ಸಿಎಂ ವಿರುದ್ಧ ದೇವೇಗೌಡರು ಗರಂ

Deve Gowda Garam Against CM

23-01-2018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಯ ವಿರುದ್ಧ ಸಿಡಿದು ಬಿದ್ದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಇನ್ನು ಮುಂದೆ ಸಿದ್ದರಾಮಯ್ಯ ಭಾಗವಹಿಸುವ ಯಾವುದೇ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಕೆಂಡಾಮಂಡಲವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇನ್ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ಯಾವುದೇ ಸಮಾರಂಭದಲ್ಲಿ  ವೇದಿಕೆ ಹಂಚಿಕೊಳ್ಳುವುದಿಲ್ಲ. ಯಾರು ಕೂಡಾ ಕರೆಯಲೂ ಬೇಡಿ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ನನ್ನ ಜೀವಮಾನದಲ್ಲಿ ಕಂಡ ಅತ್ಯಂತ ಭ್ರಷ್ಟ ಹಾಗೂ ಕೆಟ್ಟ ಸರ್ಕಾರ ಇದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕದಲ್ಲೂ ಪರ್ಸಂಟೇಜ್ ವ್ಯವಹಾರ ಮಾಡಲು ಮುಂದಾಗಿರುವ ನೀಚ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಣ ಮಾಡಲು ದೇವರು, ಜನರು ಎಂಬುದೇ ಇಲ್ಲ. ಹೇಗಾದರೂ ಮಾಡಿ ಮುಂದಿನ ಚುನಾವಣೆಗೆಗಂಟು ಮಾಡಿಕೊಳ್ಳಲು ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸದಸ್ಯರು ಹಾತೊರೆಯುತ್ತಿದ್ದಾರೆ. ಇದೆಂಥಾ ಸರ್ಕಾರ ಎಂದು ದೂರಿದರು.

ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಯಾವುದೇಕಾರ್ಯಕ್ರಮದಲ್ಲೂ ನಾನೂ ಭಾಗಿಯಾಗಿಲ್ಲ. ರಾಷ್ಟ್ರಪತಿ, ಪ್ರಧಾನಿಯವರಿಗೆ ಪತ್ರ ಬರೆದು ಇಲ್ಲಿನ ವ್ಯವಹಾರ ತಿಳಿಸುತ್ತೇನೆ. ನಾನೂ ಮಾಜಿ ಪ್ರಧಾನಿ, ಸ್ಥಳೀಯ ಸಂಸದ. ರಾಷ್ಟ್ರದ ಗಣ್ಯರು ಬರುವ ಸಂದರ್ಭದಲ್ಲಿ ಭಾಗವಹಿಸುವುದು ಶಿಷ್ಟಾಚಾರ. ಆದರೆ, ಕೆಟ್ಟ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಕಾರಣ ನೀಡಿ ತಿಳಿಸುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಧಾನಸೌಧಕ್ಕೆ 60 ವರ್ಷದಲ್ಲಿ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡು ಘಟನಾವಳಿ ಹಾಗೂ ರಾಷ್ಟ್ರಪತಿಯವರ ಭಾಷಣ ಸಿದ್ಧಪಡಸುವಿಕೆಯಲ್ಲಿ ನಡೆದ ಲೋಪ, ದಿಕ್ಕು ತಪ್ಪಿಸಿದ್ದನ್ನು ಸಹ ವಿವರಿಸುತ್ತೇನೆ ಎಂದು ತಿಳಿಸಿದರು.

ಹಾಸನ ಜಿಲ್ಲಾಉಸ್ತುವಾರಿ ಸಚಿವ ಪರ್ಸಂಟೇಜ್ ವ್ಯವಹಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಯಾಗಿದ್ದ ಹೆಣ್ಣು ಮಗಳು ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದಾರೆ. ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲೇ ಅಲ್ಲಿನ ಅವ್ಯವಹಾರವನ್ನು ಆಕೆ ತಿಳಿಸಿದ್ದಳು.

ಗೊಮ್ಮಟೇಶ್ವರನಿಗೆ ಅಟ್ಟಣಿಗೆ ನಿರ್ಮಾಣದ ಟೆಂಡರ್ ವಿಚಾರದಲ್ಲಿ ನಡೆದಿದ್ದ ಗೋಲ್‍ಮಾಲ್ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅಲ್ಲಿನ ಕಾಂಗ್ರೆಸ್ ನಾಯಕರ ಮಾತು ಕೇಳಿ ಸರ್ಕಾರ ವರ್ಗಾವಣೆ ಮಾಡಿದೆ ಎಂದು ದೂರಿದರು. ನಾನು ಬಹಳ ಹಿಂದೆಯೇ ಅಲ್ಲಿನ ಅವ್ಯವಹಾರದ ಬಗೆ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದೆ. ಈಗಲೂ ವರ್ಗಾವಣೆ ಆದ ಮೇಲೆ ಯಾಕೆ ಎಂದು ಕೇಳಿದೆ. ಆದರೆ, ಮುಖ್ಯ ಕಾರ್ಯದರ್ಶಿಯವರು ಇದು ನಮ್ಮ ನಿರ್ಧಾರವಲ್ಲ, ಸರ್ಕಾರದ ಮಟ್ಟದ್ದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಎಂದರು.

ಮಹಾಮಹಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರವೂ ಹಣಕೊಡುತ್ತದೆ. ರಾಜ್ಯ ಸರ್ಕಾರವು ನೆರವುಕೊಡುತ್ತದೆ. ಆದರೆ ಟೆಂಡರ್ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಲ್ಲವೇ? ಆಡಿದ್ದೇ ಆಟ ಎಂಬಂತೆ ಜಿಲ್ಲಾಉಸ್ತುವಾರಿ ಸಚಿವರ ಆಟೋಪಾಟಕ್ಕೆ ಕೊನೆ ಇಲ್ಲದಂತೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ಮುಖ್ಯ ಮಂತ್ರಿಯವರು ಇತ್ತೀಚೆಗೆ ಸಾಧನಾ ಸಂಭ್ರಮ ಯಾತ್ರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗು ಬಡೆಯಲು ಏನು ಮಾಡಬೇಕು ಎಂದು ಜಿಲ್ಲಾಉಸ್ತುವಾರಿ ಸಚಿವರಿಗೆ ಕೇಳಿದಾಗ, ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಸಾಕು ಎಂದು ಹೇಳಿದ್ದರು. ರೋಹಿಣಿ ಜಿಲ್ಲಾಧಿಕಾರಿಯಾದ ಮೇಲೆ ನಾನು ಒಮ್ಮೆ ಭೇಟಿಯಾಗಿದ್ದೆ. ಆ ನಂತರ ಹೋಗಿರಲಿಲ್ಲ. ಆದರೆ, ಇವರಿಗೆ ಹಣ ಹೊಡೆಯಲು ಬಿಟ್ಟಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.

ನಾನು ಜಾತಿವಾದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ ಪಟ್ಟಕಟ್ಟುತ್ತಿದ್ದಾರೆ. 20 ವರ್ಷಗಳ ನಂತರ ಡಿಜಿಪಿ ಸ್ಥಾನ ಕನ್ನಡಿಗರೊಬ್ಬರಿಗೆ ಸಿಗುತ್ತಿತ್ತು. ಆ ಕಾರಣಕ್ಕೆ ಒಮ್ಮೆ ಕಿಶೋರ್ ಚಂದ್ರ  ಪರವಾಗಿ ದೂರವಾಣಿ ಕರೆ ಮಾಡಿದ್ದು ನಿಜ. ಆದರೆ, ಇವರು ಮಾಡಿರುವ ಜಾತಿವಾದ ಎಂತದ್ದೂ ಎಂಬುದನ್ನೂ ಕಾಲ ಬಂದಾಗ ಬಿಚ್ಚಿಡುತ್ತೇನೆ. ಇನ್ನೊಮ್ಮೆ ಇವರು ಆ ಬಗ್ಗೆ ಮಾತನಾಡಿದರೂ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಬಿದರಿ ಡಿಜಿಪಿ ಆಗಲು 20 ವರ್ಷ ಬೇಕಾಯಿತು. ಈಗ ಅವಕಾಶ ಇಲ್ಲ ಆಂದ್ರೆ ಇನ್ನು 20 ವರ್ಷ ಕನ್ನಡಿಗರಿಗೆ ಸಿಗಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರಿಗೆ ಹೇಳಿದೆ. ಆದರೆ, ನೀಲಮಣಿ ರಾಜು ಅವರು ರಾಜ್ಯದಲ್ಲಿ ಕೆಲಸ ಮಾಡಿರಲಿಲ್ಲ. ದೆಹಲಿಗೆ ಹೋಗ್ತೀನಿ ಅಂತ ಹೇಳಿದರು ಇವರೇ ಬೇಡ ಎಂದು ವಾಪಸ್ ಇಲ್ಲೇ ಉಳಿಸಿ ಡಿಜಿಪಿ ಮಾಡಿದ್ದಾರೆ. ಇವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುವವರು ಬೇಕು ಎಂಬ ಕಾರಣಕ್ಕೆ ನೇಮಕ ಮಾಡಿದ್ದಾರೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ