ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಸ್ಥಗಿತ...!

kidwai hospital staff protest

17-01-2018

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕಿದ್ವಾಯಿ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನೆಗಿಳಿದಿದ್ದಾರೆ. ಐಡಿ ಕಾರ್ಡ್ ಮತ್ತು ಇನ್ಸೆಂಟಿವ್ ನೀಡುವಂತೆ ಒತ್ತಾಯಿಸಿದ್ದಾರೆ. 2011ರಿಂದ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿರುವ ಕಿದ್ವಾಯಿ ಆಸ್ಪತ್ರೆ, ನೌಕರಿಗೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕುರಿತು ಕಳೆದ 7 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇಂದು ಕಾರ್ಯ ಸ್ಥಗಿತಗೊಳಿಸಿ ಕಿದ್ವಾಯಿ ಆವರಣದಲ್ಲಿ ಧರಣಿ ನಡೆಸಿದ್ದಾರೆ.

ಈ ಹಿಂದೆ ಜನವರಿ 2ರಂದು 10ನೇ ತಾರೀಕಿನ ಒಳಗಡೆ ಬೇಡಿಕೆಗಳನ್ನು ಈಡೇರಿಸುವಂತೆ ಆಸ್ಪತ್ರೆ ಸಿಬ್ಬಂದಿ ಗಡುವು ನೀಡಿದ್ದರು. ಅದರಂತೆ 10ನೇ ತಾರೀಕಿನಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೆಲಸ ಬಹಿಷ್ಕರಿಸುವುದರ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಳೆದ 7 ದಿನಗಳಿಂದ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುತ್ತಿದ್ದ ಸಿಬ್ಬಂದಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಆಸ್ಪತ್ರೆ ನಿರ್ದೇಶಕರಿಂದ ಸ್ಪಂದನೆ ಸಿಗದ ಹಿನ್ನೆಲೆ ಧರಣಿ ನಡೆಸಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿರುವ ಪರ್ಮನೆಂಟ್ ಹಾಗೂ ಟೆಕ್ನಿಷಿಯನ್ಸ್ ಗಳಿಂದ ನಿರಂತರ ಸೇವೆ ನೀಡಲು ಆಸ್ಪತ್ರೆ‌ ಆಡಳಿತ ಸೂಚನೆ ನೀಡಿದ್ದು, ಕಿದ್ವಾಯಿ ಆಸ್ಪತ್ರೆಯ ಪರ್ಮನೆಂಟ್ ನರ್ಸ್ ಗಳು 80 ಇದ್ದರೆ, 25 ಟೆಕ್ನಿಷಿಯನ್ಸ್ ಇದ್ದಾರೆ. ಮತ್ತೊಂದೆಡೆ ಗುತ್ತಿಗೆ ಆಧಾರದಲ್ಲಿ ಸ್ಟಾಫ್ ನರ್ಸ್ ಒಟ್ಟು ಸಂಖ್ಯೆ 175, ಲಾಬ್ ಟೆಕ್ನಿಷಿಯನ್ಸ್ 18 ಮಂದಿ ಇದ್ದಾರೆ. ಕಳೆದ 2002ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ ಎಂದು ದೂರಿದ್ದಾರೆ.

ಇನ್ನು ಈ ಕುರಿತಂತೆ ಕಿದ್ವಾಯಿ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಈಗ ನೌಕರರು ಕೇಳುತ್ತಿರುವ ವೇತನಕ್ಕೆ ಹಣಕಾಸು ವಿಭಾಗದೊಂದಿಗೆ ಚರ್ಚೆ ಮಾಡಬೇಕು, ಈ ಸಂಸ್ಥೆಯಲ್ಲಿ ಟ್ರೈನಿ ನರ್ಸ್ಗಳು ಗಳು ಎಂದು ಅವರನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮುಂದಿನ ನಿರ್ಧಾರ ತಗೆದುಕೊಳ್ಳುತ್ತೇವೆ, ಈಗಾಗಲೇ ನೌಕರರ ಜೊತೆ ಮಾತುಕತೆ ನಡೆಸಿದ್ದೇವೆ, ಇವರ ಪ್ರತಿಭಟನೆಯಿಂದ ರೋಗಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳಿದ್ದಾರೆ ಆದ್ದರಿಂದ ರೋಗಿಗಳಿಗೆ ತೊಂದರೆಯಾಗುವುದಿಲ್ಲ ಎಂದರು.

ಆದರೆ ಇದೇ ವೇಳೆ ಪ್ರತಿಭಟನಾ ನಿರತ ಸಿಬ್ಬಂದಿ, ಆಡಳಿತ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಿದರೆ ಮಾತ್ರ ಪ್ರತಿಭಟನೆ ವಾಪಸ್ ಪಡೆಯುತ್ತೇವೆ, ಇಲ್ಲವಾದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kidwai protest ನರ್ಸಿಂಗ್ ಅನಿರ್ದಿಷ್ಟಾವಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ