ಮೇಲಿಂದ ಬಿದ್ದಿದ್ದೇನು ಗೊತ್ತಾ?

do you know what fallen from Aircraft

22-01-2018

ಆಕಾಶದಿಂದ ಮಳೆ ಬೀಳುತ್ತೆ, ಆಲೀಕಲ್ಲು ಬೀಳುತ್ತೆ ಕೆಲವು ಬಾರಿ ಅಪರೂಪಕ್ಕೆ ಉಲ್ಕಾಶಿಲೆಯೂ ಬೀಳಬಹುದು. ಆದರೆ, ಹುಷಾರಾಗಿರಿ! ಆಕಾಶದಿಂದ ಬೀಳೋದೆಲ್ಲ ತುಂಬಾ ಅಪರೂಪದ ವಸ್ತು ಆಗಿರುತ್ತೆ ಅಂತ ಮಾತ್ರ ಅಂದ್ಕೊಬೇಡಿ. ಯಾಕೆ ಅಂದ್ರಾ? ಈ ಸುದ್ದಿ ಪೂರ್ತಿ ಓದಿ.

ದೆಹಲಿ ಹೊರವಲಯದ ಗುರುಗ್ರಾಮದ ಬಳಿಯ ಫಾಜಿಲ್‌ಪುರ್ ಬದ್ಲಿ ಎಂಬ ಹಳ್ಳಿಯೊಂದರಲ್ಲಿ ಬೆಳಗ್ಗೆನೇ ರೈತನೊಬ್ಬ ಹೊಲದಲ್ಲಿ ಕುಳಿತು ನಿತ್ಯ ಕರ್ಮ ಮುಗಿಸುತ್ತಿದ್ದ. ಅಷ್ಟರಲ್ಲೇ ಜೋರು ಸದ್ದಿನೊಂದಿಗೆ ಏನೋ ಒಂದು ರೀತಿಯ ದೊಡ್ಡ ಹೆಪ್ಪುಗಟ್ಟಿದ ತೆಪ್ಪೆ ಆಕಾಶದಿಂದ ಕೆಳಗೆ ಬಿದ್ದಂತೆ ಸದ್ದಾಯಿತು. ಸರಿ, ತನ್ನ ಕೆಲಸ ಮುಗಿಸಿದ ಆ ರೈತ, ಅದೇನಪ್ಪಾ ಬಿದ್ದಿದ್ದು ಅಂತ ನೋಡಲಿಕ್ಕೆ ಹೋದ. ಅಲ್ಲಿಗೆ ಹೋದವನೇ ಅದನ್ನು ನೋಡಿ ಅಚ್ಚರಿಪಟ್ಟು, ಅಕ್ಕ ಪಕ್ಕದಲ್ಲಿದ್ದವರನ್ನೂ ಕರೆದ. ಕೆಲವೇ ನಿಮಿಷಗಳಲ್ಲಿ ಬಾಯಿಂದ ಬಾಯಿಗೆ ಸುದ್ದಿ ಹಬ್ಬಿ ಇಡೀ ಊರಿನ ಜನ ಅಲ್ಲಿ ಸೇರಿದರು.

ಇದೇನಿರಬಹುದು, ಆಕಾಶದಿಂದ ಬಿದ್ದ ಅಪರೂಪದ ಉಲ್ಕೆ ಇರಬಹುದೇ? ಅಂತೆಲ್ಲ ಅಲ್ಲಿದ್ದ ಬುದ್ಧಿವಂತರು ಊಹೆಗಳನ್ನು ಮಾಡಿದರು. ಆಕಾಶದಿಂದ ಬಿದ್ದ ಈ ವಸ್ತು, ತಣ್ಣಗೆ ಕೊರೆಯುತ್ತಿತ್ತಂತೆ, ಅದನ್ನು ಮುಟ್ಟಿ, ಮೂಸಿ ನೋಡಿದ ಕೆಲವರು, ತಮ್ಮ ಕೈಗೆ ಸಿಕ್ಕಷ್ಟನ್ನು ಎತ್ತಿಕೊಂಡು ಬಟ್ಟೆ ಮತ್ತು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿ ಮನೆಗೆ ತೆಗೆದುಕೊಂಡು ಹೋದರು, ಅವರಲ್ಲಿ, ಕೆಲವರು ಇದು ಕರಗಿ ಹೋದೀತು ಅಂತ ಭಯದಿಂದ ಫ್ರಿಜ್‌ನಲ್ಲೂ ಹಾಕಿಟ್ಟರಂತೆ.

ಸರಿ, ಆಕಾಶದಿಂದ ಇಂಥ ಅಮೂಲ್ಯವಾದ ವಸ್ತು ಬಿದ್ದಮೇಲೆ ಆ ವಿಚಾರ ಅಧಿಕಾರಿಗಳನ್ನು ತಲುಪದೇ ಇರುತ್ತದೆಯೇ?. ಮಧ್ಯಾಹ್ನವಾಗುವಷ್ಟರಲ್ಲಿ ಹವಾಮಾನ ಇಲಾಖೆಯ ತಜ್ಞರ ಒಂದು ತಂಡ ಆ ಊರಿಗೆ ಬಂತು, ಆಗಲೇ ಗೊತ್ತಾಗಿದ್ದು ಆಕಾಶದಿಂದ ಬಿದ್ದ ಈ ವಸ್ತು ಏನು ಅಂತ. ಅದು ಗೊತ್ತಾಗಿದ್ದೇ ತಡ ಕೆಲವರಂತೂ ಯಾರಿಗೂ ಹೇಳದಂತೆ ಬಿರುಸಾಗಿ ತಮ್ಮ ಮನೆಯ ಕಡೆ ನಡೆದರಂತೆ. ಏಕೆಂದರೆ, ತಮ್ಮ ಮನೆಯ ಫ್ರಿಜ್‌ನಲ್ಲಿ ಇಟ್ಟ ಆ ಅಮೂಲ್ಯ ವಸ್ತುವನ್ನು ಹೊರಗೆಸೆದು, ಫ್ರಿಜ್ ಶುದ್ಧಗೊಳಿಸಬೇಕಿತ್ತಲ್ಲ ಅದಕ್ಕೆ. ಹಾಗೆ ಮಾಡುವಂಥದ್ದೇನಾಯಿತು ಅಂದ್ರಾ, ಸ್ವಾಮಿ ಆಕಾಶದಿಂದ ಬಿದ್ದಿದ್ದು ಬೇರೆ ಏನೂ ಅಲ್ಲ, ಆ ಊರಿನ ಮೇಲೆ ಹಾರಿಹೋಗುವ ಹಲವಾರು ವಿಮಾನಗಳಲ್ಲಿ ಯಾವುದೋ ಒಂದು ವಿಮಾನದ ಶೌಚಾಲಯದಿಂದ ಕೆಳಕ್ಕೆ ಬಿದ್ದಿದ್ದ ಹೊಲಸಿನ ದೊಡ್ಡ ಉಂಡೆ. ಮನುಷ್ಯರ ಮಲಮೂತ್ರದೊಂದಿಗೆ ಶೌಚಾಲಯದ ಕ್ರಿಮಿನಾಶಕ ದ್ರಾವಣಗಳೂ ಸೇರಿ, ವಿಮಾನದಲ್ಲಿನ ಎಸಿ ಮತ್ತು ವಾತಾವರಣದ ಚಳಿಯಲ್ಲಿ ನೀಲಿ ಮಂಜುಗಡ್ಡೆಯಂತೆ ಗಟ್ಟಿಯಾಗಿ ಕೆಳಗೆ ಬಿದ್ದಿತ್ತು ಅಷ್ಟೇ.

ಆದರೆ, ಯಾವುದೇ ವಿಮಾನದ ಶೌಚಾಲಯದ ತ್ಯಾಜ್ಯ ನೆಲದ ಮೇಲೆ ಬೀಳಬಾರದು. ಈ ಹಿಂದೆ, ಮಧ್ಯಪ್ರದೇಶದ ಕೆಲವು ಹಳ್ಳಿಗಳಲ್ಲಿ ವಿಮಾನದಿಂದ ತ್ಯಾಜ್ಯ ಬಿದ್ದಿದ್ದು ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ, ಅಲ್ಲಿ ಹಾರುವ ವಿಮಾನಗಳ ಕಂಪನಿಗಳಿಗೆ ಸುಪ್ರೀಂಕೋರ್ಟಿನ ಹಸಿರು ಪೀಠ ದಂಡವನ್ನೂ ವಿಧಿಸಿತ್ತು. ಒಟ್ಟಿನಲ್ಲಿ, ಫಾಜಿಲ್‌ಪುರದ ಜನರು, ಆಕಾಶದಿಂದ ಬೀಳುವುದೆಲ್ಲ ಅಮೂಲ್ಯ ವಸ್ತು ಆಗಿರುವುದಿಲ್ಲ ಅನ್ನೋ ಪಾಠವನ್ನು ಇನ್ನೆಂದೂ ಮರೆಯದ ರೀತಿಯಲ್ಲಿ ಕಲಿತುಕೊಂಡರು ಅನ್ನಿ.


ಸಂಬಂಧಿತ ಟ್ಯಾಗ್ಗಳು

Air craft Poop ವಿಮಾನ ಪ್ಲಾಸ್ಟಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ