ಪೊಲೀಸರಿಗೆ ಸಿಹಿ ಸುದ್ದಿ….

8-hours shift duty for Mumbai police

19-01-2018

ಪೊಲೀಸ್ ಇಲಾಖೆಯಲ್ಲಿನ ಕೆಲಸ ಅಂದ್ರೆ ಸಾಕು, ಎಲ್ಲರಿಗೂ ಗೊತ್ತು, ಅದು ಹೊತ್ತುಗೊತ್ತಿಲ್ಲದ ಮತ್ತು ಪರಿಶ್ರಮದ ಕೆಲಸ ಅಂತ. ಭಾರತದ ಪೊಲೀಸರು ಕೆಲವೊಮ್ಮೆ ಮನೆಗೆ ಹೋಗದೆ, ಸ್ನಾನವಿಲ್ಲದೆ, ಸರಿಯಾಗಿ ಊಟವೂ ಇಲ್ಲದೆ ಒಂದೇ ಸಮನೆ ಮೂರು ನಾಲ್ಕು ದಿನಗಳ ಕಾಲ ಕೆಲಸ ಮಾಡಬೇಕಾಗಿಬರುತ್ತದೆ ಅನ್ನುವುದು ಸಾಮಾನ್ಯ ಸಂಗತಿ. ದಿನಕ್ಕೆ 8 ಗಂಟೆ ಕೆಲಸ ಅನ್ನುವುದು, ಕೇವಲ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅದೃಷ್ಟವಂತರಿಗೆ ಮಾತ್ರ ಅನ್ನುವುದೇ, ನಮ್ಮ ದೇಶದಲ್ಲಿ ನಡೆಯುವ ಮಾತು.

ಆದರೆ, ಇದೀಗ ಒಂದು ಬದಲಾವಣೆ ಆರಂಭವಾಗಿದೆ. 154 ವರ್ಷಗಳ ಇತಿಹಾಸ ಹೊಂದಿರುವ ಮುಂಬೈ ಪೊಲೀಸರು, ಇನ್ನುಮುಂದೆ ದಿನಕ್ಕೆ 8 ಗಂಟೆಗಳ ಶಿಫ್ಟ್ ಹೊಂದಲಿದ್ದಾರೆ. ಸದ್ಯಕ್ಕೆ, ಪೊಲೀಸ್ ಪೇದೆಗಳು ಮತ್ತು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಮಟ್ಟದವರು, ಪ್ರತಿದಿನ 8 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಮಟ್ಟದಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮುಂಬೈ ಪೊಲೀಸ್ ಕಮಿಷನ್ ದತ್ತಾ ಪಡಸಲ್ಗೀಕರ್ ಹೇಳಿದ್ದಾರೆ.

ಆದರೆ, ಈ ರೀತಿ ಹೊಸ ಶಿಫ್ಟ್‌ಗಳಲ್ಲಿ ಕೆಲಸ ಮಾಡುವುದರಿಂದ ಜನಸಾಮಾನ್ಯರಿಗೆ ಪೊಲೀಸರಿಂದ ಸಿಗಬೇಕಾದ ಭದ್ರತೆ ಮತ್ತು ಸೇವೆಗಳಲ್ಲಿ ಯಾವುದೇ ರೀತಿ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗುವುದಂತೆ. ಒಂದೂವರೆ ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮುಂಬೈನಲ್ಲಿ, ಸದ್ಯಕ್ಕೆ 50 ಸಾವಿರ ಪೊಲೀಸ್ ಪೇದೆಗಳು ಕೆಲಸ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪೊಲೀಸರು  ತೀವ್ರತರವಾದ ಮಾನಸಿಕ ಒತ್ತಡ ಮತ್ತು ದೈಹಿಕ ಶ್ರಮಕ್ಕೆ ಗುರಿಯಾಗುತ್ತಿದ್ದಾರೆ. ತಿಂಗಳಲ್ಲಿ ಬಹುತೇಕ ಬಾರಿ, ದಿನಕ್ಕೆ 16 ಗಂಟೆಗಳವರೆಗೂ ಕರ್ತವ್ಯ ನಿರ್ವಹಿಸುವಂಥ ಅನಿವಾರ್ಯತೆಗೆ ಸಿಲುಕುತ್ತಾರೆ, ಹೀಗಾಗಿ, ಕರ್ತವ್ಯ ನಿರತರಾಗಿದ್ದ ವೇಳೆಯೇ ಹೃದಯಾಘಾತ ಮತ್ತಿತರ ಆರೋಗ್ಯದ ಸಮಸ್ಯೆಗಳಿಂದ ಮೃತರಾಗುವ ಪೊಲೀಸರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿರಾಮವೇ ಇಲ್ಲದೆ ಸೇವೆ ಸಲ್ಲಿಸುವ ಪೊಲೀಸರ ಕೌಟುಂಬಿಕ ಜೀವನವೂ ಹಾಳಾಗುತ್ತಿದೆ.

ಇದೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಇದೀಗ ದಿನಕ್ಕೆ 8 ಗಂಟೆಗಳ ಶಿಫ್ಟ್ ಜಾರಿಗೆ ತರುತ್ತಿದ್ದಾರೆ. ಇನ್ನುಮುಂದೆ, ಮುಂಬೈ ನಗರದ ಪೊಲೀಸರು ತಮ್ಮ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಬಹುದು ಮತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇದು, ಪೊಲೀಸರ ಮೇಲಿನ ಒತ್ತಡ ಕಡಿಮೆಗೊಳಿಸಿ, ಜನಸಾಮಾನ್ಯರ ಜೊತೆ ಸೌಜನ್ಯದಿಂದ ವರ್ತಿಸುವುದಕ್ಕೂ ನೆರವಾಗುತ್ತದೆ. ಮುಂಬೈ ಪೊಲೀಸ್‌ ನವರು ಜಾರಿಗೆ ತಂದಿರುವ ಈ ಕ್ರಮ, ಬೆಂಗಳೂರಿನಲ್ಲೂ ಜಾರಿಗೆ ಬರಲಿ. ನಮ್ಮ ಬೆಂಗಳೂರಿನ ಪೊಲೀಸರೂ ಕೂಡ ಆರೋಗ್ಯವಂತರಾಗಿ, ಸಮಚಿತ್ತರಾಗಿ ಕೆಲಸ ಮಾಡುವಂತಾಗಲಿ ಅನ್ನುವುದು ನಗರದ ನಾಗರಿಕರ ಆಶಯ.


ಸಂಬಂಧಿತ ಟ್ಯಾಗ್ಗಳು

Mumbai shift work ಅದೃಷ್ಟವಂತ ಬದಲಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ