‘ಕೇಂದ್ರ ಸರ್ಕಾರ ಬಿಡಿಗಾಸು ಸಹ ನೀಡಿಲ್ಲ’22-01-2018

ಬೆಂಗಳೂರು: ಶ್ರವಣಬೆಳಗೊಳದಲ್ಲಿ ಮುಂದಿನ ತಿಂಗಳ 7 ರಿಂದ 26 ರವರೆಗೆ ನಡೆಯಲಿರುವ ಬಾಹುಬಲಿಯ 88ನೇ ಮಹಾಮಸ್ತಾಕಾಭಿಷೇಕ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಬಿಡಿಗಾಸು ಸಹ ನೀಡಿಲ್ಲ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ನೆರವು ನೀಡುತ್ತಾ ಬಂದಿತ್ತು. ಆದರೆ ಈ ಬಾರಿ ಮಾತ್ರ ಯಾವುದೇ ನೆರವು ನೀಡದೇ ನಿರ್ಲಕ್ಷ್ಯ ತೋರಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಮಂಜು ಆಪಾದಿಸಿದ್ದಾರೆ.

ಕಳೆದ 2006ರಲ್ಲಿ ನಡೆದ ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ 90 ಕೋಟಿ ನೀಡಿತ್ತು. ಪ್ರತಿಯೊಂದು ಉತ್ಸವಕ್ಕೂ ಸಹ ಕೇಂದ್ರದ ನೆರವು ಲಭಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದೆ ಎಂದರು. ಕಳೆದ ಆರು ತಿಂಗಳ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಈ ಕಾರ್ಯಕ್ರಮಕ್ಕೆ ನೆರವು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೇಂದ್ರ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ನೆರವು ಕೋರಿ ನಾಲ್ಕು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಹೇಳಿದರು.

ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಈ ವರೆಗೆ ಅವರಿಂದ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹಾಮಸ್ತಾಕಾಭಿಷೇಕಕ್ಕಾಗಿ ರಾಜ್ಯ ಸರ್ಕಾರ 175 ಕೋಟಿ ರೂಪಾಯಿ ಅನುದಾನ ನೀಡಿದೆ ಈ ಮಹೋತ್ಸವದಲ್ಲಿ 30 ರಿಂದ 35 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ವಿಶ್ವ ವಿಖ್ಯಾತ ಗೊಮ್ಮಟೇಶ್ವರ ವಿಗ್ರಹದ ಪಾದದ ಬಳಿ ಜರ್ಮನ್ ತಂತ್ರಜ್ಞಾನದ ನೆರವಿನಿಂದ 11.25 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಿಂದ ಗೊಮ್ಮಟ ಮೂರ್ತಿಯ ಅಭಿಷೇಕಕ್ಕಾಗಿ ಕಳಸಗಳನ್ನು ಮೇಲೆ ಸಾಗಿಸಲು ಅಟ್ಟಣಿಗೆ ನಿರ್ಮಿಸಲಾಗುತ್ತಿದೆ ಎಂದರು.

ಶ್ರವಣಬೆಳಗೊಳಕ್ಕೆ ಮಸ್ತಾಕಾಭಿಷೇಕದ ವೇಳೆ ದೇಶ-ವಿದೇಶಗಳಿಂದ ಜನ ಸಾಗರವೇ ಹರಿದು ಬರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯ ಗಮನ ನೀಡಲಾಗಿದೆ. ರಸ್ತೆಗಳ ಸುಧಾರಣೆಗೆ 89 ಕೋಟಿ ರೂಪಾಯಿ, ಕುಡಿಯುವ ನೀರಿನ ಸಮರ್ಪಕ ಸೌಲಭ್ಯಕ್ಕಾಗಿ 8 ಲಕ್ಷ ರೂಪಾಯಿ ವಿನಿಯೋಗ ಮಾಡಲಾಗುತ್ತಿದೆ ಮಹಾ ಮಸ್ತಾಕಾಭಿಷೇಕಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 23 ವಿಶೇಷ ರೈಲು ಹಾಗೂ 200 ಕ್ಕೂ ಹೆಚ್ಚು ವಿಶೇಷ ಬಸ್ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು. ಮಹೋತ್ಸವಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಎಲ್ಲಾ ಶಿಬಿರಗಳಲ್ಲೂ ಉತ್ತಮ ವೈದ್ಯಕೀಯ ವ್ಯವಸ್ಥೆ ಮತ್ತು ಭೋಜನ ಸಭಾಂಗಣದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವ ಎ.ಮಂಜು ತಿಳಿಸಿದರು.

ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಮಾತನಾಡಿ, ಮಸಕ್ತಾಭಿಷೇಕದ ನೆನಪಿಗಾಗಿ ಸಂಸ್ಕೃತ ಮತ್ತು ಪ್ರಾಕೃತಿ ವಿಶ್ವವಿದ್ಯಾಯ ಸ್ಥಾಪಿಸಲಾಗುತ್ತಿದೆ. ಈ ಸಂಬಂಧ ಶೀಘ್ರದಲ್ಲೇ ಸರ್ಕಾರದ ಅಧಿಸೂಚನೆ ಜಾರಿಯಾಗಲಿದೆ ಎಂದರು. ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಅಶಾಂತಿಗೆ ಬಾಹುಬಲಿ ಅವರ ತತ್ವ ಸಿದ್ಧಾಂತಗಳು ಪ್ರೇರಣೆ ನೀಡುತ್ತವೆ. ಬಾಹುಬಲಿ ಬದುಕು ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ