ಅಣ್ಣಾ ಹಜಾರೆ ಷರತ್ತು…

16-01-2018
ಸಾಮಾಜಿಕ ಕಾರ್ಯಕರ್ತ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟಗಾರ ಅಣ್ಣಾ ಹಜಾರೆ, ತಮ್ಮ ಜೊತೆ ಸೇರಬಯಸುವವರಿಗೆ ಒಂದು ಷರತ್ತು ವಿಧಿಸಿದ್ದಾರೆ. ‘ಇನ್ನು ಮುಂದೆ ನಾನು ನಡೆಸುವ ಯಾವುದೇ ಆಂದೋಲನ ಅಥವ ಸತ್ಯಾಗ್ರಹದ ಭಾಗವಾಗಲು ಬಯಸುವ ಯಾರೇ ಆಗಲಿ, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಮತ್ತು ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಪ್ರಮಾಣ ಪತ್ರ ಕೊಡಬೇಕು’ ಎಂದು ಅಣ್ಣಾ ಹಜಾರೆ ನವದೆಹಲಿಯಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತಮ್ಮ ಜೊತೆ ಸೇರಿ, ಆನಂತರ ರಾಜಕಾರಣ ಆರಂಭಿಸಿದ ಅರವಿಂದ್ ಕೇಜ್ರಿವಾಲ್ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದ ಅಣ್ಣಾ ಹಜಾರೆ, ‘ಆ ಸಮಯದಲ್ಲಿ ನಾನು ಎಚ್ಚರದಿಂದಿರಲಿಲ್ಲ, ಆದರೆ, ಮತ್ತೆ ಅಂಥದ್ದು ಆಗದಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.
ಲೋಕಪಾಲ್ ಜಾರಿಗೆ ತರಲು ಆಗ್ರಹಿಸಿ, ಅಣ್ಣಾ ಜೊತೆ ಕೈ ಜೋಡಿಸಿದ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿದ್ದಾರೆ. ವೇದಿಕೆಯಲ್ಲಿ ನಿಂತು ಬಾವುಟ ಬೀಸುತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಬಿಜೆಪಿ ಅಭ್ಯರ್ಥಿಯಾಗಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು, ಆನಂತರ ಪುದುಚೇರಿಯ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಹೀಗಾಗಿ, ತಮ್ಮ ಶಿಷ್ಯೋತ್ತಮರೆಲ್ಲ ಮೂಲ ವಿಚಾರವನ್ನೇ ಬಿಟ್ಟು, ಏನೇನೋ ಆಗಿಹೋಗಿದ್ದನ್ನು ಕಂಡ ಅಣ್ಣಾ ಹಜಾರೆಯವರು, ಹೊಸ ಷರತ್ತನ್ನು ವಿಧಿಸಿರಬಹುದು. ಆದರೆ, ಇನ್ನು ಮುಂದೆ ಅಣ್ಣಾ ಜೊತೆ ಕಾಣಿಸಿಕೊಳ್ಳುವವರು ರಾಜಕಾರಣಕ್ಕೆ ಬರುವುದಿಲ್ಲವೇ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಯೇ? ಉಳಿಸಿಕೊಳ್ಳದಿದ್ದರೆ ಏನಾಗುತ್ತದೆ ಅನ್ನುವುದನ್ನು ಕಾದು ನೋಡಬೇಕು.
ದೇಶದ ರೈತರ ಪರಿಸ್ಥಿತಿ ಸುಧಾರಿಸಲು ಆಗ್ರಹಿಸಿ, ಬರುವ ಮಾರ್ಚ್ ತಿಂಗಳ 23ರಿಂದ ನವದೆಹಲಿಯಲ್ಲಿ ಅಣ್ಣಾ ಹಜಾರೆ ಶಾಂತಿಯುತ ಪ್ರತಿಭಟನೆ ಆರಂಭಿಸಲಿದ್ದಾರೆ. ಇದಕ್ಕಾಗಿ 9 ರಾಜ್ಯಗಳಿಗೆ ಭೇಟಿ ಕೊಟ್ಟಿರುವ ಅಣ್ಣಾಜಿ, ಎಲ್ಲರೂ ತಮ್ಮ ಜೊತೆಗೆ ಕೈ ಜೋಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ