‘ಹಿಂದುತ್ವ ಒಂದೇ ಅವರ ಅಸ್ತ್ರ’16-01-2018

ಬೆಂಗಳೂರು: ಬಿಜೆಪಿ ಹಿಂದುತ್ವ ಎಂದು ಜನರನ್ನು ದಾರಿ ತಪ್ಪಿಸಲು ಮುಂದಾಗಿದ್ದು, ಇವರನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ಎದುರಿಸಲು ಪಕ್ಷ ಸಜ್ಜಾಗಿದೆ. ಬಿಜೆಪಿಯವರೇನು ಹಿಂದೂ ರಕ್ಷಕರಲ್ಲ. ಅವರು ಅಧಿಕಾರಕ್ಕೆ ಬಂದಿದ್ದು ಈಗ. ಕಳೆದ 70 ವರ್ಷಗಳಿಂದ ಹಿಂದು ಧರ್ಮದ ರಕ್ಷಣೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಎಲ್ಲಾ ಧರ್ಮಗಳ ರಕ್ಷಣೆ ಮಾಡಿದೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕು. ಬಿಜೆಪಿಯವರು ಜನರನ್ನು ಯಾಮಾರಿಸಲು ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಬಿಜೆಪಿಗೆ ಬೇರೆ ಯಾವುದೇ ವಿಷಯ ಉಳಿದಿಲ್ಲ. ಹಿಂದುತ್ವ ಒಂದೇ ಅವರ ಅಸ್ತ್ರ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಕಿ ಹಚ್ಚುವುದು ಬಿಟ್ಟರೆ ಬೇರೆ ಏನು ಬರುವುದಿಲ್ಲ. ಅನಂತ್ ಕುಮಾರ್ ಹೆಗಡೆ ಜನರನ್ನು ಪ್ರಚೋದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹವರನ್ನು ಹಿಮ್ಮೆಟ್ಟಿಸಬೇಕು. ಒಬ್ಬ ಜವಬ್ದಾರಿ ಸ್ಥಾನದ ಕೇಂದ್ರ ಮಂತ್ರಿ ಹೀಗೆ ಹೇಳಿದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಖಂಡಿಸಿಲ್ಲ. ಪಕ್ಷದ ಗಮನಕ್ಕೆ ಬರದೇ ಅನಂತ್ ಕುಮಾರ್ ಹೆಗಡೆ ಮಾತನಾಡಲು ಸಾಧ್ಯವಿಲ್ಲ. ಇವೆಲ್ಲವನ್ನೂ ನಾವು ತೀವ್ರವಾಗಿ ವಿರೋಧಿಸಬೇಕು ಎಂದರು.

ಇನ್ನು ಸಂಸದೆ ಶೋಭಾ ಕರಂದ್ಲಾಜೆ ಸುಮ್ಮನೆ ಸುಳ್ಳು ಹೇಳಿಕೊಂಡು ಗಲಾಟೆ ಮಾಡುತ್ತಾರೆ. ಚುನಾವಣೆ ಯುದ್ಧ ಇದ್ದ ಹಾಗೆ. ಬಿಜೆಪಿಯವರು ಕೌರವರು ಇದ್ದ ಹಾಗೆ. ನಾವು ಕಾಂಗ್ರೆಸ್‍ನವರು ಪಾಂಡವರ ಹಾಗೆ. ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ತಲೆ ತಗ್ಗಿಸುವ ಯಾವುದೇ ಕೆಲಸ ನಾವು ಮಾಡಿಲ್ಲ. ನಾವು ಸುಳ್ಳು ಹೇಳೋದು ಬೇಡ, ಸತ್ಯವನ್ನೇ ಬಲವಾಗಿ ಹೇಳೋಣ. ಇಷ್ಟು ಮಾಡಿದರೆ ನಾವು ಬಿಜೆಪಿಯವರನ್ನು ಎದುರಿಸುವುದು ಕಷ್ಟವಾಗುವುದಿಲ್ಲ ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.

ನಮ್ಮ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಹೇಳಬೇಕು. ನಿಮಗೆ ಜವಬ್ದಾರಿ ಕೊಟ್ಟಿರುವ ಕಡೆ ಮೂರು ತಿಂಗಳು ಕೆಲಸ ಮಾಡಿ. ವಾತಾವರಣ ನಮ್ಮ ಪರವಾಗಿದೆ. ಬೋಗಸ್ ಏಜೆನ್ಸಿಗಳ ಕೈಯಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ಬರೆಸುತ್ತಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ನಮ್ಮ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಇಲ್ಲ. ಉತ್ತಮ ವಾತಾವರಣ ರಾಜ್ಯದಲ್ಲಿದೆ. ಎಲ್ಲ ಪದಾಧಿಕಾರಿಗಳು ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಮಯ್ಯ, ಮಹದಾಯಿ ವಿಚಾರದಲ್ಲಿ ಗೋವಾ ಸಚಿವ ವಿನೋದ ಪಾಲ್ಯೇಕರ್ ಹೇಳಿಕೆ  ಅತ್ಯಂತ ಬೇಜವಾಬ್ದಾರಿ, ಬಾಲಿಶತನದಿಂದ ಕೂಡಿದೆ. ಅವರಂತೆ ನಮಗೂ ಮಾತನಾಡಲು ಬರುತ್ತದೆ. ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ಇಂತಹ ವಿಚಾರದಲ್ಲೂ ರಾಜಕಾರಣ ಮಾಡೋದು ಸರಿಯಲ್ಲ ಎಂದರು. ಸಚಿವ ರೋಷನ್ ಬೇಗ್ ಅವರಿಗೆ ಜಾರಿ ನಿರ್ದೇಶನಾಕಲಯ ನೊಟೀಸ್ ಜಾರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವರನ್ನೇ ಕೇಳಿ, ಅವರಿಗೆ ನೊಟೀಸ್ ಬಂದ್ರೆ ನನಗೆ ಹೇಗೆ ಗೊತ್ತಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah KPCC ಸುದ್ದಿಗಾರ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ