'ಕಳಸಾ-ಬಂಡೂರಿ ಹೋರಾಟ ಮತ್ತಷ್ಟು ತೀವ್ರ'10-01-2018

ಬೆಂಗಳೂರು: ಕಳಸಾ-ಬಂಡೂರಿ ಮತ್ತು ಮಹದಾಯಿ ಹೋರಾಟವನ್ನು ತೀವ್ರಗೊಳಿಸಲು ಕನ್ನಡ ಒಕ್ಕೂಟದ ಮುಖಂಡರು ತೀರ್ಮಾನಿಸಿದ್ದಾರೆ. ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಇಂದು ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಸಭೆಯಲ್ಲಿ ಕಳಸಾಬಂಡೂರಿ, ಮಹದಾಯಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿವೆ.

ಸಭೆ ಬಳಿಕ ವಾಟಾಳ್ ನಾಗರಾಜ್ ಮಾತನಾಡಿ, ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ಹೋರಾಟವನ್ನು ಕೈಬಿಡುವುದಿಲ್ಲ. ಅಗತ್ಯಬಿದ್ದರೆ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದರು. ಈ ಯೋಜನೆ ಜಾರಿಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. 900 ದಿನಗಳ ಕಾಲ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದರೂ ರಾಜ್ಯದ ಯಾವೊಬ್ಬ ಸಂಸದರು ಸಂಸತ್ ನಲ್ಲಿ ದನಿ ಎತ್ತಲಿಲ್ಲ. ಬಿಜೆಪಿ ಸಂಸದರೂ ಪ್ರಧಾನಿ ಮನವೊಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ ಪಕ್ಷಗಳು ನಾಟಕವಾಡುತ್ತಿವೆ. ಇದೆಲ್ಲದರಿಂದ ರಾಜ್ಯದ ಜನರಿಗೆ ಮೋಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು ಚುನಾವಣೆಯ ಗುಂಗಿನಲ್ಲಿವೆ. ಇವರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಕನ್ನಡ ಒಕ್ಕೂಟ ಮತ್ತೆ ಬೀದಿಗಿಳಿಯಲಿದೆ ಎಂದು ತಿಳಿಸಿದರು. ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುವುದರೊಳಗೆ ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು ಇಲ್ಲದಿದ್ದರೆ ಜ.27ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನು ಒಂದು ತಿಂಗಳಲ್ಲಿ ಕಾವೇರಿಯ ಅಂತಿಮ ತೀರ್ಪು ಹೊರಬೀಳಲಿದ್ದು , ಏನಾಗಲಿದೆ ಎಂಬ ಆತಂಕ ಎದುರಾಗಿದೆ. ನೀರು ನಿರ್ವಾಹಣಾ ಮಂಡಳಿ ಏನಾದರೂ ರಚನೆಯಾದರೆ ನಮ್ಮ ಅಣೆಕಟ್ಟುಗಳು ಕೇಂದ್ರದ ವಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಖಂಡರಾದ ಸಾ.ರಾ.ಗೋವಿಂದ್, ಕೆ.ಆರ್.ಕುಮಾರ್, ಗಿರೀಶ್ ಗೌಡ, ರೈತ ಮುಖಂಡ ಹೆಬಸೂರು ಪ್ರವೀಣ್ ಶೆಟ್ಟಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Kalasa-Banduri vatal nagaraj ಮೇಕೆದಾಟು ಕಾವೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ