ರೈಲಲ್ಲಿ 19 ಕೆಜಿ ಚಿನ್ನ ಕಳ್ಳತನ

19 kg gold theft in kurla express train

20-01-2018

ಬೆಂಗಳೂರು: ಮುಂಬೈಯಿಂದ ರೈಲಿನಲ್ಲಿ ನಗರಕ್ಕೆ ತೆಗೆದುಕೊಂಡು ಬರುತ್ತಿದ್ದ ಉದ್ಯಮಿಯೊಬ್ಬರ 19 ಕೆಜಿ ಚಿನ್ನದ ಬಿಸ್ಕೆಟ್‍ಗಳನ್ನು ದುಷ್ಕರ್ಮಿಗಳು ಸಿನಿಮಿಯ ರೀತಿಯಲ್ಲಿ ದೋಚಿ ಪರಾರಿಯಾಗಿದ್ದಾರೆ. ಮುಂಬೈ ಮೂಲದ ಉದ್ಯಮಿ ಬಿಜಯ್ ಅವರು ಮುಂಬೈಯಿಂದ 19 ಕೆಜಿ ತೂಕದ ಚಿನ್ನದ ಬಿಸ್ಕೆಟ್‍ಗಳನ್ನು ಬ್ಯಾಗ್‍ನಲ್ಲಿಟ್ಟುಕೊಂಡು ನಗರದ ದಿಣ್ಣೂರು ಮುಖ್ಯರಸ್ತೆಯ ಕಚೇರಿಯೊಂದಕ್ಕೆ ತಲುಪಿಸಬೇಕಿತ್ತು.

ಬಿಜಯ್ ಅವರು ಬಟ್ಟೆಯ ಬ್ಯಾಗ್ ಜೊತೆಗೆ ಚಿನ್ನ ಇಟ್ಟಿರುವ ಬ್ಯಾಗ್ ಸೇರಿ 2 ಬ್ಯಾಗ್‍ಗಳನ್ನು ಕುರ್ಲಾ ಎಕ್ಸ್ ಪ್ರೆಸ್ ರೈಲಿನಲ್ಲಿಟ್ಟುಕೊಂಡು ಹೊರಟಿದ್ದು, ಮಾರ್ಗಮಧ್ಯೆ ಆಂಧ್ರಪ್ರದೇಶದ ಧರ್ಮಾವರಂ ಬಳಿಯ ಪ್ರಶಾಂತಿ ನಿಲಯ ಬಳಿ ಚಿನ್ನದ ಬಿಸ್ಕೆಟ್ ಇಟ್ಟಿದ್ದ ಬ್ಯಾಗ್‍ನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಸ್ವಲ್ಪ ದೂರ ರೈಲು ಬಂದ ನಂತರ ಬಿಜಯ್ ಅವರು ತಮ್ಮ ಲಗೇಜ್‍ನ್ನು ನೋಡಿಕೊಂಡು ಅದರಲ್ಲಿ ಚಿನ್ನವಿದ್ದ ಬ್ಯಾಗ್ ಕಳುವಾಗಿತ್ತು. ಕೂಡಲೇ ರೈಲಿನ ಟಿಟಿಗೆ ವಿಷಯ ತಿಳಿಸಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ರೈಲು ಬಂದ ನಂತರ ಇಳಿದು ಇಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂಬೈನಿಂದ ಬ್ಯಾಗಿನಲ್ಲಿ ಚಿನ್ನದ ಬಿಸ್ಕೆಟ್‍ಗಳನ್ನಿಟ್ಟುಕೊಂಡು ಹೊರಟಿದ್ದನ್ನು ಗಮನಿಸಿರುವ ದುಷ್ಕರ್ಮಿಗಳು ನನ್ನನ್ನು ಹಿಂಬಾಲಿಸಿ ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತಿ ಚಿನ್ನದ ಬ್ಯಾಗನ್ನು ಭದ್ರವಾಗಿಟ್ಟುಕೊಂಡಿದ್ದರೂ ನನ್ನ ಗಮನವನ್ನು ಬೇರಡೆ ಸೆಳೆದು ಕಳವು ಮಾಡಿದ್ದಾರೆ ಎಂದು ಬಿಜಯ್ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬಿಜಯ್ ಅವರು ಚಿನ್ನದ ವ್ಯಾಪಾರಿಯಾಗಿದ್ದು ಚಿನ್ನದ ಬಿಸ್ಕೆಟ್‍ಗಳನ್ನು ಹಾಗೂ ಚಿನ್ನಾಭರಣಗಳನ್ನು ನಗರಕ್ಕೆ ತಂದು ದಿಣ್ಣೂರು ಮುಖ್ಯರಸ್ತೆಯ ಕಚೇರಿ ಮೂಲಕ ಜ್ಯುವೆಲರಿ ಅಂಗಡಿಗಳಿಗೆ ಸಗಟಾಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕಂಟೋನ್ಮೆಂಟ್ ಪೊಲೀಸರು ಬಿಜಯ್‍ನಿಂದ ಮಾಹಿತಿ ಪಡೆದು ಧರ್ಮಾವರಂ ರೈಲ್ವೆ ಪೊಲೀಸರಿಗೂ ಮಾಹಿತಿ ನೀಡಿ ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Train gold biscuit ಮುಂಬೈ ಎಕ್ಸ್ ಪ್ರೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ