‘ಸುಪ್ರೀಂ’ಗೆ ಮತ್ತೊಬ್ಬರು ಮಹಿಳೆ..

Another woman judge for supreme court

12-01-2018

ಭಾರತದ ಸುಪ್ರೀಂಕೋರ್ಟಿಗೆ ಇಬ್ಬರು ನೂತನ ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿದೆ. ಉತ್ತರಾಖಂಡ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ, ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಮಂಡಳಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 27ಕ್ಕೆ ಏರಲಿದೆ, ಆದರೆ, ನಿಗದಿತ 31 ಸ್ಥಾನಗಳಲ್ಲಿ ಇನ್ನೂ 4 ಸ್ಥಾನಗಳು ಖಾಲಿ ಇವೆ.

ಹಿರಿಯ ವಕೀಲೆ ಇಂದು ಮಲ್ಹೋತ್ರ, ಯಾವುದೇ ಕೋರ್ಟಿನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದೆ ನೇರವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗುತ್ತಿರುವ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸಾಮಾನ್ಯವಾಗಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಮಾಡುವುದು ವಾಡಿಕೆ. ಇಂದು ಮಲ್ಹೋತ್ರ, ಭಾರತ ಸ್ವಾತಂತ್ರ್ಯಗಳಿಸಿದ ನಂತರ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಲಿರುವ 7ನೇ ಮಹಿಳೆಯಾಗಲಿದ್ದಾರೆ. 1989ರಲ್ಲಿ ಎಂ.ಫಾತಿಮ ಬೀವಿ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಸದ್ಯಕ್ಕೆ ಆರ್.ಭಾನುಮತಿ ಅವರು ಸುಪ್ರೀಂಕೋರ್ಟಿನ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ.

ಇಂದು ಮಲ್ಹೋತ್ರಾ, ವಕೀಲರ ಕುಟುಂಬದಿಂದ ಬಂದವರು. ಅವರ ತಂದೆ ಒ.ಪಿ.ಮಲ್ಹೋತ್ರ, ಅಣ್ಣ ಮತ್ತು ಸೋದರಿ ಎಲ್ಲರೂ ವೃತ್ತಿಯಿಂದ ವಕೀಲರೇ ಆಗಿದ್ದಾರೆ. 1983ರಲ್ಲಿ ಕಾನೂನು ಪದವಿ ಪಡೆದು ವಕೀಲಿ ಆರಂಭಿಸಿದ ಇಂದು ಮಲ್ಹೋತ್ರಾ ಅವರಿಗೆ, ಆಗಸ್ಟ್ 2007ರಲ್ಲಿ ಸುಪ್ರೀಂಕೋರ್ಟಿನ ಹಿರಿಯ ವಕೀಲೆ ಸ್ಥಾನಮಾನ ಲಭಿಸಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ