‘ಸಂಶೋಧನೆಗಳ ಫಲ ರೈತರನ್ನು ತಲುಪಲಿ’

Researches benefit should reach farmers

19-01-2018

ಬೆಂಗಳೂರು: ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ನಡೆದರೆ ಮಾತ್ರ ಸಾಲದು. ಅದರ ಫಲ  ರೈತರನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆಗಳು ಸಾರ್ಥಕವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೃಷಿ ಇಲಾಖೆ ವತಿಯಿಂದ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಸಿಎಂ ಚಾಲನೆ ನೀಡಿರು.

ಈ ವೇಳೆ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನವಾದ ದೇಶ. ನಮ್ಮ ದೇಶದಲ್ಲಿ ವೈವಿಧ್ಯಮ ಹವಾಮಾನವಿದೆ. ಅದೇ ರೀತಿ ವಿವಿಧ ಬೆಳೆಗಳನ್ನೂ ನಾವು ಬೆಳೆಯುತ್ತೇವೆ. ಬೆಳೆಯುವ ರೈತರಿಗೆ ಕೃಷಿ ಹೆಚ್ಚು ಆಕರ್ಷಣೀಯವಾಗಬೇಕು. ಕೃಷಿ ಅವಲಂಬಿತರ ಆದಾಯ ಹೆಚ್ಚಾಗಬೇಕು.ಇದಕ್ಕಾಗಿ ಹೊಸ ಹೊಸ ಅವಿಷ್ಕಾರಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

60 ವರ್ಷಗಳಿಂದೀಚೆಗೆ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ಆಹಾರ ಪದಾರ್ಥಗಳ ರಫ್ತಿಗಾಗಿ ಕೃಷಿಯಲ್ಲಿ ಹಳೆಯ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಯೆಡೆಗೆ ಸಾಗುತ್ತಿದ್ದೇವೆ. ನಾವು ಸಣ್ಣವರಿದ್ದಾಗ ಕೃಷಿಯಲ್ಲಿ ರಾಸಾಯನಿಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ. ಈಗ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಆದರೆ, ನಮ್ಮ ಪೂರ್ವಿಕರು ಹೆಚ್ಚಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದರು. ಇಳುವರಿ ಹೆಚ್ಚಿಸಲು ಹೆಚ್ಚಾಗಿ ರಾಸಾಯನಿಕಗಳನ್ನು ಬಳಸಲಾಯಿತು. ಇದರಿಂದ ನಾವು ಆಹಾರದ ಭದ್ರತೆ ಸಾಧಿಸಿದ್ದೇವೆ. ಹಾಗೆಯೇ ಅದರಿಂದ ಆದ ದುಷ್ಪರಿಣಾಮಗಳ ಕಡೆಗೂ ಕಣ್ಣು ಹಾಯಿಸಬೇಕು. ಆ ಕುರಿತು ಗಂಭೀರವಾಗಿ ಆಲೋಚಿಸುವ ಸ್ಥಿತಿಗೆ ಬಂದಿದ್ದೇವೆ.

ಮಣ್ಣಿನ ಫಲವತ್ತತೆ, ಪರಿಸರ ಹಾಗೂ ಮನುಷ್ಯರ ಆರೋಗ್ಯವೂ ಇದರಿಂದ ಕೆಟ್ಟಿದೆ. ರಾಸಾಯನಿಕಗಳ ಬಳಕೆಯಿಂದ ಅನೇಕ ದುಷ್ಪರಿಣಾಮಗಳನ್ನು ನಾವು ಕಾಣುತ್ತಿದ್ದೇವೆ.

ರೈತರ ಆದಾಯ, ಉತ್ಪಾದನೆ ಹೆಚ್ಚಾಗಬೇಕು. ಅಂತೆಯೇ ದುಷ್ಪರಿಣಾಮಗಳ ನಿವಾರಣೆ ಆಗಬೇಕು. ಇದಕ್ಕಾಗಿಯೇ ಕೃಷಿ ಕ್ಷೇತ್ರದಲ್ಲಿ ಹಾಗೂ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಹೊಸ ಚಿಂತನೆ, ಅವಿಷ್ಕಾರ, ಪ್ರಯೋಗಗಳು ಆರಂಭವಾಗಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ. ಭೂಮಿ, ನೀರಾವರಿ, ಮಣ್ಣು, ಮನುಷ್ಯನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗಳನ್ನು ಮಾಡುವುದು ಅತ್ಯಂತ ಅವಶ್ಯ.

ಭಾರತದಲ್ಲಿ ರಾಜಸ್ತಾನ ಹೊರತುಪಡಿಸಿದರೆ ಕರ್ನಾಟಕದಲ್ಲಿ ಹೆಚ್ಚು ಒಣಭೂಮಿ ಇದೆ. ಇಲ್ಲಿ ಮಳೆ ಕಡಿಮೆಯಾಗುವುದರ ಜೊತೆಗೆ ಜಾಗತಿಕ ತಾಪಮಾನದ ಪರಿಣಾಮವಾಗಿ ಹವಾಮಾನದಲ್ಲಿ ಹಲವಾರು ಬದಲಾವಣೆಗಳಾಗುತ್ತಿದೆ.

ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಇಳುವರಿಯೂ ಕಡಿಮೆಯಾಗುತ್ತಿದೆ. ಈ ಹಿಂದೆ ಹತ್ತಾರು ಎಕರೆ ಜಮೀನು ಹೊಂದಿದವರ ಬಳಿ ಈಗ 10-20 ಗುಂಟೆ ಇದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಜನ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಬೇರೆ ಬೇರೆ ಉದ್ಯೋಗಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿದ್ಯಾವಂತರು ಉದ್ಯೋಗ ಅರಸಿ ಹೋಗುವುದು ಬೇರೆ. ಆದರೆ, ಕೃಷಿ ಅವಲಂಬಿತರೇ ವಲಸೆ ಹೋಗುತ್ತಿದ್ದಾರೆ. ಕೃಷಿಯ ವಾಸ್ತವಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸುವುದು, ಯುವಕರ ವಲಸೆ ತಪ್ಪಿಸುವುದು, ಕೃಷಿ ಅವಲಂಬನೆಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಸನ್ನಿವೇಶ ಈಗ ನಿರ್ಮಾಣವಾಗಿದೆ.

ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುವ ರಾಜ್ಯವಾಗಿದೆ. ಕಳೆದ ಹದಿನಾರು ವರ್ಷದಲ್ಲಿ ಹದಿಮೂರು ವರ್ಷ ಬರಗಾಲ ಇತ್ತು. ಕಳೆದ ಮೂರು ವರ್ಷವಂತೂ ಭೀಕರ ಬರಗಾಲವನ್ನು ನಾವು ಎದುರಿಸಿದ್ದೇವೆ. ಇದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ.

ಹೀಗಾಗಿಯೇ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ 2004ರಲ್ಲಿ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು. 2017ರಲ್ಲಿ ಪರಿಷ್ಕೃತ ನೀತಿಯನ್ನು ಜಾರಿಗೊಳಿಸಿದ್ದೇವೆ.

ಕೃಷಿ ಸಚಿವ ಕೃಷ್ಣ ಬೈರೇಗೌಡರು ಸಾವಯವ ಕೃಷಿ ಪದ್ಧತಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ಎರಡೂವರೆ ಸಾವಿರ ಹೆಕ್ಟೇರ್‍ನಲ್ಲಿದ್ದ ಸಾವಯವ ಕೃಷಿ ಈಗ ಒಂದು ಲಕ್ಷ ಹೆಕ್ಟೇರ್‍ಗೂ ಹೆಚ್ಚಿನ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ರೈತರಲ್ಲಿಯೂ ಸಾವಯವ ಕೃಷಿ ಕುರಿತು ಹೆಚ್ಚಿನ ಆಸಕ್ತಿ ಬರಬೇಕು. ಹೊಸ ತಳಿ, ತಂತ್ರಜ್ಞಾನ, ಯಂತ್ರೋಪಕರಣಗಳು ಕೃಷಿಕರನ್ನು ತಲುಪಬೇಕು. ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಯ ಫಲ ರೈತರಿಗೆ ಸಿಗಬೇಕು. ಆಗ ಮಾತ್ರ ನಡೆಸಿದ ಸಂಶೋಧನೆಗಳು ಸಾರ್ಥಕವಾಗುತ್ತದೆ.

 ಸಿರಿ ಧಾನ್ಯಗಳಲ್ಲಿರುವ ಪೌಷ್ಠಿಕಾಂಶ ಬೇರೆ ಯಾವುದೇ ಧಾನ್ಯಗಳಲ್ಲಿ ಸಿಗುವುದಿಲ್ಲ. ಹೀಗಾಗಿ ಬೆಂಗಳೂರು ಸಿರಿಧಾನ್ಯಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಯಾವುದೇ ಬೆಳೆಗೆ ಮಾರುಕಟ್ಟೆ ಸಿಕ್ಕಾಗ, ಲಾಭದಾಯಕ ಆದಾಗ ಮಾತ್ರ ರೈತ ಅಂತಹ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾನೆ.

ಸುಸ್ಥಿರವಾದ ವ್ಯವಸಾಯ ಪದ್ಧತಿಯನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಸಾವಯವ ಕೃಷಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಸಾವಯವ ಕೃಷಿ ಬೆಳವಣಿಗೆ ಪ್ರಮಾಣ ನಮ್ಮ ರಾಜ್ಯದಲ್ಲಿ ಶೇ. 30ರಿಂದ ಶೇ. 40ರಷ್ಟಿದೆ. ಸುಸ್ಥಿರ ಕೃಷಿ ಬೆಳವಣಿಗೆಯಾಗಬೇಕಾದರೆ ಉತ್ಪಾದನೆ ಹೆಚ್ಚಾಗಬೇಕು. ಬೆಳೆದ ಬೆಲೆಗಳಿಗೆ ಬೆಲೆ ಮತ್ತು ಮಾರುಕಟ್ಟೆ ಸಿಗಬೇಕು. ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ಸಂಶೋಧನೆಗಳಾಗಬೇಕು ಎಂದು ಮುಖ್ಯಮಂತ್ರಿಯವರು ಹೇಳಿದರು.

ನಾನೂ ಸಿರಿಧಾನ್ಯ ಬಳಸುವೆ: ಆರೋಗ್ಯದ ಬಗ್ಗೆ ಜನರಿಗೆ ಹೆಚ್ಚು ಕಾಳಜಿ ಬಂದಿದೆ. ಹೀಗಾಗಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮ ಮನೆಯಲ್ಲೂ ಸಿರಿಧಾನ್ಯ ಬಳಸುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದರು. ಇಂದು ಬೆಳಗ್ಗೆ ಮನೆಯಲ್ಲಿ ನವಣೆ ರೊಟ್ಟಿ ತಿಂದು ಸಮಾರಂಭಕ್ಕೆ ಬಂದಿದ್ದೇನೆ ಎಂದು ಹೇಳಿದ ಅವರು, ಮೇಳದ ಅಂಗವಾಗಿ ಇಲ್ಲಿ ತೆರೆದಿರುವ ಖಾನಾವಳಿಯಲ್ಲಿ ನಾನು ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಈರುಳ್ಳಿ, ಮಸಾಲೆ ದೋಸೆಯ ರುಚಿ ನೋಡಿದೆವು. ಆ ದೋಸೆ ವಿದ್ಯಾರ್ಥಿ ಭವನದ ದೋಸೆಗಿಂತ ಕಡಿಮೆ ಏನಿರಲಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Research Farmers ವಿದ್ಯಾರ್ಥಿ ಸಿರಿಧಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ