ಇನ್‌ಕಮ್ ಟ್ಯಾಕ್ಸ್ ರದ್ದು?

The most thrilling idea before every Budget: No income tax

18-01-2018

ಪ್ರತಿ ವರ್ಷವೂ ಕೇಂದ್ರ ಬಜೆಟ್ ಮಂಡನೆ ವೇಳೆ, ಈ ಬಾರಿ ಹಣಕಾಸು ಸಚಿವರು ಎಷ್ಟರ ಮಟ್ಟಿಗೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸಬಹುದು ಎಂಬ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಒಂದಿಷ್ಟು ವಿನಾಯಿತಿ ಸಿಗುತ್ತದೆ, ಇನ್ನು ಕೆಲವೊಮ್ಮೆ ಆವರೆಗೆ ಏನಿತ್ತೋ ಅದೇ ಮುಂದುವರೆಯುತ್ತದೆ. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆದಾಯ ತೆರಿಗೆಯನ್ನೇ ಸಂಪೂರ್ಣವಾಗಿ ರದ್ದು ಪಡಿಸಬಹುದೇ ಎಂಬ ವಿಚಾರದ ಬಗ್ಗೆ ಹಲವಾರು ಮಟ್ಟಗಳಲ್ಲಿ ಚರ್ಚೆಗಳು ನಡೆದೇ ಇವೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿಯಿಂದ ಹಿಡಿದು ನೋಟು ರದ್ದತಿಗೆ ಸಲಹೆ ನೀಡಿದ್ದ ಅರ್ಥಕ್ರಾಂತಿ ಸಂಸ್ಥೆಯ ಅನಿಲ್ ಬೋಕಿಲ್ ವರೆಗೆ ಎಲ್ಲರೂ ಈ ಆದಾಯ ತೆರಿಗೆ ಅನ್ನುವುದನ್ನೇ ಕೈಬಿಡಬೇಕು ಎಂಬ ಕ್ರಾಂತಿಕಾರಿ ಸಲಹೆ ನೀಡುತ್ತಾರೆ. ಹೀಗಾಗಿ, ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಚಿಂತಿಸುವುದೇ ಒಂದು ರೀತಿಯ ಥ್ರಿಲ್ಲಿಂಗ್ ಐಡಿಯ ಆಗಿಬಿಟ್ಟಿದೆ.

ಅರ್ಥಕ್ರಾಂತಿ ಸಂಸ್ಥೆ ಪ್ರತಿಪಾದಿಸುತ್ತಿದ್ದ ಚಿಂತನೆಯಂತೆ ಹಳೆಯ ಒಂದು ಸಾವಿರ ಹಾಗೂ ಐದುನೂರು ರೂಪಾಯಿಗಳ ನೋಟು ರದ್ದತಿ ಮಾಡಿದ ಪ್ರಧಾನಿ ಮೋದಿ, ಇನ್‌ಕಮ್ ಟ್ಯಾಕ್ಸ್ ರದ್ದುಪಡಿಸುವ ಬಗ್ಗೆಯೂ ಅವರದ್ದೇ ಸಲಹೆ ಜಾರಿಗೆ ತರಬಹುದು. ಆದರೆ, ಈ ಬಾರಿಯ ಕೇಂದ್ರ ಬಜೆಟ್‌ ವೇಳೆಯಂತೂ ಈ ರೀತಿಯ ಯಾವುದೇ ದೊಡ್ಡ ಕ್ರಮ ಹೊರಬೀಳುವ ಸಾಧ್ಯತೆ ಇಲ್ಲ. 50 ವರ್ಷಗಳಷ್ಟು ಹಳೆಯದಾದ ಇನ್‌ಕಮ್ ಟ್ಯಾಕ್ಸ್ ಕಾಯ್ದೆಯನ್ನು, ದೇಶದ ಇವತ್ತಿನ ಆರ್ಥಿಕ ಅಗತ್ಯತೆಗಳಿಗೆ ತಕ್ಕಂತೆ ಸುಧಾರಿಸಲು ಕೇಂದ್ರ ಸರ್ಕಾರ ಈಗಾಗಲೇ ಸಮಿತಿ ರಚಿಸಿದ್ದು ಮುಂದಿನ ಜೂನ್ ವೇಳೆಗೆ ವರದಿ ಲಭ್ಯವಾಗುವ  ಸಾಧ್ಯತೆ ಇದೆ.

ಇಷ್ಟಾದರೂ ಕೂಡ, ಭಾರತದಲ್ಲಿ ಇನ್‌ಕಮ್ ಟ್ಯಾಕ್ಸ್ ರದ್ದು ಪಡಿಸಬೇಕು ಎಂಬುದರ ಪರವಾಗಿ ಹಲವಾರು ವಾದಗಳು ಕೇಳಿ ಬರುತ್ತವೆ. 130 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಆದಾಯ ತೆರಿಗೆ ಕಟ್ಟುವವರ ಸಂಖ್ಯೆ ಸುಮಾರು 2 ಕೋಟಿ ಮಾತ್ರ. ದೇಶದ ಜಿಡಿಪಿ ಅಂದರೆ, ಒಟ್ಟು ದೇಶೀಯ ಉತ್ಪನ್ನದಲ್ಲೂ ವೈಯಕ್ತಿಕ ಆದಾಯ ತೆರಿಗೆ ಪ್ರಮಾಣ ಕೇವಲ ಶೇ. 2ರಷ್ಟು ಮಾತ್ರ.

ದೇಶದಲ್ಲಿ ಬಡವರು ಅನ್ನಿಸಿಕೊಂಡವರು ಯಾವುದೇ ರೀತಿ ಆದಾಯ ತೆರಿಗೆ ಕಟ್ಟುವುದಿಲ್ಲ, ದೊಡ್ಡ ಶ್ರೀಮಂತರು ಇನ್‌ಕಮ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತಮ್ಮದೇ ಆದ ವಿನೂತನ ಐಡಿಯಾಗಳನ್ನು ಕಂಡುಕೊಂಡಿರುತ್ತಾರೆ, ಹೀಗಾಗಿ ಆದಾಯ ತೆರಿಗೆ ಕಟ್ಟುವವರಲ್ಲಿ ಸಂಬಳ ಪಡೆಯುವ ಮಧ್ಯಮ ವರ್ಗದವರದ್ದೇ ಸಿಂಹಪಾಲು.

ಒಂದು ವೇಳೆ, ಮೋದಿ ಸರ್ಕಾರ ದೊಡ್ಡ ಧೈರ್ಯ ಮಾಡಿ, ಇನ್‌ಕಮ್ ಟ್ಯಾಕ್ಸ್ ರದ್ದು ಪಡಿಸಿದರೂ ಕೂಡ, ಅದು ದೇಶದ ಜನಸಂಖ್ಯೆಯ ಕೇವಲ 2 ರಷ್ಟು ಜನರನ್ನು ಮಾತ್ರ ಪ್ರಭಾವಿಸುತ್ತದೆ, ಹೀಗಾಗಿ ರಿಸ್ಕ್ ಕಡಿಮೆ.  ದೇಶದ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿದ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಂಥ ನಿರ್ಧಾರಗಳಿಗಿಂಥ, ಇನ್‌ ಕಮ್ ಟ್ಯಾಕ್ಸ್ ರದ್ದುಪಡಿಸುವ ಒಂದು ನಿರ್ಧಾರ, ಕೇಂದ್ರ ಸರ್ಕಾರಕ್ಕೆ ರಾಜಕೀಯವಾಗಿ ಭಾರಿ ದೊಡ್ಡ ಲಾಭವನ್ನೇ ತಂದು ಕೊಡುವುದರಲ್ಲಿ ಅನುಮಾನವೇ ಇಲ್ಲ.

ಇನ್‌ ಕಮ್ ಟ್ಯಾಕ್ಸ್ ರದ್ದುಮಾಡಿದರೆ ಸರ್ಕಾರಕ್ಕೆ ಬರೀ ನಷ್ಟವೇ ಆಗುತ್ತದೆ  ಅನ್ನುವಂತಿಲ್ಲ, ಏಕೆಂದರೆ, ಆದಾಯ ತೆರಿಗೆ ರದ್ದತಿಯಿಂದ ಜನರ ಜೇಬಿನಲ್ಲಿ ಹೆಚ್ಚು ಹಣ ಉಳಿಯುತ್ತದೆ, ಅವರು ಅದನ್ನು ಖರ್ಚು ಮಾಡಿದರೂ ದೇಶದ ಆರ್ಥಿಕತೆಗೆ ಲಾಭ ಅಥವ ಉಳಿತಾಯ ಮಾಡಿದರೂ ಲಾಭವೇ. ಇದರ ಜೊತೆಗೆ, ಆದಾಯ ತೆರಿಗೆ ರದ್ದತಿಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗಬಹುದು.

ಇದೆಲ್ಲಕ್ಕಿಂತಲೂ ಇನ್ನೂ ಒಂದು ದೊಡ್ಡ ಲಾಭವಿದೆ. ಅದೇನೆಂದರೆ, ಆದಾಯ ತೆರಿಗೆ ಸಂಗ್ರಹಕ್ಕಾಗಿಯೇ ದೊಡ್ಡ ಮಟ್ಟದಲ್ಲಿ ತಲೆಕೆಡಿಸಿಕೊಳ್ಳುವ ತೆರಿಗೆ ಇಲಾಖೆ ತಲೆ ಮೇಲಿನ ದೊಡ್ಡ ಭಾರ ಇಳಿಯುತ್ತದೆ. ಹೀಗಾಗಿ, ಆ ಇಲಾಖೆಯನ್ನು ಕಪ್ಪುಹಣದ ಕುಳಗಳನ್ನು ಪತ್ತೆ ಹಚ್ಚಲು ಮತ್ತು ಸರಿಯಾಗಿ ಜಿಎಸ್‌ಟಿ ಜಾರಿ ಮಾಡಲು ಬಳಸಿಕೊಳ್ಳಬಹುದು.

ಇಂಥ ಒಂದು ಕ್ರಮದಿಂದ ದೇಶದ ಬ್ಯಾಂಕಿಂಗ್ ವಲಯವೂ ಕೂಡ ಸಾಕಷ್ಟು ಚೇತರಿಕೆ ಪಡೆಯಬಹುದು. ಹೇಗೆಂದರೆ, ‘ಆಯ್ಯೋ ಇಷ್ಟು ಹಣ ನಿಮಗೆ ಹೇಗೆ ಬಂತು?’ ಎಂದು ಕೇಳಿ ಬಿಡುತ್ತಾರೆ, ಟ್ಯಾಕ್ಸ್‌ ಕಟ್ಟುವಂತೆ ಹೇಳುತ್ತಾರೆ ಎಂದೆಲ್ಲ ಹೆದರಿಕೊಂಡು ತಮ್ಮ ಹಣವನ್ನು ಬಚ್ಚಿಡುತ್ತಿದ್ದವರೆಲ್ಲರೂ ಯಾವುದೇ ಭಯವಿಲ್ಲದೆ ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಇಡುತ್ತಾರೆ. ಇದರಿಂದ ಬ್ಯಾಂಕುಗಳಲ್ಲಿ ಠೇವಣಿ ಹೆಚ್ಚುತ್ತದೆ ಮತ್ತು ಅದನ್ನು ಸಾಲ ಸೌಲಭ್ಯ ಒದಗಿಸಲು ಬಳಸಿಕೊಂಡು ಲಾಭವನ್ನೂ ಮಾಡಿಕೊಳ್ಳಬಹುದು.

ಇದನ್ನೆಲ್ಲ ನೋಡಿದರೆ, ಇನ್‌ಕಮ್ ಟ್ಯಾಕ್ಸ್‌ ಅನ್ನುವುದನ್ನು ಗುಮ್ಮನಂತೆ ಬಿಂಬಿಸಿ ಹೆದರಿಸುವುದರಿಂದ ಆಗುವ ಲಾಭಕ್ಕಿಂತಲೂ, ಆ ಗುಮ್ಮನನ್ನೇ ಓಡಿಸಿಬಿಡುವುದರಿಂದ ಆಗುವ ಲಾಭಗಳೇ ಹೆಚ್ಚೆಂದು ತೋರುತ್ತದೆ. ಹೀಗಾಗಿ, ಈ ವರ್ಷವಲ್ಲದಿದ್ದರೂ ಕೂಡ 2019ರ ಲೋಕಸಭಾ ಚುನಾವಣೆಗೆ ಮುನ್ನ, ಮೋದಿ ಸರ್ಕಾರ ಇನ್‌ಕಮ್ ಟ್ಯಾಕ್ಸ್ ರದ್ದತಿಯಂಥ ಒಂದು ಮಹತ್ವದ ಕ್ರಮ ಕೈಗೊಳ್ಳುವ ಮೂಲಕ, ದೊಡ್ಡ ರಾಜಕೀಯ ಲಾಭ ಪಡೆಯಲು ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

income tax Black money ಜಿಡಿಪಿ ಆರ್ಥಿಕತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Super idea
  • Srikanth bhat
  • Agriculture