‘ರಾಜ್ಯ ಚುನಾವಣೆಗೆ ಬ್ಯಾಲೆಟ್ ಪೇಪರ್ ಇಲ್ಲ’10-01-2018

ಬೆಂಗಳೂರು: ಸದ್ಯದಲ್ಲೇ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್ ಬಳಸಲು ಚುನಾವಣಾ ಆಯೋಗ ಸ್ಪಷ್ಟವಾಗಿ ನಿರಾಕರಿಸಿದ್ದು, ವಿದ್ಯುನ್ಮಾನ ಮತಯಂತ್ರಗಳನ್ನೇ ಬಳಸುವುದಾಗಿ ಸ್ಪಷ್ಟಪಡಿಸಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಆಧುನಿಕ ವಿವಿಪ್ಯಾಟ್ ಮತಯಂತ್ರಗಳನ್ನು ಅಳವಡಿಸಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಅಕ್ರಮಕ್ಕೆ ಅವಕಾಶವಿಲ್ಲದ, ಮತ ಚಲಾಯಿಸಿದ ಪ್ರತಿಯೊಬ್ಬರೂ ತಾವು ಯಾರಿಗೆ ಮತ ಚಲಾಯಿಸಿದ್ದೀರಿ ಎನ್ನುವುದನ್ನು ನೋಡಿಕೊಳ್ಳಲು ಅವಕಾಶವಿರುವ ಮತ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. 

ಚುನಾವಣಾ ಸಿದ್ಧತೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳು ಸರಣಿ ಸಭೆ ನಡೆಸಿದರು. ರಾಜಕೀಯ ಪಕ್ಷಗಳ ಪ್ರಮುಖರ ಸಭೆಯಲ್ಲಿ ಪ್ರಮುಖವಾಗಿ ವಿದ್ಯುನ್ಮಾನ ಮತಯಂತ್ರದ ವಿಷಯ ಚರ್ಚೆಗೆ ಬಂದಿತು. ಇವಿಎಂ ನಿಷೇಧ ಮಾಡುವಂತೆ ಚುನಾವಣಾ ಆಯೋಗದ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಪಿ ಪರ ಹಾಜರಿದ್ದ ನಾಯಕರು ಮನವಿ ಮಾಡಿದರು.

ಇವಿಎಂ ದುರ್ಬಳಕೆ ಬಗ್ಗೆ ಆರೋಪ ಕೇಳಿ ಬಂದಿರುವುದರಿಂದ ತಂತ್ರಜ್ಞರು, ವಿಜ್ಞಾನಿಗಳಿಗೆ ಅದರಲ್ಲಿನ ದೋಷ ಪತ್ತೆ ಹಚ್ಚಲು ಅವಕಾಶ ನೀಡುವಂತೆ ಆಯೋಗಕ್ಕೆ ಕಾಂಗ್ರೆಸ್ ಪ್ರತಿನಿಧಿ ಮನವಿ ಮಾಡಿದರು. ಇವಿಎಂನಲ್ಲಿ ದೋಷ ಇದೆ ಎಂದು ನೆದರ್ ಲ್ಯಾಂಡ್, ಅಮೆರಿಕಾ ದೇಶಗಳಲ್ಲಿ ಪತ್ತೆ ಹಚ್ಚಲಾಗಿದೆ. ಅನೇಕ ದೇಶಗಳು ಇವಿಎಂ ಬಳಕೆ ಕೈ ಬಿಟ್ಟಿವೆ. ಆಯೋಗ ಸಂಶಯಗಳಿಗೆ ಅವಕಾಶ ನೀಡದಂತೆ ಚುನಾವಣೆ ನಡೆಸಬೇಕಾದರೆ, ಇವಿಎಂ ದೋಷ ನಿವಾರಿಸಿ, ಇಲ್ಲವೆ ಬ್ಯಾಲೆಟ್ ಪೇಪರ್ ಬಳಸಿ ಎಂದು ಕಾಂಗ್ರೆಸ್  ಒತ್ತಾಯಿಸಿತು.

ಆದರೆ ರಾಜಕೀಯ ಪಕ್ಷಗಳ ವಾದವನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ, ಚುನಾವಣೆಯಲ್ಲಿ ಸೋತ ಪಕ್ಷಗಳು ಈ ರೀತಿಯ ಆರೋಪ ಮಾಡುವುದು ಸಹಜ. ಸುಪ್ರೀಂ ಕೋರ್ಟ್ ಇವಿಎಂ ದಕ್ಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಳ್ಳಿ ಹಾಕಿದರು.

ಇವಿಎಂ ಬಗ್ಗೆ ಅನುಮಾನ ಅಗತ್ಯವಿಲ್ಲ, ಅಲ್ಲದೆ ಹೊಸ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಬೇಕೆ ಹೊರತು ಹಳೆಯ ಪದ್ಧತಿಗೆ ಮರಳುವುದು ಸರಿಯಲ್ಲ. ಇವಿಎಂ ಬಗ್ಗೆ ಆಯೋಗಕ್ಕೆ ಸಂಪೂರ್ಣ ವಿಶ್ವಾಸವಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಇವಿಎಂ ಬಳಕೆ ಮಾಡುತ್ತೇವೆ. ವಿವಿಪ್ಯಾಟ್ ಅಳವಡಿಸಿ ಅನುಮಾನ ನಿವಾರಿಸುತ್ತೇವೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಭರವಸೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election commission EVM ಚುನಾವಣಾ ಆಯೋಗ ಮತ ಯಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ