷಯ ಇಟ್ಟುಕೊಂಡು ಚುನಾವಣೆ ಎದರುರಿಸಲು ಸಿದ್ಧತೆ ನಡೆಸಿದರು. ಆರಂಭದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದ ಅವರಿಗೆ ಸಚಿವ ಮಹಾದೇವಪ್ಪ ಮತ್ತವರ ಪುತ್ರ ಸುನಿಲ್ ಬೋಸ್ ನೀಡಿದ ಹೊಡೆತ ತತ್ತರಿಸುವಂತೆ ಮಾಡಿತು.

ತಾವು ಪಕ್ಷೇತರರಾಗಿ ಉಳಿದರೆ ಅಪ್ಪ-ಮಗನ ಅಲೆಯಲ್ಲಿ ಕೊಚ್ಚಿ ಹೋಗುತ್ತೇನೆಂದು ಭಾವಿಸಿ ರಾಜಕೀಯ ಪಕ್ಷವೊಂದರ ಜತೆ ಗುರುತಿಸಿಕೊಳ್ಳಲು ಮುಂದಾದರು. ಈ ಸೂಚನೆಯನ್ನರಿತ ಜೆಡಿಎಸ್ ನಾಯಕರು ಪ್ರಸಾದ್ ಅವರನ್ನು ಸಂಪರ್ಕಿಸಿ ಪಕ್ಷ ಸೇರುವಂತೆ ದುಂಬಾಲು ಬಿಟ್ಟರು.  ಸ್ವತಃ ಕಳಲೆ ಕೇಶವಮೂರ್ತಿ ಅವರೇ ನಿಂತು ಶ್ರೀನಿವಾಸ್ ಪ್ರಸಾದ್ ಅವರನ್ನೂ ಪಕ್ಷಕ್ಕೆ ಆಹ್ವಾನಿಸುವ ಮೂಲಕ ಗಮನ ಸೆಳೆದರು, ಅಷ್ಟೇ ಅಲ್ಲ ಪ್ರಸಾದ್ ಅವರನ್ನು ಜೆಡಿಎಸ್‍ನ ಹಲವು ನಾಯಕರು ಭೇಟಿಯಾಗುವಂತೆ ಮಾಡಿದರು.

ಆದರೆ ಈ ಹಿಂದೆ ಆದ ಕೆಲ ಅನುಭವ ಸೇರಿ ಹಲವು ಕಾರಣಗಳಿಂದ ಪ್ರಸಾದ್ ಜೆಡಿಎಸ್ ಸೇರಲು ಉತ್ಸುಕತೆ ತೋರಲಿಲ್ಲ. ಆದರೂ ಪಟ್ಟು ಬಿಡದ ಜೆಡಿಎಸ್ ನಾಯಕರು ಪ್ರಸಾದ್ ಪಕ್ಷೇತರರಾಗಿ ಕಣಕ್ಕಿಳಿದರೆ ಬೆಂಬಲ ನೀಡುವ ಘೋಷಣೆ ಮಾಡಿದರು. ಇದನ್ನು ಪರಿಗಣಿಸದ ಪ್ರಸಾದ್ ಬಿಜೆಪಿ ಸೇರ್ಪಡೆಯಾಗುವ ಮೂಲಕ ಹೊಸ ಲೆಕ್ಕಾಚಾರದೊಂದಿಗೆ ಅಖಾಡಕ್ಕಿಳಿಯಲು ಸಜ್ಜಾದರು. ಬಿಜೆಪಿ ಸಹ ಇವರ ಲೆಕ್ಕಾಚಾರಕ್ಕೆ ಸರಿಯಾಗಿ ಕೆಲಸ ಆರಂಭಿಸುವ ಮೂಲಕ ನಂಜನಗೂಡು ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತು.

ಇಂತಹ ಪ್ರತಿಷ್ಠೆಯನ್ನು ಗೆಲ್ಲುವುದು ಸಿಎಂಗೆ ಅತಿ ಮುಖ್ಯವಾಯಿತು. ಹೀಗಾಗಿ ಮೊದಲ ಹಂತದಲ್ಲಿ ಸಚಿವ ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಕಣದಿಂದ ಹೊರಬಿದ್ದರು. ಬಿಗ್ ಫೈಟ್ ನೀಡುವ ಅಭ್ಯರ್ಥಿಗಾಗಿ ಹುಡುಕಿದ ಸಿಎಂಗೆ ಗೋಚರಿಸಿದ್ದು ಸಂಸದ ಧ್ರುವ ನಾರಾಯಣ ಆದರೆ ಅವರು ಕೂಡ ತಮ್ಮ ರಾಜಕೀಯ ಗುರುವಿನ ಎದುರು ಸ್ಪರ್ಧಿಸಲು ನಿರಾಕರಿಸಿದರು. ಆಗ ಸಿಎಂ ಬಿಜೆಪಿಯಲ್ಲಿರುವ ಮತ್ತೊಬ್ಬ ನಾಯಕ ಎ.ಆರ್. ಕೃಷ್ಣ ಮೂರ್ತಿ ಅವರನ್ನು ಕಾಂಗ್ರೆಸ್‍ಗೆ ಕರೆತರುವ ಯತ್ನ ನಡೆಸಿದರು.

ಇದರ ನಡುವೆ ಗುಪ್ತದಳ ಸಮೀಕ್ಷಾ ವರದಿಯೊಂದನ್ನು ನೀಡಿತು. ಅದರಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಮಣಿಸಲು ಕಳಲೆ ಕೇಶವಮೂರ್ತಿ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದನ್ನು ಆಧರಿಸಿ ಮತ್ತೆ ಸಿಎಂ ಖಾಸಗಿ ಸಂಸ್ಥೆಯೊಂದರಿಂದ ಸಮೀಕ್ಷೆ ನಡೆಸಿದರು. ಅದೂ ಕೂಡಾ ಇದೇ ರೀತಿಯ ವರದಿ ನೀಡಿತು. ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೆ ಮೂರ್ನಾಲ್ಕು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿದರು. ಎಲ್ಲಾ ವರದಿಗಳು ಕೂಡಾ ಕಳಲೆ ಕೇಶವಮೂರ್ತಿ ಸೂಕ್ತ ಆಯ್ಕೆ ಎಂದೇ ವರದಿ ನೀಡಿದ್ದವು.

ಈ ವರದಿಗಳನ್ನಾಧರಿಸಿ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‍ಗೆ ಕರೆತರಲು ಪ್ರಯತ್ನ ಆರಂಭಿಸಿದರು. ಆದರೆ ಪಕ್ಷಕ್ಕೆ ನಿಷ್ಠರಾಗಿದ್ದ ಕಳಲೆ ಜೆಡಿಎಸ್‍ನಿಂದಲೇ ಕಣಕ್ಕಿಳಿಯಲು ನಿರ್ಧರಿಸಿ ಪ್ರಯತ್ನ ಆರಂಭಿಸಿದ್ದರು. ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನೂ ಕೈಗೊಂಡಿದ್ದರು. ಶ್ರೀನಿವಾಸ್ ಪ್ರಸಾದ್ ಅಬ್ಬರದ ಸ್ವಾಭಿಮಾನಿ ಸಮಾವೇಶದ ಮೂಲಕ ಸಿಎಂ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸುತ್ತ ಮೋದಿ ಗುಣಗಾನ ಮಾಡುತ್ತಿದ್ದರೆ, ಕಳಲೆ ಸದ್ದಿಲ್ಲದೆ ಕ್ಷೇತ್ರದ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದರು.

ಚುನಾವಣೆ ಸ್ಪರ್ಧೆಯ ವಿಷಯಕ್ಕೆ ಬಂದಾಗ ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಿದರು ಶ್ರೀನಿವಾಸ್ ಪ್ರಸಾದ್ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಮಾಡುತ್ತಿರುವ ಹಣದ ಆರ್ಭಟ ಮತ್ತೊಂದೆಡೆ ಕಾಂಗ್ರೆಸ್ ಮಾಡುವ ಹಣದ ಲೆಕ್ಕ ಗಮನಿಸಿದರೆ ಜೆಡಿಎಸ್‍ನಿಂದ ಆ ಮೊತ್ತದ ಹಣ ಖರ್ಚು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೇಳಿಬಂತು. ಜೆಡಿಎಸ್‍ನಿಂದ ಅಲ್ಪ ಮೊತ್ತದ ಸಹಾಯ ಬಿಟ್ಟರೆ ಬೇರೇನೂ ಸಿಗುವುದಿಲ್ಲ ಎಲ್ಲವನ್ನೂ ನೀವೆ ಭರಿಸಬೇಕೆಂದು ನಾಯಕರು ಹೇಳಿದರು.

ಕಳಲೆ ಪುರದಲ್ಲಿ 4 ಎಕರೆ 37ಗುಂಟೆ ಕೃಷಿ ಭೂಮಿ, ಪೂರ್ವಿಕರಿಂದ ಬಂದ ಹೆಂಚಿನ ಮನೆ, ಮೈಸೂರಿನಲ್ಲಿ 40*60 ಅಡಿ ವಿಸ್ತೀರ್ಣದ ಮನೆಯೊಂದನ್ನು ಬಿಟ್ಟರೆ ಬೇರಾವುದೇ ಆಸ್ತಿ ಇಲ್ಲದ ಕೇಶವಮೂರ್ತಿ ಇಷ್ಟೊಂದು ಹಣ ಭರಿಸುವುದು ಹೇಗೆ ಎಂದು ಕೈಚೆಲ್ಲಿದರು. ಆಗ ಜೆಡಿಎಸ್ ನಾಯಕರು ಕೇವಲ ಒಂದು ವರ್ಷದ ಸದ್ಯತ್ವ ಇರುವ ಚುನಾವಣೆಗೆ ಸ್ಪರ್ಧಿಸಿ ಅಷ್ಟೊಂದು ಖರ್ಚು ಮಾಡುವ ಬದಲಿಗೆ ತಟಸ್ಥರಾಗಿ ಉಳಿಯುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದರು.

ಪಕ್ಷದ ನಾಯಕರು ಈ ರೀತಿ ಹೇಳಿದಾಗ ಶ್ರೀನಿವಾಸ್ ಪ್ರಸಾದ್ ಅವರನ್ನು ಚುನಾವಣೆಯಲ್ಲಿ ಮಣಿಸಬೇಕೆಂದಿದ್ದ ಕಳಲೆ ಬೇಸರಗೊಂಡರು. ಆದರೂ ಪಕ್ಷದ ನಿರ್ಧಾರ ಎಂದು ಸುಮ್ಮನಾದರು. ಆದರೆ ಸಿಎಂ ಮತ್ತವರ ತಂಡ ಕಳಲೆ ಅವರನ್ನು ಪಕ್ಷಕ್ಕೆ ತರುವ ಪ್ರಯತ್ನ ಮುಂದುವರೆಸಿತ್ತು. ಆದರೆ ಪಕ್ಷ ನಿಷ್ಠೆಯ ನಾಯಕ ಸುಲಭವಾಗಿ ಮಣಿಯಲಿಲ್ಲ. ಆಗ ತಂತ್ರಗಾರಿಕೆ ರೂಪಿಸಿದ್ದ ಸಿಎಂ ಮತ್ತವರ ತಂಡ ಬಿಜೆಪಿಯ ಅಭ್ಯರ್ಥಿ ಪ್ರಧಾನಿ ಮೋದಿಯ ಅಲೆಗೆ ಈ ಚುನಾಣೆಗೆ ಕಡಿವಾಣ ಹಾಕುವ ಪ್ರಯತ್ನ ಎಂಬಂತೆ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿದರು. ಹೊಸ ಲೆಕ್ಕಾಚಾರದೊಂದಿಗೆ ಕಳಲೆ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಇನ್ನು ಅಖಾಡದಲ್ಲಂತೂ ಬಿಜೆಪಿಯ ಅಧ್ಯಕ್ಷ ಯಡಿಯೂರಪ್ಪ ತೊಡೆ ತಟ್ಟುವುದು, ಶ್ರೀನಿವಾಸ್ ಪ್ರಸಾದ್ ಅಭ್ಯರ್ಥಿಯಾದರೂ ತಾನೇ ನಿಜವಾದ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಅಲೆ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯಿತ ಮತದಾರರನ್ನು ಸೆಳೆಯಲು ಯತ್ನಿಸಿದರು.

ಆದರೆ ದಲಿತ, ಲಿಂಗಾಯಿತ, ಹಿಂದುಳಿದ, ಒಕ್ಕಲಿಗ ಎಂಬಂತೆ ಯಾವುದೇ ಜಾತಿಯ ಜೊತೆ ಅವರು ಗುರುತಿಸಿಕೊಳ್ಳದೆ ಎಲ್ಲರೊಂದಿಗೆ ಸ್ನೇಹ ಸರಳತೆಯ ಮೂಲಕ ವಿಶೇಷ ಪ್ರೀತಿ, ಜನಮನ್ನಣೆ ಗಳಿಸಿದ್ದ ಕಳಲೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಯಡಿಯೂರಪ್ಪ ಅಬ್ಬರಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಅಬ್ಬರ ನಡೆಸಿದರೆ, ಕಳಲೆ ತಮ್ಮದೇ ಶೈಲಿಯಲ್ಲಿ ಮತ್ತೊಂದೆಡೆ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದರು. ಅಂತಿಮವಾಗಿ ಜನ ತಮ್ಮ ನಡುವೆ ಇರುವ ಸರಳ ಜೀವನದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಚುನಾವಣೆಯಲ್ಲಿ ಮತದಾರೇ ಪ್ರಭುಗಳೆಂಬುದನ್ನು ಸಾಬೀತು ಪಡಿಸಿದ್ದಾರೆ.

ಅಷ್ಟೇ ಅಲ್ಲ ಈ ಚುನಾವಣೆ ರಾಜಕೀಯ ಪಕ್ಷ ಮತ್ತು ಅದರ ನಾಯಕರಿಗೂ ಒಂದು ಪಾಠ ಕಲಿಸಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ಮತದಾರರನ್ನು ನೆನಪಿಸಿಕೊಳ್ಳುವ ವ್ಯಕ್ತಿಗಳನ್ನು ಎಲ್ಲ ಕಾಲಕ್ಕೂ ಪರಿಗಣಿಸುವುದಿಲ್ಲ, ಎಂತಹದೇ ಒತ್ತಡವಿರಲಿ ತಮ್ಮ ನೋವು ನಲಿವುಗಳಿಗೆ ಸದಾ ಸ್ಪಂದಿಸುವ ಒ ಎನ್ನುವ ತಮ್ಮ ಕರೆಗೆ ಒಗೂಡವ ನಾಯಕರಿಗೆ ತಮ್ಮ ಬೆಂಬಲ ಎನ್ನುವುದನ್ನ ಸಾಬೀತು ಪಡಿಸಿದ್ದಾರೆ.

ಆದರೆ ರಾಜಕೀಯ ಪಕ್ಷಗಳ ನಾಯಕರು ಆರೋಪಿಸುವಂತೆ ಇಲ್ಲಿ ಹಣದ ಪ್ರಭಾವ ಕೆಲಸ ಮಾಡಿಲ್ಲವೆ ಎಂಬ ಪ್ರಶ್ನೆ ಮಾಡಿದರು. ಸ್ಪರ್ಧೆಯಲ್ಲಿದ್ದ ಎರಡು ಪಕ್ಷಗಳು ಸೇರು ಸವ್ವಾಸೇರು ಎಂಬಂತೆ ಹಣದ ಹೊಳೆ ಹರಿಸಿದ್ದುದು ಮತದಾರರಿಗೆ ಬರಪೂರ ಕೊಡುಗೆಯೂ ಸಿಕ್ಕಿತು. ಆದರೂ ಇವರ ನಡುವೆ ಜನರಿಗೆ ಸ್ಪಂದಿಸುವ ವ್ಯಕ್ತಿಗೆ ಮನ್ನಣೆ ಸಿಕ್ಕಿರುವುದು ಕುತೂಹಲಕರ ಮತ್ತು ಗಮನಾರ್ಹ ಅಂಶ.

 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ