'ಶೀಘ್ರದಲ್ಲೇ ರಾಷ್ಟ್ರೀಯ ಅಂಕಿ-ಅಂಶ ಕೋಶ'18-01-2018

ಬೆಂಗಳೂರು: ವಿವಿಧ ಇಲಾಖೆಗಳ ಅಂಕಿ-ಅಂಶ ಸಂಗ್ರಹಿಸಿಡಬಲ್ಲ ರಾಷ್ಟ್ರೀಯ ಅಂಕಿ-ಅಂಶ ಕೋಶವನ್ನು ಇಷ್ಟರಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಖಾತೆ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ನಗರದಲ್ಲಿಂದು ಆಯೋಜಿಸಲಾಗಿದ್ದ 25ನೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಂಕಿ-ಅಂಶ ಸಂಘಟನೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೀತಿ ನಿರೂಪಕರಿಗೆ ಉಪಯುಕ್ತ ದಾಖಲಾತಿಗಳನ್ನು ಸೂಕ್ತ ಸಮಯಕ್ಕೆ ಒದಗಿಸಲು ಈ ಕೋಶ ನೆರವಾಗಲಿದೆ ಎಂದು ತಿಳಿಸಿದರು. ಸರ್ಕಾರದ ಹಲವಾರು ದಾಖಲೆಗಳ ಅಂಕಿ-ಅಂಶ ತಯಾರಿಕೆಗೆ ಮಾನದಂಡ ಸಿದ್ಧಪಡಿಸಲು, ರಾಷ್ಟ್ರೀಯ ನೀತಿಯೊಂದನ್ನು ಸಹ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸುದೀರ್ಘ ಅಭಿವೃದ್ಧಿ ಗುರಿ ಸಾಧನೆಗೆ ಅಂಕಿ-ಅಂಶಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಲಭ್ಯ ಸರ್ಕಾರಿ ದಾಖಲೆಗಳು ಮತ್ತು ಜನಗಣತಿಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಬಳಕೆಗೆ ತರುವ ಕುರಿತು, ಸಮಾಲೋಚನೆ ನಡೆಸುವಂತೆ ಅವರು ಸಲಹೆ ನೀಡಿದರು. ಜನಪ್ರತಿನಿಧಿ ತನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಗತ್ಯ ಮಾಹಿತಿ ದೊರಕಿಸಲು ಅಂಕಿ-ಅಂಶ ಇಲಾಖೆಗಳು ಪ್ರಯತ್ನಿಸಬೇಕೆಂದು ಸದಾನಂದ ಗೌಡ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಂಕಿ-ಅಂಶ ಖಾತೆ ಸಚಿವ ಎಂ.ಆರ್. ಸೀತಾರಾಮ್, ಅಗತ್ಯ ಅಂಕಿ-ಅಂಶ ಲಭ್ಯವಾದ ಕಾರಣ ವಿವಿಧ ಇಲಾಖೆಗಳಲ್ಲಿ ಬಳಸಲಾಗದ ಅನುದಾನವನ್ನು ಕ್ರೋಡೀಕರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಾಧ್ಯವಾಯಿತು, ಈ ಹಣದಲ್ಲಿ 4 ಸಾವಿರ ಶಾಲಾ-ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕೇಂದ್ರದ ಅಂಕಿ ಅಂಶ ಖಾತೆ ರಾಜ್ಯ ಸಚಿವ ವಿಜಯ್ ಗೋಯಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

D. V. Sadananda Gowd statistics ಅಭಿವೃದ್ಧಿ ಸುದೀರ್ಘ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ