ಕರ್ನಾಟಕ ಬಂದ್: ನಾಳೆ ಏನಿದೆ ಏನಿಲ್ಲ...

Karnataka bandh: metro,buses,hospitals as usual

24-01-2018

ಬೆಂಗಳೂರು: ಮಹದಾಯಿ ನದಿ ನೀರು ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ, ನಾಳೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ರಜೆ ನೀಡಲು ಖಾಸಗಿ ಶಾಲೆಗಳ ಒಕ್ಕೂಟ ತೀರ್ಮಾನಿಸಲಾಗಿದೆ.

ಇನ್ನು ನಾಳೆ ಲಾರಿಗಳ ಓಡಾಟದಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಮಹದಾಯಿ ನೀರಿಗಾಗಿ ಆಗ್ರಹಿಸಿ ನಾಳೆ ರಾಜ್ಯ ಬಂದ್ ಹಿನ್ನೆಲೆ, ಲಾರಿ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡುವುದಾಗಿಯೂ ಆದರೆ ಲಾರಿ ಓಡಾಟ ನಿಲ್ಲಿಸದಿರಲು ನಿರ್ಧಾರ ಕೈಗೊಂಡಿದ್ದಾರೆ. ಈ ಹಿನ್ನೆಲೆ ಎಂದಿನಂತೆ ಲಾರಿಗಳು ಸಂಚರಿಸಲಿವೆ.

ಅದರಂತೆ ನಗರದಲ್ಲಿ ಮೆಟ್ರೊ ಹಾಗು ಬಿಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ ಬಸ್ ಗಳು, ಟ್ಯಾಕ್ಸಿಗಳು, ಆಟೋಗಳ ಸಂಚಾರದಲ್ಲೂ ಯಾವುದೇ ವ್ಯತ್ಯಯವಿಲ್ಲ, ಈ ಎಲ್ಲಾ ಸಂಘಟನೆಗಗಳು ಬಂದ್ ಗೆ ನೈತಿಕ ಬೆಂಬಲ ಸೂಚಿಸಿದ್ದು, ಪರಿಸ್ಥಿತಿ ನೋಡಿಕೊಂಡ ನಾಳೆ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನು ನಾಳೆ ಖಾಸಗಿ ಆಸ್ಪತ್ರೆಗಳಿಗೆ ರಜೆಯಿಲ್ಲ, ಆಸ್ಪತ್ರೆಗಳು ಕೂಡ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ತಿಳಿಸಿದ್ದಾರೆ. ಬಂದ್ ಗೆ ನೈತಿಕ ಬೆಂಬಲ ಘೋಷಿಸಿದ ಮೆಡಿಕಲ್ ಅಸೋಸಿಯೇಷನ್, ನಾಗರಿಕರಿಗೆ ತೊಂದರೆಯಾಗುವ ಹಿನ್ನೆಲೆ ಆಸ್ಪತ್ರೆಗಳನ್ನು ಬಂದ್ ಮಾಡದಿರಲು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ನಾಳೆ ಪೆಟ್ರೋಲ್ ಡೀಸೆಲ್ ಗೆ ಸಮಸ್ಯೆಯಿಲ್ಲ, ಪೆಟ್ರೋಲಿಯಂ ಅಸೋಸಿಯೇಷನ್ ಸಹ ನೈತಿಕ ಬೆಂಬಲ ಘೋಷಿಸಿದ್ದು, ಪೆಟ್ರೋಲ್ ಬಂಕ್ ಬಂದ್ ಮಾಡದಿರಲು ನಿರ್ಧಾರ ಕೈಗೊಂಡಿರುವುದಾಗಿಯೂ, ರಾಜ್ಯಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು, ಪೆಟ್ರೋಲಿಯಂ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.

ಇನ್ನು ಮಹದಾಯಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಬಂದ್ ವೇಳೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಶಾಂತಿ ಕದಡುವ ಕೆಲಸ  ಮಾಡಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

karnataka Bandh metro ಕಠಿಣ ಕ್ರಮ ಪೆಟ್ರೋಲಿಯಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ