ಪೊಲೀಸರಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

CM Strict warning to the police

17-01-2018

ಬೆಂಗಳೂರು: ರಾಜ್ಯದಲ್ಲಿ ಕೋಮುಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿವುಂಟು ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುವ ಶಕ್ತಿಗಳನ್ನು ಮಟ್ಟ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಭಾವನೆಯನ್ನು ಕೆರಳಿಸುವ ಕೃತ್ಯಗಳು ರಾಜ್ಯದ ಇತರೆಡೆ ಪಸರಿಸುವ ಸಾಧ್ಯತೆಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಿಯೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಿಗಾವಹಿಸುವಂತೆ ಸಲಹೆ ನೀಡಿದರು.

ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ನಡೆದ ರಾಜ್ಯದ ಎಲ್ಲ ಜಿಲ್ಲೆಗಳ ಎಸ್‍ಪಿಗಳು, ಅದರ ಮೇಲ್ಮಟ್ಟದ ಹಿರಿಯ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, ಕೋಮುಭಾವನೆಯನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ನಡೆಸುತ್ತಿರುವ ಪ್ರಯತ್ನಗಳು ಕರಾವಳಿ ಭಾಗದಲ್ಲಿ ನಡೆಯುತ್ತಿರುವುದನ್ನು ಪ್ರಸ್ತಾಪಿಸಿ ಮುಂದೆ ಇಂತಹ ಕೃತ್ಯಗಳ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಿದರು.

ಪೊಲೀಸ್ ಠಾಣೆಯ ಮಟ್ಟದ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಕೋಮು ಭಾವನೆ ಕೆರಳಿಸುವ, ಅಶಾಂತಿವುಂಟು ಮಾಡುವ ಶಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅಲ್ಲಿನ ಅಧಿಕಾರಿಗಳ ಸಭೆಯನ್ನು ನಿರಂತರವಾಗಿ ನಡೆಸಿ ಕೋಮುವಾದಿ ಶಕ್ತಿಗಳು ಹುಟ್ಟಿಕೊಳ್ಳುವ ಮೂಲವನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಎಸ್‍ಪಿಗಳಿಗೆ ಸೂಚನೆ ನೀಡಿದರು.

ಕೋಮು ಸಾಮರಸ್ಯ ಕದಡುವ ಶಕ್ತಿಗಳ ಹಿಂದೆ ಯಾರಿದ್ದಾರೆ ಎನ್ನುವುದು ತಮಗೆಲ್ಲ ಗೊತ್ತಿದೆ. ಕೋಮು ಸಂಘಟನೆಗಳ ಹಿಂದೆ ಯಾವುದೇ ಧರ್ಮದ ಸಂಘಟನೆಗಳಿರಲಿ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು. ಅಶಾಂತಿವುಂಟು ಮಾಡುವವರನ್ನು ಯಾವುದೇ ರಾಜಿಗೊಳಗಾಗದೆ ಬಂಧಿಸಿ ಜೈಲಿಗಟ್ಟಬೇಕು ಎಂದರು.

ಜಿಲ್ಲಾಮಟ್ಟದ ಎಸ್‍ಪಿಗಳು ನಿಷ್ಪಕ್ಷಪಾತವಾಗಿ ದಕ್ಷತೆ, ಧೈರ್ಯದಿಂದ ಕೆಲಸ ಮಾಡಿದರೆ ಅದನ್ನು ಪೊಲೀಸ್ ಠಾಣಾ ಮಟ್ಟದ ಅಧಿಕಾರಿಗಳು ಪಾಲಿಸಲಿದ್ದಾರೆ. ನೀವೇನಾದರು ಸ್ವಲ್ಪ ಸಡಿಲವೆನಿಸಿದರೆ ಠಾಣಾಧಿಕಾರಿಗಳು ನಿರ್ಲಕ್ಷ್ಯ ತೋರಿ ಸಮಾಜದಲ್ಲಿ ತೊಂದರೆಗಳುಂಟಾಗಲಿದ್ದು, ಇಲಾಖೆಗೆ ಕೆಟ್ಟ ಹೆಸರು ಬರಲಿದೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ಪೈಪೋಟಿ ಹೆಚ್ಚಾದಂತೆ ಅಪರಾಧಿಗಳ ವೈಭವೀಕರಣ ನಡೆಯುತ್ತಿದೆ. ಒಂದೇ ಘಟನೆಯನ್ನು ದೊಡ್ಡ ಸುದ್ದಿ ಮಾಡಿ ಕೋಮುಭಾವನೆಯು ಹರಡಿ ಸಮಾಜದಲ್ಲಿ ಅಶಾಂತಿವುಂಟಾಗಲಿದೆ ಇದರ ಬಗ್ಗೆಯೂ ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ತಾಕೀತು ಮಾಡಿದರು.

ಚುನಾವಣೆಗಳ ಹಿನ್ನೆಲೆಯಲ್ಲಿ ರೌಡಿ ಹಾಗೂ ಅಪರಾಧ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ರೌಡಿ ಚಟುವಟಿಕೆಗಳಲ್ಲಿ ತೊಡಗುವ ಅಪರಾಧ ಕೃತ್ಯಗಳನ್ನೆಸುಗುವವರ ಮಾಹಿತಿ ಆಯಾ ವ್ಯಾಪ್ತಿಯ ಎಲ್ಲ ಠಾಣಾಧಿಕಾರಿಗಳಿಗು ಗೊತ್ತಿರುತ್ತದೆ. ಇದನ್ನು ಬಳಸಿಕೊಂಡು ಉತ್ತಮ ಕಾರ್ಯದಕ್ಷತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು. ಸಮಾವೇಶದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸೇರಿ ಬಹುತೇಕ ಡಿಜಿಗಳು, ಎಡಿಜಿಪಿಗಳು, ಐಜಿಪಿಗಳು, ಡಿಐಜಿಗಳು ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

siddaramaiah DGP ಕೋಮುಭಾವನೆ ಅಶಾಂತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ