ಯುದ್ಧ ವಿಮಾನದಲ್ಲಿ ಶಕ್ತಿದೇವತೆಯರು!

India

25-01-2018

ಭಾರತೀಯ ಸೇನೆಯಲ್ಲಿ ಮಹಿಳೆಯರಿದ್ದರೂ ಕೂಡ ಅವರಿಗೆ ನೇರವಾಗಿ ಯುದ್ಧ ಭೂಮಿಯಲ್ಲಿ ಸೆಣೆಸುವಂಥ ಹೊಣೆಗಾರಿಕೆಯನ್ನು ಇಲ್ಲಿಯವರೆಗೂ ನೀಡಿಲ್ಲ. ಆದರೆ, ಇದೀಗ ಭಾರತದ ವಾಯುಪಡೆಯ ಮೂವರು ಸಿಂಹಿಣಿಯರು ಮಿಗ್ -21 ಫೈಟರ್ ವಿಮಾನಗಳನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದು, ಸದ್ಯದಲ್ಲೇ ಒಬ್ಬಂಟಿಯಾಗಿ ಫೈಟರ್ ವಿಮಾನ ಹಾರಿಸಿ ಇತಿಹಾಸ ನಿರ್ಮಿಸಲಿದ್ದಾರೆ.

ಅವನಿ ಚತುರ್ವೇದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಎಂಬ ಮೂವರು ಹೆಣ್ಣುಮಕ್ಕಳು, ಟೇಕಾಫ್ ಹಾಗೂ ಲ್ಯಾಂಡಿಂಗ್ ವೇಳೆ ಪ್ರತಿ ಗಂಟೆಗೆ  340 ಕಿಲೋಮೀಟರ್‌ ಗಳಿಗೂ ಹೆಚ್ಚು ವೇಗ ಹೊಂದಿರುವ ‘ಕಾಡುಕೋಣ’ ಎಂದೇ ಕರೆಯಲ್ಪಡುವ  ಮಿಗ್-21 ವಿಮಾನಗಳಲ್ಲಿ ಒಬ್ಬಂಟಿಯಾಗಿ ಕುಳಿತು ಸಮರಾಭ್ಯಾಸ ನಡೆಸಲಿದ್ದಾರೆ. ಆಕಾಶದಲ್ಲಿ ಹಾರುತ್ತಾ ಆಕಾಶದಲ್ಲೇ ಇರುವ ವೈರಿ ಜೊತೆ ಮತ್ತು ಭೂಮಿಯ ಮೇಲೆ ಇರುವ ವೈರಿ ಜೊತೆ ಸೆಣೆಸುವ ಕೌಶಲ್ಯವನ್ನು ಈ ಮಹಿಳೆಯರು ಕಲಿಯಲಿದ್ದಾರೆ.

ಇಲ್ಲಿಯವರೆಗೂ ಮಹಿಳೆಯರನ್ನು ಯುದ್ಧಭೂಮಿಯಿಂದ ಹೊರಗಿಟ್ಟಿದ್ದ ಭಾರತೀಯ ಸೇನೆ, ಇದೀಗ ಪ್ರಾಯೋಗಿಕವಾಗಿ ಈ ಹೆಣ್ಣುಮಕ್ಕಳನ್ನು ನೇಮಿಸಿಕೊಂಡು ಸಮರಕ್ಕೆ ಸಿದ್ಧಗೊಳಿಸುತ್ತಿದೆ. ಮೊದಲಿಗೆ 5 ವರ್ಷಗಳ ಕಾಲ ಇವರ ಸೇವೆಯನ್ನು ಬಳಸಿಕೊಳ್ಳುವ ಉದ್ದೇಶವಿದೆಯಂತೆ. ಒಬ್ಬ ಯುದ್ಧ ವಿಮಾನದ ಪೈಲಟ್‌ಗೆ ತರಬೇತಿ ನೀಡಲು ಸೇನೆಗೆ 15 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ತಗಲುತ್ತದೆ. ಆದರೆ, ಸೇನೆ ಸೇರುವ ಮಹಿಳೆಯರು ತರಬೇತಿ ಪಡೆದು ಕೆಲವೇ ವರ್ಷಗಳಲ್ಲಿ ಮದುವೆ ಮತ್ತು ಮಕ್ಕಳು ಎಂದು ಹೊರಟುಬಿಡುತ್ತಾರೆ ಅನ್ನುವುದು, ಹೆಣ್ಣು ಮಕ್ಕಳ ನೇಮಕದ ವಿರುದ್ಧ ಇದ್ದ ಒಂದು ಕಾರಣವಾಗಿತ್ತು.

ಇದಲ್ಲದೆ, ಮಹಿಳೆಯರನ್ನು ಯುದ್ಧಭೂಮಿಗೆ ಕಳಿಸುವ ವಿಚಾರದಲ್ಲಿ ದೇಶದ ಸಂಸ್ಕೃತಿಯನ್ನೂ ಪರಿಗಣಿಸಲಾಗುತ್ತದೆ. ಯುದ್ಧದ ಸಂದರ್ಭದಲ್ಲಿ, ಶತ್ರುಗಳು ಮಹಿಳಾ ಯೋಧರನ್ನು ಸೆರೆ ಹಿಡಿದು, ಚಿತ್ರಹಿಂಸೆ, ಅತ್ಯಾಚಾರದಂತ ದುಷ್ಟನಡವಳಿಕೆಗಳಿಗೆ ಗುರಿಮಾಡಿದರೆ ಅದನ್ನು ತಾಳಿಕೊಳ್ಳಲು ದೇಶಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕಾಗಿಯೂ ಅವರನ್ನು ಯುದ್ಧ ಭೂಮಿಗೆ ಕಳಿಸುವುದಿಲ್ಲ. ಇದೆಲ್ಲವೂ ಏನೇ ಇದ್ದರೂ ಇದೀಗ ಮೂವರು ಮಹಿಳೆಯರು, ಯುದ್ಧ ವಿಮಾನದಲ್ಲಿ ಶಕ್ತಿದೇವತೆಯರಂತೆ ಕುಳಿತು ವೈರಿಗಳನ್ನು ಸದೆಬಡಿಯಲು ಹೊರಡುತ್ತಾರೆ ಎನ್ನುವುದು ಇಡೀ ದೇಶಕ್ಕೆ ಹೆಮ್ಮೆಯ ವಿಚಾರ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ