ಆತಂಕದಲ್ಲಿ ಕೈ ಪಾಳಯ...!

Anxiety in state congress..!

22-01-2018

ಬೆಂಗಳೂರು: ಆಮ್ ಆದ್ಮಿ ಪಕ್ಷದ ಸಂಸದೀಯ ಕಾರ್ಯದರ್ಶಿಗಳಾಗಿದ್ದ ದೆಹಲಿಯ 20 ಶಾಸಕರ ಶಾಸಕತ್ವವನ್ನು ಚುನಾವಣಾ ಆಯೋಗ ಅನರ್ಹಗೊಳಿಸದ ಬೆನ್ನಲ್ಲೇ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಠಿಯಾಗಿದೆ. 10 ಶಾಸಕರು ಸಂಸದೀಯ ಕಾರ್ಯದರ್ಶಿಯಾಗಿದ್ದು, ಶಾಸಕತ್ವ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ಹೌದು, ಸಂಸದೀಯ ಕಾರ್ಯದರ್ಶಿ ಹುದ್ದೆ ಸಂವಿಧಾನಿಕ ಹುದ್ದೆಯಲ್ಲ, ಹಾಗಾಗಿ ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ಅದು ಲಾಭದಾಯಕ ಹುದ್ದೆಯಾಗುತ್ತದೆ ಎನ್ನುವ ಚುನಾವಣಾ ಆಯೋಗದ ಅಭಿಪ್ರಾಯಕ್ಕೆ ರಾಷ್ಟ್ರಪತಿ ಸಮ್ಮತಿ ಸೂಚಿಸಿದ್ದಾರೆ. ಇದರಿಂದ ರಾಜ್ಯದ 10 ಮಂದಿ ಶಾಸಕರು ಅನರ್ಹತೆಯ ಭೀತಿಗೆ ಸಿಲುಕಿದ್ದಾರೆ.

ಇದರಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸರ್ಕಾರವೇ ಸಂಸದೀಯ ಕಾರ್ಯದರ್ಶಿ ಹುದ್ದೆ ರಾಜ್ಯ ಸಚಿವ ಸ್ಥಾನಮಾನದ ಹುದ್ದೆಯಲ್ಲ, ಸಚಿವರ ಸಹಾಯಕರಷ್ಟೇ ಎಂದು ಪ್ರಕಟಿಸಿದೆ. ಹಾಗಾಗಿ ಇದು ಲಾಭದಾಯಕ ಹುದ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಈ ವಿವಾದ ಹೈಕೋರ್ಟ್ನಲ್ಲಿದೆ. ಸಂಸದೀಯ ಕಾರ್ಯದರ್ಶಿಗಳ ನೇಮಕ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಸಿಎಂ ಆತಂಕಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಪಶ್ಚಿಮ ಬಂಗಾಳ, ತೆಲಂಗಾಣ, ಪಂಜಾಬ್ ಹೈಕೋರ್ಟ್ಗಳು ಸಂಸದೀಯ ಕಾರ್ಯದರ್ಶಿಗಳ ನೇಮಕ ಅಸಾಂವಿಧಾನಿಕ ಎಂದು ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿವೆ. ಹಾಗಾಗಿ ಹೈಕೋರ್ಟ್ನಲ್ಲಿ ಸರ್ಕಾರಕ್ಕೆ ಮೇಲುಗೈ ಸಾಧ್ಯತೆ ಕಡಿಮೆ ಇದೆ.

ಈ ನಡುವೆ ಕೇಂದ್ರ ಚುನಾವಣಾ ಆಯೋಗವೇ ನೇರವಾಗಿ ಮಧ್ಯ ಪ್ರವೇಶ ಮಾಡಿ, ಸಂಸದೀಯ ಕಾರ್ಯದರ್ಶಿಗಳಾಗಿರುವ ಶಾಸಕರ ಶಾಸಕತ್ವ ಅನರ್ಹಗೊಳಿಸುವಂತೆ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಒಪ್ಪಿಕೊಂಡಿದ್ದಾರೆ. ಪರಿಣಾಮ ದೆಹಲಿಯ 20 ಶಾಸಕರು ಶಾಸಕ ಸ್ಥಾನವನ್ನೇ ಕಳೆದುಕೊಂಡರು. ಇದೀಗ ಚುನಾವಣಾ ಆಯೋಗ ಕರ್ನಾಟಕದ ಕಡೆ ದೃಷ್ಠಿ ಹಾಯಿಸಿದರೆ ಏನುಗತಿ ಎನ್ನುವ ಆತಂಕ ಕೈ ಪಾಳಯವನ್ನು ಕಾಡುತ್ತಿದೆ.

ಒಂದು ವೇಳೆ ಇಲ್ಲಿಯೂ ಶಾಸಕರನ್ನು ಅನರ್ಹಗೊಳಿಸಿದರೆ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಏಕೆಂದ್ರೆ ಇನ್ನೊಂದು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಕಾರಣದಿಂದ ಸರ್ಕಾರ ಬಹುಮತ ಸಾಬೀತುಪಡಿಸಬೇಕಿಲ್ಲ, ದೆಹಲಿಯಂತೆ ಉಪ ಚುನಾವಣೆ ನಡೆಯುವ ಸನ್ನಿವೇಶವೂ ಎದುರಾಗಲ್ಲ, ಆದರೆ ಅನರ್ಹಗೊಂಡ ಶಾಸಕರ ಮುಂದಿನ ಭವಿಷ್ಯವೇನು? ಸರ್ಕಾರಕ್ಕೆ ಮುಖಭಂಗವಾಗಿ ಚುನಾವಣೆಯಲ್ಲಿ ಹಿನ್ನಡೆಯಾದರೆ ಎನ್ನುವ ಆತಂಕ ಸಿಎಂ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ.

ಯಾರಿಗೆ ಆತಂಕ: 2015 ರ ನವೆಂಬರ್ನಲ್ಲಿ ಸಂಪುಟ ವಿಸ್ತರಣೆ ಬಳಿಕ ಎದುರಾದ ಸಮಸ್ಯೆ ನಿವಾರಿಸಲು ಸಿಎಂ ಸಿದ್ದರಾಮಯ್ಯ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕರನ್ನು ನೇಮಿಸಿದ್ದರು. ಓರ್ವ ಪರಿಷತ್ ಸದಸ್ಯ ಹಾಗೂ 9 ಶಾಸಕರು ಸೇರಿ 10 ಜನರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿ ಸಿಎಂ ಆದೇಶ ಹೊರಡಿಸಿದ್ದರು.

ವಿಜಯಪುರ ನಗರ ಶಾಸಕ ಮಕ್ಬುಲ್ ಭಗವಾನ್, ನಾಗಠಾಣಾ ಶಾಸಕ ರಾಜು ಅಲಗೂರ್, ಚಿಂಚೋಳಿ ಶಾಸಕ ಉಮೇಶ್ ಜಾದವ್, ಶಿರಹಟ್ಟಿ ಶಾಸಕ ದೊಡ್ಡಮನಿ ರಾಮಕೃಷ್ಣ, ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ, ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ, ಹುಣಸೂರಿನ ಹೆಚ್.ಪಿ ಮಂಜುನಾಥ್, ಸಂಡೂರು ಶಾಸಕ ತುಕಾರಾಂ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಸ್ಥಾನಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ.

 


ಸಂಬಂಧಿತ ಟ್ಯಾಗ್ಗಳು

parliamentary secretaries ಶಾಸಕರು ಚುನಾವಣಾ ಆಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ