‘ಗೋವಾ ಸರ್ಕಾರವನ್ನು ವಜಾ ಮಾಡಬೇಕು’17-01-2018

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ, ಜನವರಿ 25 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಎಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ ಎಂದು ವಾಟಾಳ್ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಗೋವಾ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು. ಗೋವಾ ಜಲಸಂಪನ್ಮೂಲ ಸಚಿವ ಮನೋಹರ್ ಪಾಲ್ಯೇಕರ್ ಹೇಳಿಕೆ ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿದೆ. ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದರು.

ಕನ್ನಡಿಗರಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿರುವ ಅವರು ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಬೇಕು, ಅವರು ಯಾವ ಕಾರಣಕ್ಕಾಗಿ ನಮ್ಮ ರಾಜ್ಯಕ್ಕೆ ಬಂದರು. ಯಾವ ಉದ್ದೇಶವನ್ನಿಟ್ಟುಕೊಂಡು ಗಡಿಭಾಗದ ಕಣಕುಂಬಿ ಪ್ರದೇಶಕ್ಕೆ ಬಂದು ಕಾಮಗಾರಿ ಪರಿಶೀಲಿಸಿದರು. ಅವರನ್ನು ಬರಲು ಬಿಟ್ಟವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ನ್ಯಾಯಾಲಯ ಅವಕಾಶ ನೀಡಿದೆಯೇ, ಪರಿಶೀಲನೆ ಸಂದರ್ಭದಲ್ಲಿ ಎರಡು ರಾಜ್ಯಗಳ ಸಂಪನ್ಮೂಲ ಸಚಿವರು, ಅಧಿಕಾರಿಗಳು ಇರಬೇಕಿತ್ತು. ಆದರೆ ಅವರೊಬ್ಬರೇ ಬಂದು ಕಾಮಗಾರಿ ನೋಡಿಕೊಂಡು ಹೋಗಿರುವುದಲ್ಲದೆ ಕನ್ನಡಿಗರಿಗೆ ಅವಮಾನವನ್ನು ಉಂಟು ಮಾಡಿದ್ದಾರೆ. ಗೋವಾ ಸರ್ಕಾರದ ಒಕ್ಕೂಟದ ವ್ಯವಸ್ಥೆ ಮೇಲೆ ಯಾವುದೇ ನಂಬಿಕೆ ಇಲ್ಲ. ಅವರನ್ನು ಕೂಡ ವಜಾ ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ ಅವರು,ಗೋವಾ ಸರ್ಕಾರದ ಮಂತ್ರಿಗಳನ್ನು ಹುಚ್ಚರು ಎನ್ನಬೇಕೊ, ಕೋತಿಗಳು ಎನ್ನಬೇಕೊ ಗೊತ್ತಿಲ್ಲ. ಈ ತರದ ಜನರನ್ನು ಎಲ್ಲಿಯೂ ನೋಡಿಲ್ಲ ಎಂದರು.

ಕರ್ನಾಟಕ ಮತ್ತು ತಮಿಳುನಾಡಿಗೂ ಕಾವೇರಿ ನದಿ ವಿಚಾರವಾಗಿ ವಿವಾದ ಸೃಷ್ಟಿಯಾಗಿತ್ತು. ಆದರೆ ತಮಿಳುನಾಡಿನವರು ಗೋವಾ ಸರ್ಕಾರದಂತೆ ಕೀಳಾಗಿ ವರ್ತಿಸಿಲ್ಲ ಎಂದರು. ಗೋವಾ ಕರ್ನಾಟಕಕ್ಕೆ ಸೇರಬೇಕು ಎಂದು ಈಗಿನಿಂದಲೇ ಹೋರಾಟ ನಡೆಸುತ್ತೇವೆ. ಗೋವಾದಲ್ಲಿ ಕನ್ನಡಿಗರೇ ಹೆಚ್ಚಾಗಿ ವಾಸವಾಗಿದ್ದಾರೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಿಡುವಂತೆ ಪತ್ರ ಬರೆದಿದೆ. ಕಾವೇರಿ ಜಲನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ನೀರು ಬಿಡುವುದು ಹೇಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಿಳುನಾಡಿಗೆ ನೀರು ಹರಿಸಬಾರದು, ನೀರು ಹರಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

vatal nagaraj Bandh ತಮಿಳುನಾಡು ಗೋವಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ