ವೆಂಕಯ್ಯ ನಾಯ್ಡು ಪಾದರಕ್ಷಾ ಪ್ರಸಂಗ

Venkaiah Naidu and Barefoot

19-01-2018

ನೀವು ದೇವಸ್ಥಾನಕ್ಕೊ, ಜಾತ್ರೆಗೋ  ಅಥವ ಯಾರಾದರೂ ನೆಂಟರು ಅಥವ ಸ್ನೇಹಿತರ ಮನೆಗೆ ಹೋಗಿರ್ತೀರಿ. ಉಭಯ ಕುಶಲೋಪರಿ ನಡೆಸಿ ತಿಂಡಿಯನ್ನೋ, ಊಟವನ್ನೋ ಮಾಡಿ ಹೊರಬರುವಷ್ಟರಲ್ಲಿ ನಿಮ್ಮ ಚಪ್ಪಲಿ ಅಥವ ಶೂ ಅಲ್ಲಿಂದ ಕಾಣೆಯಾಗಿದ್ದರೆ ನಿಮಗೆ ಹೇಗಾಗಬೇಡ? ಇಂಥ ಒಂದು ಸನ್ನಿವೇಶ, ಸಾಮಾನ್ಯರು ಅನ್ನಿಸಿಕೊಂಡ ನಮಗೇ ಮುಜುಗರವುಂಟು ಮಾಡುವುದಾದರೆ ಇನ್ನು ದೇಶದ ಉಪ ರಾಷ್ಟ್ರಪತಿಗೆ ಹೀಗಾಗಾದರೆ ಅವರ ಪರಿಸ್ಥಿತಿ ಹೇಗಾಗಿರಬೇಕು ಹೇಳಿ?

ಹೌದು, ಇಂಥ ಮುಜುಗರದ ಪರಿಸ್ಥಿತಿ ಎದುರಿಸಿದವರು ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮತ್ತು ಈಗ ದೇಶದ ಉಪರಾಷ್ಟ್ರಪತಿ ಸ್ಥಾನ ಅಲಂಕರಿಸಿರುವ ವೆಂಕಯ್ಯ ನಾಯ್ಡು ಅವರಿಗೆ. ಇಲ್ಲಿ ಆಗಿದ್ದಿಷ್ಟೇ, ಹಲವಾರು ಅಧಿಕೃತ ಕಾರ್ಯಕ್ರಮಗಳಿಗಾಗಿ ಬೆಂಗಳೂರಿಗೆ ಬಂದಿದ್ದ ವೆಂಕಯ್ಯ ನಾಯ್ಡು ಅವರನ್ನು ಬೆಂಗಳೂರಿನ ಸಂಸದ ಪಿ.ಸಿ.ಮೋಹನ್ ಅವರು, ಬೆಳಗಿನ ತಿಂಡಿಗಾಗಿ ತಮ್ಮ ಮನೆಗೆ ಆಹ್ವಾನಿಸಿದ್ದರು. ಸಚಿವ ಸದಾನಂದ ಗೌಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಶಾಸಕ ಸಿ.ಟಿ.ರವಿ ಕೂಡ ಅಲ್ಲಿಗೆ ಬಂದಿದ್ದರು. ಎಲ್ಲರೂ ಕುಳಿತು ಆರಾಮವಾಗಿ ಮಾತುಕತೆ ನಡೆಸುತ್ತಾ ತಿಂಡಿ ತಿಂದು ಹೊರಬಂದರು. ವೆಂಕಯ್ಯನವರು ಕಾರು ಹತ್ತುವ ಮುನ್ನ ಶೂ ಹಾಕಿಕೊಳ್ಳಲು ಹೋದಾಗಲೇ ಗೊತ್ತಾಗಿದ್ದು, ಅವು ಅಲ್ಲಿಲ್ಲ ಅನ್ನುವುದು, ಎಷ್ಟು ಹುಡುಕಿದರೂ ಅವರ ಶೂಗಳು ಸಿಗಲೇ ಇಲ್ಲ. ಸಾಕಷ್ಟು ಅಭಿಮಾನಿಗಳು ಮತ್ತು ಹಿತೈಷಿಗಳು ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಲು ಅಲ್ಲಿಗೆ ಬಂದಿದ್ದರು. ಹೀಗಾಗಿ, ಯಾರಾದರೂ ತಮ್ಮ ಶೂ ಬದಲು ವೆಂಕಯ್ಯನವರ ಶೂ ಹಾಕಿಕೊಂಡು ಹೋಗಿರಬಹುದು, ಅಥವ ಬಿಡಿ ಅದನ್ನು ಹೇಳುವುದು ಬೇಡ, ಒಟ್ಟಿನಲ್ಲಿ ಶೂಗಳು ಮಾಯ ಅಷ್ಟೇ.

ಸರಿ ಈಗೇನು ಮಾಡುವುದು? ನಾಯ್ಡು ಅವರು ನಾಗರಬಾವಿಯಲ್ಲಿರುವ ಐಸೆಕ್ ನಲ್ಲಿ ಮುಖ್ಯ ಅತಿಥಿಯಾಗಿ  ಭಾಷಣ ಮಾಡಲು ಹೋಗಬೇಕಾಗಿತ್ತು. ದೇಶದ ಉಪರಾಷ್ಟ್ರಪತಿ ಬರಿಗಾಲಿನಲ್ಲಿ  ಹೋಗಲು ಸಾಧ್ಯವೇ? ಹೀಗಾಗಿ, ಶೂ ಪತ್ತೆಯಾಗುವುದಿಲ್ಲ ಅನ್ನುವುದು ಖಚಿತವಾಗುತ್ತಿದ್ದಂತೆ ನಾಯ್ಡು ಸಹಾಯಕರು, ತಮ್ಮ ಸಾಹೇಬರ ಶೂ ಸೈಜ್ ಗುರುತು ಮಾಡಿಕೊಂಡು ಹತ್ತಿರ ಯಾವುದಾದರೂ ಅಂಗಡಿ ತೆಗೆದಿದೆಯೇ ಎಂದು ನೋಡಲು ಹೊರಟರು.

ಆನಂತರ ಏನಾಗಿರಬಹುದು? ಇನ್ನೇನು? ಇಷ್ಟವಾಯಿತೋ ಇಲ್ಲವೋ ಹೊಸ ಶೂ ಹಾಕಿಕೊಂಡು ಅಲ್ಲಿಂದ ಹೊರಟಿರುತ್ತಾರೆ ಅಷ್ಟೇ. ಒಟ್ಟಿನಲ್ಲಿ ವೆಂಕಯ್ಯ ನಾಯ್ಡು ದಿನ ಭವಿಷ್ಯದಲ್ಲಿ ಇವತ್ತು ಹೊಸ ಪಾದರಕ್ಷೆ ಯೋಗವಿತ್ತೆಂದು ಕಾಣುತ್ತದೆ. 


ಸಂಬಂಧಿತ ಟ್ಯಾಗ್ಗಳು

venkaiah naidu foot ಸಹಾಯಕರು ಪಾದರಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ