ಖತರ್ನಾಕ್ ಕಳ್ಳರ ಬಂಧನ

Notorious theives arrested

16-01-2018

ಬೆಂಗಳೂರು: ಉದ್ಯಮಿಯೊಬ್ಬರ ಮನೆ ಬಾಗಿಲು ಮುರಿದು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಬಂಗಾಳಿ ಮೂಲದ ಖತರ್ನಾಕ್ ಕಳ್ಳರನ್ನು ಬಂಧಿಸಿರುವ ಸಂಜಯನಗರ ಪೊಲೀಸರು 35 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬ್ಬಾಳ ಕೆಂಪಾಪುರದ ಜನ್ನತ ಕಾಲೋನಿಯ ದೂದ್ ಕುಮಾರ್ ದಾಸ್ ಅಲಿಯಾಸ್ ರೂಪ್ ಕುಮಾರ್ (43), ಸಾಗರ್ ಚಂದ್ರ ಸರ್ದಾರ್ (28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಲಯದ ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ. ಬಂಧಿತರಿಂದ 65 ಗ್ರಾಂ ಚಿನ್ನ, 4.2 ಕೆಜಿ ಬೆಳ್ಳಿ, 6 ಮೊಬೈಲ್‍ಗಳು, 4 ಕ್ಯಾಮೆರಾ, ವಿವಿಧ ದೇವರುಗಳ 8 ಹಿತ್ತಾಳೆ ವಿಗ್ರಹಗಳು, ವಿವಿಧ ದೇಶಗಳ 14 ವಾಚ್‍ಗಳು, ವಿವಿಧ ದೇಶದ ಕರೆನ್ಸಿಗಳು ಸೇರಿ 25 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಜಯ್ ನಗರದ ಉದ್ಯಮಿ ಅವಿನಾಶ್ ವಸಿಷ್ಟ ಅವರು ಕಳೆದ 2017ರ ಸೆಪ್ಟೆಂಬರ್ 17 ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಲಕ್ನೋಗೆ ಹೋಗಿದ್ದರು. ಅಲ್ಲಿಂದ ಮೂರು ದಿನಗಳ ನಂತರ ವಾಪಾಸ್ ಆಗಿ ಮನೆಗೆ ಬಂದು ನೋಡಿದಾಗ ಟೆರೆಸ್ ಡೋರ್ ಲಾಕ್ ಮುರಿದು 30 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ವಸಿಷ್ಟ ಅವರು ದಾಖಲಿಸಿದ್ದ ದೂರು ದಾಖಲಿಸಿ ಕಾರ್ಯಾಚರಣೆ ನಡೆಸಿದ ಸಂಜಯ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್.ವರ್ಣಿ ಅವರ ನೇತೃತ್ವದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳು ಬಾಂಗ್ಲಾದ ಗಡಿ ಭಾಗದ ನಾದಿಯಾ ಜಿಲ್ಲೆಯ ದುಬಲಿಯಾ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದು, ಸತತ ಎರಡು ತಿಂಗಳುಗಳ ಕಾಲ ಮಾಹಿತಿ ಸಂಗ್ರಹಿಸಿ ಬಾಂಗ್ಲಾಕ್ಕೆ ಪರಾರಿಯಾಗುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಕೆಂಪಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಬೆಳಗಿನ ವೇಳೆ ಸಂಜಯ್ ನಗರದ ಸುತ್ತಮುತ್ತ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡುತ್ತಿದ್ದರು.

ಕಳವು ಮಾಡಿದ ವಸ್ತುಗಳಲ್ಲಿ 5 ಲಕ್ಷದಷ್ಟು ಖರ್ಚು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಹಿಂದಿನ ಅಪರಾಧಗಳ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

arrest thief ಕರೆನ್ಸಿ ಉದ್ಯಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ