ತಪ್ಪು ಮಾಡುವ ಹಕ್ಕು!24-01-2018

ಸಂವಿಧಾನ ನಮಗೆ ಕೆಲವು ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಅವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಸೇರಿವೆ. ಖಾಸಗಿತನವೂ ಮೂಲಭೂತ ಹಕ್ಕು ಎಂದು ಇತ್ತೀಚೆಗೆ ನಮ್ಮ ಸುಪ್ರೀಂಕೋರ್ಟ್ ಹೇಳಿದೆ.

ಆದರೆ, ಇದೀಗ ಫ್ರೆಂಚ್ ದೇಶದ ಸಂಸತ್ತು ತನ್ನ ನಾಗರಿಕರಿಗೆ ಒಂದು ವಿಶೇಷ ಹಕ್ಕನ್ನು ನೀಡಿದೆ. ತನ್ನ ಪ್ರಜೆಗಳಿಗೆ ತಪ್ಪು ಮಾಡುವ ಹಕ್ಕು ನೀಡಿದೆ. ಇದು, ಇಡೀ ಜಗತ್ತಿನ ನಾಗರಿಕರು ಖುಷಿ ಪಡಬಹುದಾದ ಹಕ್ಕು ಎಂದು ಹೇಳಬಹುದು.  ಆದರೆ, ತಪ್ಪು ಮಾಡುವ ಈ ಹಕ್ಕು, ಎಲ್ಲ ವಿಚಾರಗಳಿಗೂ ಅನ್ವಯವಾಗುವುದಿಲ್ಲ. ಇದು ಕೇವಲ ಅಲ್ಲಿನ ಸರ್ಕಾರದೊಂದಿಗೆ ನಾಗರಿಕರು ವ್ಯವಹರಿಸುವಾಗ ಮಾಡಬಹುದಾದ ಮೊದಲ ತಪ್ಪಿಗಷ್ಟೇ ಸೀಮಿತ. ಮೊದಲ ತಪ್ಪಿಗೆ ಯಾವುದೇ ಶಿಕ್ಷೆ ಇರುವುದಿಲ್ಲ. ಆದರೆ, ಎರಡನೆಯ ತಪ್ಪಿಗೆ ಶಿಕ್ಷೆ ಖಚಿತ. ಇನ್‌ಕಮ್ ಟ್ಯಾಕ್ಸ್ ಕಟ್ಟುವಾಗ, ಮಾಹಿತಿ ನೀಡುವಾಗ ಅಥವ ಸರ್ಕಾರದ ಜೊತೆಗಿನ ಇನ್ನು ಯಾವುದೇ  ವ್ಯವಹಾರದಲ್ಲಿ ತಪ್ಪು ಮಾಡಿದ್ದರೂ ಕೂಡ, ಮೊದಲ ಬಾರಿ ಮಾಫಿ.

ತಪ್ಪು ಮಾಡುವ ಹಕ್ಕು ಅನ್ನುವುದು, ‘ವಿಶ್ವಾಸಾರ್ಹ ಸಮಾಜದ ಸೇವೆಗೋಸ್ಕರ ಸರ್ಕಾರ ನೀಡುತ್ತಿರುವ ಕೊಡುಗೆ’ ಎಂದು ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ನೇತೃತ್ವದ ಫ್ರೆಂಚ್ ಸರ್ಕಾರ ಬಣ್ಣಿಸಿದೆ. ‘ಆಡಳಿತ ಮತ್ತು ಆಡಳಿತಕ್ಕೊಳಪಡುತ್ತಿರುವವರ ನಡುವಿನ ಸಂಬಂಧಗಳಲ್ಲಿ ಇದೊಂದು ಕ್ರಾಂತಿ’ ಎಂದೇ ವಿಶ್ಲೇಷಿಸಲಾಗಿದೆ. ಆದರೆ, ತಪ್ಪು ಮಾಡಿ ಬಚಾವಾಗುವ ಹಕ್ಕು, ಆರೋಗ್ಯ ಕ್ಷೇತ್ರಕ್ಕಂತೂ ಅನ್ವಯವಾಗುವುದಿಲ್ಲ.

‘ತಪ್ಪು ಮಾಡುವುದು ಮಾನವ ಸಹಜ, ಕ್ಷಮಿಸುವುದು ದೈವಿಕ’ ಅನ್ನುವ ಮಾತನ್ನು ಎಲ್ಲರೂ ಕೇಳಿದ್ದೇವೆ. ಹೀಗಾಗಿ, ಕ್ಷಮೆ ಅನ್ನುವುದು ಇರಬೇಕು. ಹೀಗೆಂದೇ ಫ್ರೆಂಚ್ ಸರ್ಕಾರ ತಪ್ಪು ಮಾಡುವ ಹಕ್ಕನ್ನು ಜಾರಿಗೆ ತಂದಿದೆ. ಆದರೆ, ಇಂಥದ್ದೊಂದು ತಪ್ಪು ಮಾಡುವ ಹಕ್ಕನ್ನು ಭಾರತದಲ್ಲಂತೂ ಜಾರಿಗೆ ತರುವ ಅಗತ್ಯವಿಲ್ಲವೆನ್ನಿಸುತ್ತದೆ. ಏಕೆಂದರೆ, ಹೆಚ್ಚಿನ ಭಾರತೀಯರಿಗೆ ತಪ್ಪು ಮಾಡಿ ತಪ್ಪಿಸಿಕೊಳ್ಳುವ ಕಲೆ ಚೆನ್ನಾಗಿ ಸಿದ್ಧಿಸಿದೆ. ಇದರ ಜೊತೆಗೆ, ಭಾರತೀಯರು ಒಂದು ಎರಡು ತಪ್ಪಿಗೆ ತಿದ್ದಿಕೊಳ್ಳುವಂಥರಂತೂ ಅಲ್ಲ. ಏಕೆಂದರೆ, ‘ತಪ್ಪು ಮಾಡುವುದು ನಮ್ಮ ಆ ಜನ್ಮ ಸಿದ್ಧ ಹಕ್ಕು’ ಎಂದು ಪ್ರತಿಪಾದಿಸುವವರ ಸಂಖ್ಯೆಯೇ ನಮ್ಮಲ್ಲಿ ಹೆಚ್ಚು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ