ಫೇಸ್ ಬುಕ್-ವಾಟ್ಸಾಪ್‌ ನಿಂದ ಮದುವೆಗೆ ವಿಘ್ನ…

Bengali Men Are Looking For Brides Who Aren

11-01-2018

ನಮ್ಮ ಮಗ ಸರ್ಕಾರಿ ಉದ್ಯೋಗಿ, ಅವನಿಗೆ 18ರಿಂದ22 ವರ್ಷಗಳ ಒಳಗಿನ ಹೆಣ್ಣು ಬೇಕು. ಹುಡುಗಿ, ಪಿಯುಸಿ ವರೆಗೆ ಮಾತ್ರ ಓದಿದ್ದರೂ ಸಾಕು, ಆದರೆ ಫೇಸ್ ಬುಕ್ ಮತ್ತು ವಾಟ್ಸಾಪ್‌ಗಳಿಗೆ ದಾಸಳಾಗಿರಬಾರದು. ಇದು ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದ ಪತ್ರಿಕೆಗಳಲ್ಲಿ ಹೆಚ್ಚಾಗಿ ಪ್ರಕಟವಾಗುತ್ತಿರುವ ವೈವಾಹಿಕ ಜಾಹೀರಾತುಗಳ ಒಂದು ಸ್ಯಾಂಪಲ್.

ಇಡೀ ದಿನ ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಹಿಡಿದು, ಒಂದೇ ಸಮನೆ ಸೆಲ್ಫಿಗಳನ್ನು, ವಿಡಿಯೊಗಳನ್ನು ಫೇಸ್ ಬುಕ್, ವಾಟ್ಸಾಪ್‌ಗಳಲ್ಲಿ ಹಾಕುತ್ತಲೇ ಇರುವುದು, ಒಂದು ರೀತಿಯಲ್ಲಿ ಮಾದಕವಸ್ತು ಸೇವನೆ ಚಟದ ಸ್ವರೂಪ ಪಡೆದಿರುವುದು ಸುಳ್ಳೇನೂ ಅಲ್ಲ.

ನಾವು ಸಂತೋಷವಾಗಿದ್ದೇವೆ, ಬಗೆ ಬಗೆ ಬಟ್ಟೆ ಹಾಕಿಕೊಂಡಿದ್ದೇವೆ, ಮೂಗಿನ ಮೇಲೆ ಆಕರ್ಷಕ ಗಾಗಲ್ಸ್ ಹಾಕಿಕೊಂಡಿದ್ದೇವೆ, ತಲೆಗೆ ಟೋಪಿ ಹಾಕಿಕೊಂಡಿದ್ದೇವೆ, ಮಾಲ್‌ಗಳಿಗೆ, ಸಿನೆಮಾ ಥಿಯೇಟರ್‌ಗಳಿಗೆ ಹೋಗಿ ಏನೋ ದೊಡ್ಡ ಸಾಧನೆ ಮಾಡಿದ್ದೇವೆ, ಐಸ್ ಕ್ರೀಮ್ ತಿಂದು ಮಜಾ ಹೊಡೆಯುತ್ತಿದ್ದೇವೆ, ಪ್ರವಾಸ ಹೋಗಿ ಸುಖ ಪಟ್ಟಿದ್ದೇವೆ, ಕಾರಿನಲ್ಲಿ ಕುಳಿತು ಖುಷಿಪಡುತ್ತಿದ್ದೇವೆ, ಹೀಗೆ, ಹಲವು ರೀತಿಯಲ್ಲಿ ಎಂಜಾಯ್‌ ಮಾಡುತ್ತಿದ್ದೇವೆ ಎಂದು ಪ್ರದರ್ಶನ ಮಾಡಿಕೊಳ್ಳಲು, ಬಹುತೇಕರು ಫೇಸ್ ಬುಕ್‌, ವಾಟ್ಸಾಪ್‌ಗಳನ್ನು ಬಳಸುತ್ತಿದ್ದಾರೆ. ಈ ರೀತಿಯ ವರ್ತನೆ ಒಂದು ಗಿಳ್ಳಿನ ಸ್ವರೂಪ ಪಡೆದಿದೆ ಎಂದು ಸಮಾಜ ವಿಜ್ಞಾನಿಗಳೂ ಹೇಳುತ್ತಿದ್ದಾರೆ. ಇದೇ ವೇಳೆ, ಇಂಥ ನಡವಳಿಕೆ ಬಗ್ಗೆ ಸಮಾಜದಲ್ಲೂ ಸಾಕಷ್ಟು ಅಸಮಾಧಾನ ಮತ್ತು ಅಸಹನೆ ಉಂಟಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸುವವರಲ್ಲಿ ಗಂಡಸರು, ಹೆಂಗಸರು ಎಲ್ಲರೂ ಇದ್ದಾರೆ. ಆದರೆ, ಮಹಿಳೆಯರ ಚಟುವಟಿಕೆಗಳೇ ಹೆಚ್ಚು ಹೈ ಲೈಟ್ ಆಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಆಟವಾಡುವುದು, ವಿವಾಹೇತರ ಸಂಬಂಧಗಳಿಗೆ ಎಡೆಮಾಡಿಕೊಡಬಹುದು, ವೈವಾಹಿಕ ಬದುಕಿನ ನೆಮ್ಮದಿಗೆ ಧಕ್ಕೆ ತರಬಹುದು ಎಂಬ ಆತಂಕ ಕೆಲವರಲ್ಲಿ ಬಂದಿರಬಹುದು. ಅದರ ಫಲವಾಗಿಯೇ, ಸೋಷಿಯಲ್ ಮೀಡಿಯದಿಂದ ದೂರ ಇರುವ ಹೆಣ್ಣು ಬೇಕು ಎಂಬ ಜಾಹೀರಾತುಗಳು ಹೆಚ್ಚಾಗುತ್ತಿರಬಹುದು.

ಫೇಸ್ ಬುಕ್‌, ವಾಟ್ಸಾಪ್‌ಗಳಲ್ಲಿ ಆಟವಾಡುತ್ತಾ ಕೂರುವ ಹೆಣ್ಣು ನಮಗೆ ಬೇಡ ಎನ್ನುವಂಥ ಈ ಟ್ರೆಂಡ್, ಇಡೀ ದೇಶದಲ್ಲಿ ಹಬ್ಬುವ ಸಾಧ್ಯತೆಗಳೂ ಇವೆ. ಹೀಗಾಗಿ, ಯಾವುದೇ ಆಗಲಿ ಇತಿ ಮಿತಿಯಲ್ಲಿದ್ದರಷ್ಟೇ ಚೆಂದ ಅನ್ನುವ ಮಾತನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ, ತಮ್ಮ ಮನೆಗೆ ಸೊಸೆಯಾಗಿ ಬರುವ ಹೆಣ್ಣಿಗೆ ಮಾತ್ರ ನಿಯಮ, ಆದರೆ, ತಮ್ಮ ಮಗ-ಮಗಳಿಗೆ ಪೂರ್ತಿ ವಿನಾಯಿತಿ, ಎಂಬಂಥ ಧೋರಣೆಗಳೂ ಕೂಡ ನಿಲ್ಲಬೇಕು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ