ಹೊಸಪೇಟೆಯಿಂದ ರಾಹುಲ್ ದಂಡಯಾತ್ರೆ

karnataka election: Rahul gandhi campaign starts from bellary

23-01-2018

ಬೆಂಗಳೂರು: ಮುಂಬರುವ ವಿಧಾನಸಭಾಚುನಾವಣೆಯ ಹಿನ್ನೆಲೆಯಲ್ಲಿ ಕೈ ಪಾಳೆಯದ ಫೀಲ್ಡ್ ಮಾರ್ಷಲ್ ಆಗಿ ಕಾರ್ಯ ನಿರ್ವಹಿಸಲು ಸಜ್ಜಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ ತಿಂಗಳ ಮೊದಲವಾರ ಮೈಸೂರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಮುಂದಿನ ಲೋಕಸಭಾ ಚುನಾವಣೆಗೂ ಮುಂದಿನ ಸೆಮಿಫೈನಲ್ ಎಂದು ಪರಿಗಣಿಸಿರುವ ರಾಹುಲ್‍ಗಾಂಧಿ ಅವರು ಚುನಾವಣೆ ಘೋಷಣೆಯಾಗುವ ಮುನ್ನವೇ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಫೆಬ್ರವರಿ 10,11 ಹಾಗೂ 12 ರಂದು ಹೈದ್ರಾಬಾದ್-ಕರ್ನಾಟಕ ವಿಭಾಗದ ಜಿಲ್ಲೆಗಳಲ್ಲಿ ಕೈ ಪರ ಪ್ರಚಾರ ಕಾರ್ಯ ನಡೆಸಲಿರುವ ರಾಹುಲ್ ಗಾಂಧಿ ಅವರು ಹೊಸಪೇಟೆಯಿಂದ ದಂಡಯಾತ್ರೆ ಆರಂಭಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಕಲ ತಯಾರಿಗಳು ನಡೆದಿದ್ದು, ಯುದ್ದ ಕಾಲದಲ್ಲಿ ತಾವೇ ಸಕ್ರಿಯರಾಗಿರಲು ಬಯಸಿರುವ ರಾಹುಲ್ ಗಾಂಧಿ ಇದೇ ಕಾರಣಕ್ಕಾಗಿ ಚುನಾವಣೆಗೂ ಮುನ್ನವೇ ಕರ್ನಾಟಕ ಪ್ರವಾಸ ನಡೆಸಲಿದ್ದಾರೆ. ಫೆಬ್ರವರಿ 21, 22 ಹಾಗೂ 23 ರಂದು ಮುಂಬಯಿ-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸಕಾರ್ಯ ನಡೆಸಲಿರುವ ರಾಹುಲ್ ಗಾಂಧಿ ತದ ನಂತರ ಹಳೆ ಮೈಸೂರು ವಿಭಾಗದ ಜಿಲ್ಲೆಗಳು ಹಾಗೂ ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಸಧ್ಯದ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳ ಮೊದಲವಾರ ಮೈಸೂರು ಜಿಲ್ಲೆಗೆ ರಾಹುಲ್‍ಗಾಂಧಿ ಭೇಟಿ ನೀಡಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸ್ಪರ್ಧೆಯ ಹಿನ್ನೆಲೆಯಲ್ಲಿ ವಿಶೇಷ ಗಮನ ನೀಡಲಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ನಾಲ್ಕು ಹಂತದ ಪ್ರವಾಸ ಕಾರ್ಯದ ರೂಪು ರೇಷೆಯನ್ನು ನಿರ್ಧರಿಸಲು ಜನವರಿ 25 ರಂದು ಅವರ ಆಪ್ತರ ಪಡೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಹೊಸಪೇಟೆ ಸೇರಿದಂತೆ ಆಯಾ ವಿಭಾಗಗಳ ಯಾವ್ಯಾವ ಭಾಗಗಳಲ್ಲಿ ಎಲ್ಲಿಂದ ಪ್ರವಾಸ ಹೊರಡಬೇಕು? ಎಲ್ಲಿ ಪೂರ್ಣಗೊಳಿಸಬೇಕು ಎಂಬುದನ್ನು ರಾಹುಲ್‍ಗಾಂಧಿ ಅವರ ಆಪ್ತರ ಪಡೆ ಅಂತಿಮಗೊಳಿಸಲಿದೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.

ಮುಂದಿನ ಲೋಕ ಸಭಾಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಗೆದ್ದುಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದು, ಯಾವಕಾರಣಕ್ಕೂ ಪಕ್ಷದ ನಾಯಕರು ಪರಸ್ಪರ ವೈಮನಸ್ಸು ಹೊಂದಿರಬಾರದು ಎಂದು ಈಗಾಗಲೇ ರಾಹುಲ್‍ಗಾಂಧಿ ಸ್ಪಷ್ಟ ಮಾತುಗಳಲ್ಲಿ ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಗೆದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಹಾದಿ ಸುಗಮವಾಗಲಿದ್ದು ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದವರು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ತಾವೇ ಖುದ್ದಾಗಿ ಕೆಲಸ ಮಾಡಲು ರಾಹುಲ್‍ಗಾಂಧಿ ನಿರ್ಧರಿಸಿದ್ದು ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಲ್ಲದೆ ಆಯಾ ಭಾಗಗಳ ಸಚಿವರು, ಶಾಸಕರು ಪ್ರವಾಸದಲ್ಲಿ ಭಾಗಿಆಗಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rahul Gandhi election ಪ್ರವಾಸ ಲೋಕಸಭಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ