ಎಚ್ಡಿಕೆ ಆರೋಪ ಸಚ್ಚಾ ಅಲ್ಲ-ಕಚ್ಚಾ

vinay kulkarni answer to HKD

17-01-2018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಸಚ್ಚಾ ಅಲ್ಲ, ಕಚ್ಚಾ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಡಿಯನ್ ಬ್ಯೂರೋ ಆಫ್ ಮೈನಿಂಗ್ ಸಂಸ್ಥೆಯ ಸೂಚನೆಯ ಮೇರೆಗೆ ಪ್ರತಿ ವರ್ಷ ನಲವತ್ತು ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ತೆಗೆಯಲು ನಮಗೆ ಅವಕಾಶವಿದೆ ಎಂದರು.

ಅದರ ಪ್ರಕಾರ ಎನ್‍ಎಂಡಿಸಿ ಹಾಗೂ ಎಂಎಂಎಲ್ ಸಂಸ್ಥೆಗಳು ಈ ಕಬ್ಬಿಣದ ಅದಿರನ್ನು ತೆಗೆಯುವ ಜವಾಬ್ದಾರಿ ಪಡೆದುಕೊಂಡಿವೆ. ಮತ್ತು ಕಬ್ಬಿಣದ ಅದಿರು ತೆಗೆಯುವ ಹೊಣೆಗಾರಿಕೆಯನ್ನು ಮುಚ್ಚಂಡಿ ಸಂಸ್ಥೆಗೆ, ವಿಶಾಲ್ ಸಂಸ್ಥೆಗೆ ನೀಡಿದೆ. ಇದರ ಪ್ರಕಾರ ಮೂರು ವರ್ಷಗಳಲ್ಲಿ ಈ ಸಂಸ್ಥೆಗಳು 1.20 ಕೋಟಿ ಟನ್ ಅದಿರು ತೆಗೆಯಬೇಕಿತ್ತು. ಆದರೆ ಅವು ಅದರ ಅರ್ಧದಷ್ಟು ಅದಿರನ್ನೂ ತೆಗೆದಿಲ್ಲ. ಯಾವ ಕಾರಣಕ್ಕಾಗಿ ತೆಗೆದಿಲ್ಲ ಎಂದು ಅವುಗಳಿಗೆ ನೋಟೀಸ್ ನೀಡಲಾಗಿದೆ. ಹೀಗಿರುವಾಗ ಆಕ್ರಮ ಗಣಿಗಾರಿಕೆ ಎಲ್ಲಿಂದ ನಡೆಯಬೇಕು ಎಂದರು.

ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡುವ ಜಾಗಕ್ಕೆ ಪೂರೈಸಲು ಗುತ್ತಿಗೆದಾರರಿಗೆ ಅವಕಾಶ ನೀಡಿದ ನಂತರ ಅವರೊಂದು ಕಚ್ಚಾ ಪುಸ್ತಕ ಇಟ್ಟುಕೊಂಡು ಪ್ರತಿ ಟಿಪ್ಪರ್‍ನಲ್ಲೂ ಇಪ್ಪತ್ತು ಟನ್‍ಗಳಷ್ಟು ಕಬ್ಬಿಣದ ಅದಿರು ಕಳಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಆದರೆ ಒಂದು ಟಿಪ್ಪರ್‍ನಲ್ಲಿ ಗರಿಷ್ಟ ಹದಿನೈದು ಟನ್ ಅದಿರನ್ನು ಮಾತ್ರ ಸರಬರಾಜು ಮಾಡಬಹುದು. ಇದು ಅಪ್‍ಲೋಡ್ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಕಚ್ಚಾ ದಾಖಲೆ. ಆದರೆ ಡೌನ್ ಲೋಡ್ ಮಾಡುವಾಗ ಅದರಲ್ಲಿರುವ ಕಬ್ಬಿಣದ ಅದಿರು ಎಷ್ಟು ಎಂಬುದು ದಾಖಲಾಗಿರುತ್ತದೆ.

ಹೀಗೆ ಅದು ಪೂರೈಕೆ ಮಾಡಿದ ಅದಿರು, ಅದರಿಂದ ಉತ್ಪಾದನೆಯಾದ ಉತ್ಪನ್ನಗಳು, ಅವು ಮಾರಾಟವಾದ ಪ್ರಮಾಣ, ಹೀಗೆ ಪ್ರತಿಯೊಂದೂ ದಾಖಲಾಗಿರುತ್ತದೆ. ಆದರೆ ಗುತ್ತಿಗೆದಾರರು ತಮ್ಮ ಬಳಿ ಇಟ್ಟುಕೊಂಡಿದ್ದ ಕಚ್ಚಾ ಪುಸ್ತಕದ ವಿವರಗಳನ್ನು ನೋಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ ಎಂದರು. ಕುಮಾರಸ್ವಾಮಿಯವರು ಹೇಳಿದ ಪ್ರಕಾರ ಒಂದು ಕೋಟಿ ಎಂಭತ್ತು ಲಕ್ಷ ಟನ್ ಕಬ್ಬಿಣದ ಅದಿರು ಸಾಗಾಟವಾಗಬೇಕಿತ್ತು. ಅಂದರೆ ದಿನವೊಂದಕ್ಕೆ ಎರಡು ಸಾವಿರ ಟಿಪ್ಪರ್‍ಗಳು ಕಬ್ಬಿಣದ ಅದಿರನ್ನು ಸಾಗಿಸಬೇಕಿತ್ತು. ಆದರೆ ದಿನಕ್ಕೆ ಗರಿಷ್ಟವೆಂದರೂ ಎಂಟು ನೂರು ಲಾರಿಗಳು ಸಂಚರಿಸಬಹುದಷ್ಟೇ ಎಂದರು.

ಆದರೂ ಕಚ್ಚಾ ಲೆಕ್ಕ ಬರೆದದ್ದಕ್ಕಾಗಿ ನಾವು ಇಲಾಖಾ ತನಿಖೆ ನಡೆಸಿದ್ದೇವೆ. ಇದನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿಯವರು ಸಾವಿರಾರು ಕೋಟಿ ರೂ ಆಕ್ರಮ ಗಣಿಗಾರಿಕೆಯಾಗಿದೆ. ಸೌತ್ ವೆಸ್ಟ್ ಕಂಪನಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಅದೆಲ್ಲ ಸುಳ್ಳು. ಮುಚ್ಚಂಡಿ ಸೇರಿದಂತೆ ಯಾವ ಕಂಪನಿಯವರೂ ಗಣಿಗಾರಿಕೆ ಮಾಡಲು ಸೌತ್ ವೆಸ್ಟ್ ಕಂಪನಿಗೆ ಉಪಗುತ್ತಿಗೆ ನೀಡಿಲ್ಲ. ಹಾಗೆ ನೀಡಿದ್ದಕ್ಕೆ ಯಾವ ದಾಖಲೆಯೂ ಇಲ್ಲ ಎಂದರು.

ಇದು ಕಚ್ಚಾ ಬುಕ್‍ನಿಂದ ಕೇಳಿ ಬಂದ ಆರೋಪ. ಹೀಗಾಗಿ ಇದು ಸಚ್ಚಾ ಅಲ್ಲ, ಕಚ್ಚಾ ಎಂದು ನುಡಿದ ಅವರು, ಹೀಗೆ ಎನ್‍ಎಂಡಿಸಿ ಹಾಗೂ ಎಂಎಂಎಲ್ ವತಿಯಿಂದ ನಡೆಯುತ್ತಿರುವ  ಗಣಿಗಾರಿಕೆಯಿಂದ ಅದಿರು ಬರುತ್ತಿದೆಯಲ್ಲ? ಇದರಿಂದ ಕಬ್ಬಿಣದ ಪುಡಿ,ಇಪ್ಪತ್ತು ಎಂಎಂ ರಾಡ್‍ಗಳು,ನಲವತ್ತು ಎಂಎಂ ರಾಡ್‍ಗಳು ಸೇರಿದಂತೆ ಬೇಡಿಕೆಗೆ ಪೂರಕವಾದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಇದನ್ನು ಜಿಂದಾಲ್, ಸ್ಪಾಂಜರ್ಸ್ ಸೇರಿದಂತೆ ಹಲವು ಕಂಪನಿಗಳು ಖರೀದಿ ಮಾಡುತ್ತವೆ. ಹೀಗಾಗಿ ಕುಮಾರಸ್ವಾಮಿಯವರ ಆರೋಪವನ್ನು ನಾನು ಸಾರಾಸಗಟಾಗಿ ಅಲ್ಲಗಳೆಯುತ್ತೇನೆ. ಯಾರು ಅವರಿಗೆ ಮೊದಲು ಹೋಗಿ ದಾಖಲೆಯನ್ನು ನೀಡಿದ್ದಾರೋ? ಅವರೇ ಹೋಗಿ ಎರಡನೇ ದಾಖಲೆಗಳನ್ನೂ ನೀಡಬಹುದು. ಅವರು ಪರಿಶೀಲಿಸಲಿ ಎಂದು ನುಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ