'ಕಾಶಿನಾಥ್ ಕನ್ನಡ ಚಿತ್ರರಂಗದ ಆಸ್ತಿ'18-01-2018

ಬೆಂಗಳೂರು: ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶೀನಾಥ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಶೀನಾಥ್ ರವರು ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದರು. ಅವರ ಅಮೋಘ ನಟನೆಯಿಂದ ಕನ್ನಡ ಚಿತ್ರರಂಗವನ್ನು ರಂಜಿಸಿದ್ದರು. ಕಾಶೀನಾಥ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇಂದು ಬರಿದಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಕಾಶಿನಾಥ್ ಕನ್ನಡ ಚಿತ್ರರಂಗದ ಆಸ್ತಿ, ಚಲನಚಿತ್ರರಂಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಬಣ್ಣಿಸಿದ್ದಾರೆ. ಕಾಶಿನಾಥ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಅವರು, ಕಾಶಿನಾಥ್ ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಸಾದನೆ ಮಾಡಿದ್ದಾನೆ. ನಟ-ನಿರ್ಮಾಪಕ-ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹಲವು ಪ್ರತಿಭೆಗಳನ್ನು ಚಲನಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರೆಲ್ಲರೂ ಈಗ ಚಿತ್ರರಂಗದಲ್ಲಿ ದೈತ್ಯರಾಗಿ ಬೆಳೆದಿದ್ದಾರೆ ಎಂದು ಹೇಳಿದರು.

ಕಾಶಿನಾಥ್ ಅವರು ನಮ್ಮೆಲ್ಲರ ಶಕ್ತಿಯಾಗಿ ಉಳಿದಿದ್ದಾರೆ. ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದ ವ್ಯಕ್ತಿ. ಅವರು ಸರಳ ಮತ್ತು ಸ್ನೇಹಜೀವಿಯಾಗಿದ್ದರು. ಕೆಲಸದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರು ಎಂದು ಹೇಳಿದರು. ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಮಹಾನ್ ಕಲಾವಿದರು. ಅಪ್ಪಟ ಕನ್ನಡ ಚಿತ್ರಗಳ ನಿರ್ದೇಶಕರಾಗಿದ್ದವರು. ಕನ್ನಡವನ್ನು ಹೆಚ್ಚು ಪ್ರೀತಿಸುತ್ತಿದ್ದವರು. ಅವರ ನಿಧನದಿಂದ ಉತ್ತಮ ನಿರ್ದೇಶಕ, ನಟನನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಉಂಟುಮಾಡಿದೆ ಎಂದರು.

ಅವರಿಗೆ ಮಾರಕ ಕಾಯಿಲೆ ಕ್ಯಾನ್ಸರ್ ಇದ್ದರೂ ಕೂಡ ಚೌಕ ಚಿತ್ರದಲ್ಲಿ ಅಭಿನಯಿಸಿರುವುದನ್ನು ಗಮನಿಸಿದರೆ ಅವರಿಗೆ ಚಿತ್ರರಂಗದ ಮೇಲೆ ಇರುವ ಪ್ರೀತಿ ಎಷ್ಟು ಎಂಬುದು ಗೊತ್ತಾಗುತ್ತದೆ. ಕಾಶಿನಾಥ್ ಅವರ ನಿಧನ ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಉಮಾಶ್ರೀ ಸಂದೇಶ: ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಕಾಶಿನಾಥ್ ಅವರು ಅನಂತ ಪ್ರತಿಭೆಯ ಗಣಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಬಣ್ಣಿಸಿದ್ದಾರೆ. ಕಾಶಿನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸಾವು ಅಕಾಲಿಕವಾದುದು. ಇದನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ.

ಕನ್ನಡ ಚಿತ್ರ ಪ್ರೇಮಿಗಳಿಗೆ ಅನುಭವ ಚಿತ್ರ ನೀಡುವ ಮೂಲಕ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನ ಕೊಟ್ಟ ನಾಯಕ ಎಂಬ ಪರಿಕಲ್ಪನೆ ಹೊಸ ಭಾಷ್ಯ ಬರೆದವರು ಕಾಶೀನಾಥ್. ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಯೊಬ್ಬ ನಾಯಕನಾದರೆ ಹೇಗಿರಬಹುದು ಎಂಬುದನ್ನು ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ತೋರಿಸಿಕೊಟ್ಟವರು. ನನ್ನಂತಹ ಹಲವಾರು ಕಲಾವಿದರನ್ನು ಬೆಳೆಸುವಲ್ಲಿ ಕಾಶಿನಾಥ್ ಅವರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.

ಕಾಶಿನಾಥ್ ಅವರ ಚಿತ್ರಗಳು ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿನೋಡುವಂತೆ ಮಾಡಿದವು. ನಿರ್ದೇಶಕನಾಗಿ, ನಟನಾಗಿ, ಲೇಖಕನಾಗಿ ತಮ್ಮ ಅನನ್ಯ ಛಾಪನ್ನು ಕನ್ನಡ ಚಿತ್ರರಂಗದ ಮೇಲೆ ಮೂಡಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲೆಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅನಂತಕುಮಾರ್ ಸಂತಾಪ : ಹಿರಿಯ ನಟ,ನಿರ್ದೇಶಕ  ಕಾಶಿನಾಥ್ ನಿಧನಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಹೆಸರಾದ ಕಾಶಿನಾಥ್ ಅವರು ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಕನ್ನಡ ಹಾಗೂ ಇತರ ಕೆಲವು ಭಾಷೆಗಳ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದ ಕಾಶಿನಾಥ್ ಅವರ ನಿಧನದಿಂದ ಚಿತ್ರರಂಗವು ಪ್ರತಿಭಾನ್ವಿತ ಹಿರಿಯ ಕಲಾವಿದರೊಬ್ಬರನ್ನು ಕಳೆದುಕೊಂಡಿದೆ ಎಂದು ಸ್ಮರಿಸಿದ್ದಾರೆ. ಕಾಶಿನಾಥ್ ಅವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಮತ್ತು ಕಾಶಿನಾಥ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕೋರಿದ್ದಾರೆ.

ಬಿಎಸ್‍ವೈ ಸಂತಾಪ: ಹಿರಿಯ ಕಲಾವಿದ ಕಾಶಿನಾಥ್ ಅವರ ಹಠಾತ್ ನಿಧನ ತೀವ್ರ ದುಃಖವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ನಿರ್ದೇಶಕ ಕಾಶಿನಾಥ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದ ನಮ್ಮನ್ನು ಅಗಲಿದ್ದು,  ಮರೆಯಲಾಗದ ಛಾಪನ್ನು ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.

ತಾವು ಸ್ವತಃ ಕಷ್ಟಪಟ್ಟು ಮೇಲೆ ಬಂದು ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಪಡೆದಿದ್ದ ಕಾಶಿನಾಥ್ ಅವರು, ನಂತರ ಆನೇಕ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಮೇಲಕ್ಕೆ ತಂದ ಅಪರೂಪದ ಕಲಾವಿದ. ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದುಃಖದ ಸಮಯದಲ್ಲಿ ದೇವರು, ಅವರ ಕುಟುಂಬ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಎಸ್ ವೈ ಶೋಕ ಸಂದೇಶದಲ್ಲಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

devegowda sa ra govind ಚಲನಚಿತ್ರ ಭಗವಂತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ