‘ಕನ್ನಡ ಕಲಿಯದಿರುವುದು ನೋವಿನ ವಿಚಾರ’

centenary celebration of the Kannada Sahitya Parishad

22-01-2018

ಬೆಂಗಳೂರು : ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾರೇ ಅಡ್ಡ ಬಂದರೂ ಸಹಿಸಲ್ಲ, ಅದನ್ನು ನಿವಾರಿಸುವ ಶಕ್ತಿ ನಮ್ಮಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕನ್ನಡದ ವಾತಾವರಣ ನಿರ್ಮಾಣವೇ ನಮ್ಮ ಗುರಿ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಹಿಂದೆ ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ. ನಾನು ಸಾಹಿತಿಯಲ್ಲ. ಆದರೆ ನಾಡು, ನುಡಿಯ ಬಗ್ಗೆ ಅಭಿಮಾನವಿದೆ. ಭಾಷೆಯ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾವು ಕನ್ನಡಿಗರೇ ಅಲ್ಲ ಎಂದರು.

ತಮಿಳುನಾಡು, ಕೇರಳ, ಆಂಧ್ರದಲ್ಲಿರುವಂತೆ ಯಾರೇ ಇಲ್ಲಿಗೆ ಬಂದರೂ ಕನ್ನಡ ಕಲಿಯಬೇಕು. ಕನ್ನಡ ಕಲಿಯದೇ ಬದುಕುವುದು ನೋವಿನ ವಿಚಾರ ಎಂದರು. ಸಾಹಿತ್ಯ ಪರಿಷತ್ತು ಕೂಡಾ ಈ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರು. ನಾವೆಲ್ಲರೂ ಕನ್ನಡದ ವಾತಾವರಣ ನಿರ್ಮಾಣ ಮಾಡೋಣ ಎಂದರು. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಅದರ ಸ್ಮರಣಾರ್ಥ  ಭವನ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅದಕ್ಕೆ ಐದು ಕೋಟಿ ರೂ. ಮಂಜೂರು ಮಾಡಿ ಶಂಕುಸ್ಥಾಪನೆಯನ್ನೂ ಮಾಡಿದ್ದೆ. ಇಂದು ಅದರ ಉದ್ಘಾಟನೆ ಮಾಡುತ್ತಿದ್ದೇನೆ. ಇದು ನನಗೆ ಇಮ್ಮಡಿ ಸಂತೋಷ ತಂದಿದೆ. ಇಂತಹ ಅವಕಾಶ ಸಿಗುವುದು ಅಪರೂಪ. ಅತ್ಯಂತ ಸಂತೋಷದಿಂದ ಹೊಸ ಶತಮಾನೋತ್ಸವ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದೇನೆ ಎಂದರು.

ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಲಿ ಎಂದು ಹಾರೈಸುತ್ತೇನೆ. ಇದು ಆರೂವರೆ ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಜನರನ್ನು ಪ್ರತಿನಿಧಿಸುವ ಸಂಸ್ಥೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಸಂಸ್ಥೆ. ಅದಕ್ಕೆ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡುತ್ತದೆ. ಇಲ್ಲಿಯವರೆಗೂ ಸಾಹಿತ್ಯ ಪರಿಷತ್ತು ಏನು ಕೇಳಿದರೂ ಇಲ್ಲ ಎಂದಿಲ್ಲ. ನಾನು ಹಣಕಾಸು ಮಂತ್ರಿಯಾಗಿದ್ದಾಗ ಪರಿಷತ್ತಿನ ಸಿಬ್ಬಂದಿಗೆ ವೇತನ ನೀಡಲು ಅನುದಾನ ಕೋರಿದರು. ಕೂಡಲೇ ಮಂಜೂರು ಮಾಡಿದೆ. ಈಗ ಸರ್ಕಾರ ವರ್ಷಕ್ಕೆ 15 ಕೋಟಿ ರೂ. ಭರಿಸುತ್ತಿದೆ.

ಮನು ಬಳಿಗಾರ್ ಸಿ ಅಂಡ್ ಆರ್ ನಿಯಮಗಳು ಪರಿಷತ್ತಿನ ಸಿಬ್ಬಂದಿಗೆ ಅನ್ವಯಿಸುತ್ತಿಲ್ಲ ಎಂದಿದ್ದಾರೆ. ಧಾರವಾಡದ ವಿದ್ಯಾವರ್ಧಕ ಸಂಘ, ರಾಮನಗರದ ಜಾನಪದ ಪರಿಷತ್ತಿಗೆ ಈ ನಿಯಮಗಳು ಅನ್ವಯಿಸುತ್ತಿವೆ. ಈ ಕುರಿತು ಕ್ರಮ ತೆಗೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಹೇಳಿದ್ದೇನೆ ಎಂದರು. ಜನಹಿತ ಇರುವ ಸಾಹಿತ್ಯ ರಚನೆಯಾಗಲಿ ಎನ್ನುವುದು ನನ್ನ ಆಸೆ. ಸಾಹಿತ್ಯದಲ್ಲಿ ಸಮಾಜದ ಹಿತಾಸಕ್ತಿ ಅಡಗಿರಬೇಕು. ಆಗ ಮಾತ್ರ ಒಳ್ಳೆಯ ಸಾಹಿತ್ಯ ನಿರ್ಮಾಣ ಆಗಲು ಸಾಧ್ಯ ಎಂದರು. ನಾಡು, ನುಡಿ, ನೆಲ, ಜಲಕ್ಕೆ ಯಾವ ಕಾರ್ಯಕ್ರಮ ಹಮ್ಮಿಕೊಂಡರೂ ಎಲ್ಲ ಚಟುವಟಿಕೆಗಳಿಗೆ ಸರ್ಕಾರ ಸಹಾಯ ನೀಡುತ್ತದೆ ಎಂಬ ಭರವಸೆ ನೀಡಿದರು. ಜನರ ಹಿತ ಇದ್ದಲ್ಲಿ ಅಧಿಕಾರಿಗಳು ಉಂಟು ಮಾಡುವ ತೊಂದರೆಗಳನ್ನು ನಿವಾರಿಸುವ ಶಕ್ತಿ ಇದೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah literature ತಮಿಳುನಾಡು ಕೇರಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ