ಶಾಪಿಂಗ್ ವಿತೌಟ್ ಬಿಲ್ಲಿಂಗ್..!

shopping without billing...!

22-01-2018

ದಿನಸಿ ಅಂಗಡಿಯಲ್ಲಿ ಸಾಮಾನುಗಳ ದೊಡ್ಡ ಪಟ್ಟಿಕೊಟ್ಟು, ಪೇಪರ್ ಪೊಟ್ಟಣಗಳಲ್ಲಿ ಕಟ್ಟಿಸಿಕೊಂಡು, ಹುಷಾರಾಗಿ ಬ್ಯಾಗಿನಲ್ಲಿ ಮನೆಗೆ ತರುವುದೇ ಒಂದು ಕಾಲದಲ್ಲಿ ಸಾಮಾನ್ಯವಾಗಿತ್ತು. ಆ ಸನ್ನಿವೇಶದಲ್ಲಿ, ಜನತಾ ಬಜಾರ್ ನವರು, ಗ್ರಾಹಕರು ತಮಗೆ ಬೇಕಾದದ್ದನ್ನು ತಾವೇ ಕೈಗೆತ್ತಿಕೊಂಡು ನೋಡಿ ಬ್ಯಾಸ್ಕೆಟ್‌ಗಳಲ್ಲಿ ಹಾಕಿಕೊಂಡು, ಕೌಂಟರ್‌ನಲ್ಲಿ ಬಿಲ್ ಮಾಡಿಸುವ ಸೌಲಭ್ಯ ಜಾರಿಗೆ ತಂದರು. ಆ ಕಾಲಕ್ಕೆ ಅದೇ ದೊಡ್ಡ ವಿಷಯವಾಗಿತ್ತು.

ಆ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳಲ್ಲಿನ ಸ್ಟೋರ್‌ಗಳಲ್ಲಿ, ನಮಗೆ ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಟ್ರಾಲಿಗಳಲ್ಲಿ ತುಂಬಿಕೊಂಡು, ಕೌಂಟರ್‌ನಲ್ಲಿ ಕಾರ್ಡ್ ಅಥವ ಕ್ಯಾಷ್ ಕೊಟ್ಟು ಬಿಲ್ ಪಡೆದು ಹೊರಬರುತ್ತಿದ್ದಾಗಲೂ ಒಂದಿಷ್ಟು ಖುಷಿಯೇ. ತದನಂತರ ಆನ್ ಲೈನ್‌ನಲ್ಲಿ ಶಾಪಿಂಗ್ ಮಾಡಿ ಬೇಕಾದ ವಸ್ತುಗಳನ್ನೆಲ್ಲ ಮನೆಗೇ ತರಿಸಿಕೊಳ್ಳುವಂಥಾಗಿದ್ದೂ ಒಂದು ಮಜವೇ ಆಗಿತ್ತು. ಇದೀಗ, ಅಮೆಜಾನ್ ಕಂಪನಿಯವರು ಗ್ರಾಹಕರ ಶಾಪಿಂಗ್ ಅನುಭವವನ್ನು ಮತ್ತೊಂದು ಹೊಸಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಮೆರಿಕದ ಸಿಯಾಟಲ್‌ ನಗರದಲ್ಲಿ ಅಮೆಜಾನ್ ಗೊ ಎಂಬ ಹೆಸರಿನ ಹೈಟೆಕ್ ದಿನಸಿ ಅಂಗಡಿ ಆರಂಭಿಸಿದ್ದಾರೆ. ಅಲ್ಲಿ ನೀವು, ನಿಮಗೆ ಬೇಕಾದದ್ದನ್ನೆಲ್ಲಾ ತೆಗೆದು ನಿಮ್ಮ ಬ್ಯಾಗಿಗೆ ಹಾಕಿಕೊಂಡು ಯಾರಿಗೂ ಹೇಳದೆ ಕೇಳದೆ, ಕ್ಯೂ ನಿಲ್ಲದೆ, ಬಿಲ್ ಮಾಡಿಸದೇ ಹೊರಟುಬಿಡಬಹುದು. ಹಾಗಿದ್ರೆ ಹಣವನ್ನೇ ಕೊಡುವಂತಿಲ್ಲವೇ ಅಂದ್ರಾ? ಅದು ಹಾಗಲ್ಲ, ಹಣ ಕೊಡಬೇಕು. ಹೇಗೆಂದರೆ, ನೀವು ಆ ಶಾಪ್ ಒಳಗೆ ಪ್ರವೇಶಿಸುತ್ತಿದ್ದಂತೆ, ನಿಮ್ಮ ಫೋನ್ ಅಥವ ಕ್ರೆಡಿಕ್ ಕಾರ್ಡ್ ಅನ್ನು ಅಲ್ಲಿನ ಸೆನ್ಸರ್‌ಗೆ ತೋರಿಸಿ ಒಳಬರಬೇಕು. ಆ ನಂತರ, ಅಲ್ಲಿರುವ ಕ್ಯಾಮರಾಗಳು ನಿಮ್ಮನ್ನು ಪತ್ತೆಹಚ್ಚುತ್ತವೆ ಮತ್ತು ನೀವು ಅಲ್ಲಿನ ಕಪಾಟುಗಳಿಂದ ಎತ್ತಿಕೊಳ್ಳುವ ಪ್ರತಿ ವಸ್ತುವನ್ನೂ ಗುರುತಿಸಿ ಲೆಕ್ಕ ಇಟ್ಟುಕೊಳ್ಳುತ್ತವೆ. ನಿಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ನೀವು ಹೊರಬೀಳುತ್ತಿದ್ದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿ ಆಗಿರುತ್ತದೆ.

130 ಕೋಟಿ ಜನಸಂಖ್ಯೆಯ ಭಾರತ ಅನ್ನುವುದು ಎಲ್ಲ ರೀತಿಯ ಹೊಸ ತಂತ್ರಜ್ಞಾನಗಳ ದೊಡ್ಡ  ಪ್ರಯೋಗಾಲಯವಾಗಿದೆ. ಹೀಗಾಗಿ, ಇವತ್ತು ಅಮೆರಿಕದಲ್ಲಿ ಬಂದಿದ್ದು, ಇದೇ ವಾರ ಬೆಂಗಳೂರಿಗೂ ಬರಬಹುದು. ಆಗ ನಿಮಗೂ ಕೂಡ, ಹೊಸ ರೀತಿಯ ಶಾಪಿಂಗ್ ಅನುಭವ ಸಿಗುವುದು ಗ್ಯಾರಂಟಿ.


ಸಂಬಂಧಿತ ಟ್ಯಾಗ್ಗಳು

amezon shopping ಜನಸಂಖ್ಯೆ ಕ್ರೆಡಿಕ್ ಕಾರ್ಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ