ಫಿಟ್ನೆಸ್ ಟೆಸ್ಟ್ ಗೆ ಐಪಿಎಸ್ ವಿರೋಧ?

IPS officers resist Centre

24-01-2018

ರಾಷ್ಟ್ರಪತಿ, ಪ್ರಧಾನಿ ಮತ್ತಿತರ ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುವ ಎನ್‌ಎಸ್‌ಜಿ ಅಂದರೆ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ ಕಮಾಂಡೊಗಳು ಹೇಗಿರುತ್ತಾರೆ ನೋಡಿದ್ದೀರಲ್ಲ? ಸದೃಢವಾಗಿ, ಚುರುಕಾಗಿ, ಆತ್ಮ ವಿಶ್ವಾಸದಿಂದ ಕೂಡಿದ ಕಮಾಂಡೋಗಳು ತುಂಬಾ ಸ್ಮಾರ್ಟ್ ಆಗಿಕಾಣುತ್ತಾರೆ. ಅದೇ ರೀತಿ ನಮ್ಮ ಪೊಲೀಸರನ್ನು ನೋಡಿ, ಅಪರೂಪಕ್ಕೆ ಸ್ಮಾರ್ಟ್ ಆಗಿ ಕಾಣುವ ಒಬ್ಬಿಬ್ಬರು ಪೊಲೀಸರೂ ಇದ್ದರೂ ಕೂಡ, ಐಪಿಎಸ್ ಅಧಿಕಾರಿಗಳಿಂದ ಹಿಡಿದು ಪೇದೆಯವರೆಗೆ ಹೆಚ್ಚಿನವರು ಡೊಳ್ಳು ಹೊಟ್ಟೆಯವರೇ ಆಗಿರುತ್ತಾರೆ, ಇಲ್ಲವೇ ಸಂಪೂರ್ಣವಾಗಿ ಆರೋಗ್ಯ ಹಾಳುಮಾಡಿಕೊಂಡು ನರಪೇತಲರಾಗಿರುತ್ತಾರೆ. ಹೀಗಾಗಿ, ಇವರು ಭಯೋತ್ಪಾದಕರನ್ನು ಹಿಡಿಯುವುದಿರಲಿ, ಸರಗಳ್ಳರನ್ನು ಹಿಡಿಯುವುದೂ ಕಷ್ಟ ಅನ್ನುವಂತಾಗಿದೆ. ಇಂಥದನ್ನು ತಪ್ಪಿಸುವ ಬಗ್ಗೆ ಚಿಂತೆ ನಡೆಸಿದ ಕೇಂದ್ರ ಸರ್ಕಾರ, ಐಪಿಎಸ್ ಅಧಿಕಾರಿಗಳು ಬಡ್ತಿ ಅಂದ್ರೆ ಪ್ರೊಮೋಷನ್ ಪಡೆಯಲು ಫಿಟ್‌ನೆಸ್ ಟೆಸ್ಟ್ ಕಡ್ಡಾಯಗೊಳಿಸುವ ಬಗ್ಗೆ ಎಲ್ಲ ರಾಜ್ಯಗಳಿಗೂ ಪ್ರಸ್ತಾಪ ಕಳಿಸಿದೆ. ಈ ‘ಸ್ಮಾರ್ಟ್‌ ಪೊಲೀಸ್’ ಪರಿಕಲ್ಪನೆ ಬಗ್ಗೆ  6 ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಕೂಡ, ರಾಜ್ಯ ಸರ್ಕಾರಗಳಿಂದ ಇದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ. ಫಿಟ್‌ನೆಸ್ ಪರೀಕ್ಷೆ ಕಡ್ಡಾಯಗೊಳಿಸುವುದಕ್ಕೆ ಹೆಚ್ಚಿನ ಐಪಿಎಸ್ ಅಧಿಕಾರಿಗಳು ಪ್ರತಿರೋಧ ತೋರಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಈವರೆಗೆ ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಸರ್ಕಾರಗಳು ಮಾತ್ರ ಕೇಂದ್ರಕ್ಕೆ ಪ್ರತಿಕ್ರಿಯೆ ನೀಡಿವೆ. ಐಪಿಎಸ್ ಅಧಿಕಾರಿಗಳು ಹೆಚ್ಚೂಕಮ್ಮಿ ದಿನದ 24 ಗಂಟೆಯೂ ಕರ್ತವ್ಯದ ಜವಾಬ್ದಾರಿ ಹೊಂದಿರುವುದರಿಂದ ಅವರು ಜಿಮ್‌ಗಳಿಗೆ ಹೋಗಿ ಬೆವರು ಹರಿಸಿ ಸ್ಮಾರ್ಟ್ ಆಗುವಷ್ಟು ಸಮಯ ಸಿಗುವುದಿಲ್ಲ ಅನ್ನುವುದು ಮಹಾರಾಷ್ಟ್ರ ಸರ್ಕಾರದ ವಾದ. ಕೇರಳ ಕೂಡ ಫಿಟ್‌ನೆಸ್ ಪರೀಕ್ಷೆ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಫಿಟ್‌ನೆಸ್ ಪರೀಕ್ಷೆ ಬಗ್ಗೆ ರಾಜ್ಯ ಸರ್ಕಾರಗಳು ಉತ್ಸಾಹ ತೋರಿಸದಿರುವುದಕ್ಕೆ ಐಪಿಎಸ್ ಅಧಿಕಾರಿಗಳ ಲಾಬಿಯೇ ಕಾರಣ ಎನ್ನಲಾಗಿದೆ. ಫಿಟ್‌ನೆಸ್ ಟೆಸ್ಟ್‌ಗೂ ಪ್ರೊಮೋಷನ್‌ಗೂ ಲಿಂಕ್ ಕಲ್ಪಿಸಿದರೆ ನಾವು ಹಿಂದುಳಿಯುವುದು ಖಚಿತ ಅನ್ನುವುದು ಬಹುತೇಕ ಐಪಿಎಸ್ ಅಧಿಕಾರಿಗಳ ಅಳಲು. ಇದರ ಜೊತೆಗೆ ಐಪಿಎಸ್ ನವರಿಗೇ ಏಕೆ ಇದನ್ನು ಕಡ್ಡಾಯಗೊಳಿಸುತ್ತೀರಿ, ಐಎಎಸ್, ಐಎಫ್ಎಸ್, ಐಆರ್‌ಎಸ್ ಅಧಿಕಾರಿಗಳಿಗೆ ಫಿಟ್‌ನೆಸ್ ಬೇಡವೇ ಎನ್ನುವುದೂ ಕೂಡ ಐಪಿಎಸ್‌ನವರ ಪ್ರಶ್ನೆ.

ಒಟ್ಟಿನಲ್ಲಿ, ಮೊದಲು ಐಪಿಎಸ್‌ ಅಧಿಕಾರಿಗಳಿಗೆ ಫಿಟ್‌ನೆಸ್ ಕಡ್ಡಾಯಗೊಳಿಸಿ ಆನಂತರ ಇಡೀ ಪೊಲೀಸ್‌ ಪಡೆಗೆ ಅದನ್ನು ಅನ್ವಯವಾಗುವಂತೆ ಮಾಡಬಹುದಾಗಿದ್ದ ಈ ಪ್ರಸ್ತಾಪ ಬಿದ್ದುಹೋಗುವಂತೆ ಕಾಣುತ್ತಿರುವುದಂತೂ ನಿಜ. ಹೀಗಾಗಿ, ಸದ್ಯಕ್ಕಂತೂ ಡೊಳ್ಳು ಹೊಟ್ಟೆ ಡುಮ್ಮಣ್ಣರಂಥ ಪೊಲೀಸರನ್ನು ನೋಡುವುದೇ ದೇಶದ ನಾಗರಿಕರ ಭಾಗ್ಯ ಎನ್ನಬಹುದು.


ಸಂಬಂಧಿತ ಟ್ಯಾಗ್ಗಳು

IPS Fitnss ಆಕ್ಷೇಪ ರಾಷ್ಟ್ರಪತಿ,


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ