ಬಡವರುv/sಶ್ರೀಮಂತರು

richest v/s poor

22-01-2018

ಭಾರತದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಮತ್ತು ಶ್ರೀಮಂತರು ಮತ್ತಷ್ಟು ದೊಡ್ಡ ಶ್ರೀಮಂತರಾಗುತ್ತಿದ್ದಾರೆ ಅನ್ನೋ ಮಾತನ್ನು ನಾವು ನೀವೆಲ್ಲ ತುಂಬಾ ವರ್ಷಗಳಿಂದಲೂ ಕೇಳ್ತಾನೇ ಬಂದಿದ್ದೇವೆ. ಆದರೆ, ವಿಚಾರ ಏನಪ್ಪ ಅಂದ್ರೆ, ಆ ಮಾತು ಇವತ್ತಿಗೂ ಸತ್ಯ ಅನ್ನೋದು.

ಆಕ್ಸ್‌ಫಾಮ್ ಸಂಸ್ಥೆಯವರು ನಡೆಸುವ ವಾರ್ಷಿಕ ಸಮೀಕ್ಷೆ ಪ್ರಕಾರ, ಕಳೆದ ವರ್ಷ ದೇಶದಲ್ಲಿ ಸೃಷ್ಟಿಯಾದ ಸಂಪತ್ತಿನಲ್ಲಿ ಶೇ.73ರಷ್ಟನ್ನು ಸಂಪತ್ತನ್ನು, ದೇಶದ ಶೇ.1 ರಷ್ಟು ಶ್ರೀಮಂತರು ಹಂಚಿಕೊಂಡಿದ್ದಾರೆ. ಅಂದರೆ, ದೇಶದಲ್ಲಿ ಸೃಷ್ಟಿಯಾದ ಸಂಪತ್ತಿನ ಮೌಲ್ಯ ಒಂದು ಲಕ್ಷ ರೂಪಾಯಿ ಎಂದಿಟ್ಟುಕೊಳ್ಳೋಣ, ಅದರಲ್ಲಿ 73 ಸಾವಿರ ರೂಪಾಯಿಗಳನ್ನು ದೇಶದ ಒಂದು ಕೋಟಿ ಮೂವತ್ತು ಲಕ್ಷ ಜನ ಹಂಚಿಕೊಂಡಿದ್ದಾರೆ. ಉಳಿದ 27 ಸಾವಿರ ರೂಪಾಯಿಗಳನ್ನು 128 ಕೋಟಿ 70 ಲಕ್ಷ ಜನ ಹಂಚಿಕೊಂಡಿದ್ದಾರೆ.

ದೇಶದಲ್ಲಿನ ಜನರ ಹಣಕಾಸಿನ ಪರಿಸ್ಥಿತಿಯಲ್ಲಿನ ಅಸಮಾನತೆಯನ್ನು ಎತ್ತಿ ತೋರಿಸುವ ಈ ವಿಚಾರ ಆತಂಕ ಹುಟ್ಟಿಸುತ್ತದೆ. ಆದರೆ, ಜಗತ್ತಿನ ಮಟ್ಟದಲ್ಲಿ ಹಣಕಾಸಿನ ತಾರತಮ್ಯ ಇನ್ನೂ ಕೆಟ್ಟದಾಗಿದೆ. ಕಳೆದ ವರ್ಷ, ಪ್ರಪಂಚದಲ್ಲಿ ಸೃಷ್ಟಿಯಾದ ಸಂಪತ್ತಿನಲ್ಲಿ ದೊಡ್ಡ ಪ್ರಮಾಣ ಅಂದರೆ, ಶೇ.82ರಷ್ಟು ಸಂಪತ್ತು ಕೇವಲ ಶೇ.1 ರಷ್ಟು ಜನರ ಜೇಬಿಗೆ ಸೇರಿದೆ. ಇನ್ನು ಶೇ.99ರಷ್ಟು ಜನ ಕೇವಲ ಶೇ.18ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ. ವಿಶ್ವದ 760 ಕೋಟಿ ಜನರ ಪೈಕಿ 370 ಕೋಟಿ ಜನರ ಸಂಪತ್ತಿನಲ್ಲಿ ಕಳೆದ ವರ್ಷ ಯಾವುದೇ ರೀತಿ ಏರಿಕೆ ಆಗಿಲ್ಲ.

ಕಳೆದ ವರ್ಷ ಭಾರತದ ಶೇ.1 ರಷ್ಟು ಅತಿ ಶ್ರೀಮಂತರ ಸಂಪತ್ತು 21 ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ. ಇದು, ಇಡೀ ದೇಶಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನ ಒಟ್ಚಾರೆ ಮೊತ್ತಕ್ಕೆ ಸಮನಾಗಿದೆ.

2017ರಲ್ಲಿ ಭಾರತದ ಬಿಲಿಯನೇರ್ ಗಳ ಪಟ್ಟಿಗೆ ಇನ್ನೂ 17 ಜನ ಸೇರಿದ್ದು, 101ಕ್ಕೆ ಏರಿದೆ. ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಏರುತ್ತಿರುವುದು ಆರ್ಥಿಕತೆಯ ಪ್ರಗತಿಯ ಸಂಕೇತವಲ್ಲ, ಬದಲಿಗೆ ಆರ್ಥಿಕ ವ್ಯವಸ್ಥೆಯ ವಿಫಲವಾಗುತ್ತಿರುವುದರ ಸಂಕೇತ ಎಂದು ತಜ್ಞರು ಹೇಳುತ್ತಾರೆ.

ದೇಶದ ಹೊಟ್ಟೆ ಹಸಿವು ನೀಗಿಸಲು ಶ್ರಮಿಸುತ್ತಿರುವ ರೈತರು, ಕಟ್ಟಡ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರು, ಕನಿಷ್ಟ ಮಟ್ಟದ ಬದುಕನ್ನು ನಡೆಸುವುದಕ್ಕೂ ಕಷ್ಟಪಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ತಮ್ಮ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೂ ಅವರಲ್ಲಿ ಹಣವಿಲ್ಲ. ದಿನಕ್ಕೆ ಎರಡು ಹೊತ್ತು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲೇ ಅವರು ಸುಸ್ತಾಗಿಹೋಗಿಬಿಡುತ್ತಾರೆ.

ದೇಶದ ಗ್ರಾಮಾಂತರ ಪ್ರದೇಶದ ಒಬ್ಬ ಕೂಲಿಕಾರ್ಮಿಕ 50 ವರ್ಷಗಳ ಕಾಲ ಒಂದೇಸಮ ಕೆಲಸ ಮಾಡಿ ದುಡಿಯುವಷ್ಟು ಹಣವನ್ನು, ಭಾರತದ ಒಂದು ಗಾರ್ಮೆಂಟ್ ಕಂಪನಿಯ ಉನ್ನತ ಮಟ್ಟದ ಉದ್ಯೋಗಿ, ಕೇವಲ ಹದಿನೇಳೂವರೆ ದಿನಗಳಲ್ಲಿ ದುಡಿಯುತ್ತಾನೆ ಎಂದು ಆಕ್ಸ್‌ಫಾಮ್ ಸಮೀಕ್ಷೆ ಹೇಳುತ್ತದೆ.

ಒಂದು ಕಡೆ, ಭಾರತದ ನೂರಾರು ಕೋಟಿ ಜನರು ಜೀವನ ಸರಿದೂಗಿಸಲು ಒದ್ದಾಡುತ್ತಿದ್ದರೆ, ಮತ್ತೊಂದು ಕಡೆ ಶ್ರೀಮಂತರು ಅತಿ ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಹೆಚ್ಚು ಉದ್ಯೋಗಗಳ ಸೃಷ್ಟಿ, ಕೃಷಿಗೆ ಹೆಚ್ಚು ಪ್ರೋತ್ಸಾಹ ಮತ್ತು ಸಾಮಾಜಿಕ ಸಬಲೀಕರಣ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಇದರ ಜೊತೆಗೆ, ತೆರಿಗೆ ಕಳ್ಳರನ್ನು, ಕಪ್ಪು ಹಣದ ಕುಳಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು. ಅತಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಬೇಕು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಯಾವುದೇ ರೀತಿ ತೆರಿಗೆ ವಿನಾಯಿತಿ ನೀಡುವುದನ್ನು ನಿಲ್ಲಿಸಬೇಕು.


ಸಂಬಂಧಿತ ಟ್ಯಾಗ್ಗಳು

Poor survey ಅಸಮಾನತೆ ವಿನಾಯಿತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ