ಅಭ್ಯರ್ಥಿಗಳ ಆಯ್ಕಗೆ ವಿಭಿನ್ನ ಕಸರತ್ತು..!

Various exercises for selection of candidates says parameswar

10-01-2018

ಬೆಂಗಳೂರು: ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮ ಸಮಾವೇಶ ಮಾಡುತ್ತಿದ್ದರೆ ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರಾಜ್ಯ ನಾಯಕರ ಜತೆ ಚರ್ಚೆ ನಡೆಸಿದ್ದಾರೆ. ಇದು ಇಬ್ಬರು ನಾಯಕರ ಭಿನ್ನನಡೆ ಅಂದುಕೊಂಡರೆ ತಪ್ಪಾದೀತು. ಇವರಿಬ್ಬರೂ ಪ್ರತ್ಯೇಕವಾಗಿ ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿದ್ದಾರೆ. ನಾನಾ ಆಯಾಮದಲ್ಲಿ ಆಯ್ಕೆ ಕಸರತ್ತು ನಡೆಸಿರುವ ಕಾಂಗ್ರೆಸ್ ರಾಜ್ಯ ನಾಯಕರು ಹೇಗಾದರೂ ಮತ್ತೆ ಅಧಿಕಾರಕ್ಕೆ ಬರಲು ಅಗತ್ಯ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಈ ಮೂಲಕ ರಾಜ್ಯದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಇಬ್ಬಗೆಯ ನಿಲುವು ತಾಳಿಲ್ಲ. ಬದಲಾಗಿ ಎರಡು ವಿಧದಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆಯಲ್ಲಿ  ತೊಡಗಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ತಮ್ಮ ಪ್ರವಾಸ ಸಂದರ್ಭ ಆಯಾ ಕ್ಷೇತ್ರದ ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಚೇರಿಯಲ್ಲೇ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿದ್ದಾರೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರು ಸಮಾವೇಶ, ಸಭೆಗಳ ಮೂಲಕ ಅಭ್ಯರ್ಥಿಯ ಆಯ್ಕೆಗೆ ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಜಿ.ಪರಮೇಶ್ವರ್, ಈಗಾಗಲೇ ಚುನಾವಣೆ ಕಾವು ಆರಂಭವಾಗುತ್ತಿದೆ. ಎರಡು ಭಾಗ ಮಾಡಿಕೊಂಡು ಜನರ ಬಳಿಗೆ ಹೋಗುತ್ತಿದ್ದು, ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ಸಾಧನಾ ಸಮಾವೇಶ ನಂತರ ಸಿಎಂ ಪಕ್ಷದ ಕೆಲಸವನ್ನೂ ಮಾಡುತ್ತಾರೆ ಎಂದರು.

ಅವರು ವಾಸ್ತವ್ಯ ಹೂಡಿದ ಸ್ಥಳದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ ಭಿನ್ನಾಭಿಪ್ರಾಯಗಳಿದ್ದರೆ ಸರಿಪಡಿಸುವ ಕೆಲಸ ನಡೆಸುತ್ತಿದ್ದಾರೆ. ಜತೆಗೆ ಯಾರಿಗೆ ಜನ ಮನ್ನಣೆ ಇದೆ ಎಂದು ಅರಿಯುತ್ತಿದ್ದಾರೆ. ಪ್ರತಿ ವೇದಿಕೆಯಲ್ಲಿ ಮುಕ್ತವಾಗಿ ಇಂಥವರೇ ಅಭ್ಯರ್ಥಿ ಎಂದು ಹೇಳದೇ ಇರಬಹುದು, ಆದರೆ ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಮುಖ್ಯಮಂತ್ರಿಯವರು ಒಂದು ಕಡೆಯಿಂದ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆಂದು ಪ್ರಚಾರ ನಡೆಸುತ್ತಿದ್ದಾರೆ. ಕೆಪಿಸಿಸಿಯಿಂದ ಇನ್ನೊಂದು ತಂಡ 100 ಕ್ಷೇತ್ರಗಳಲ್ಲಿ ಸರ್ಕಾರದ ಕಾರ್ಯಕ್ರಮ ಪ್ರಚಾರ ಮಾಡುತ್ತಿದ್ದೇವೆ. ಕಳೆದ ಬಾರಿ ಸೋತಿರುವ ಕಡೆ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶ ನಮ್ಮದು ಎಂದು ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಅಭ್ಯರ್ಥಿ ಆಯ್ಕೆ ಕಸರತ್ತನ್ನು ವಿಭಿನ್ನವಾಗಿ ನಡೆಸಿದ್ದನ್ನು ಪರಮೇಶ್ವರ್ ತಿಳಿಸಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

G.parameshwar KPCC ಅಭ್ಯರ್ಥಿ ಮುಖ್ಯಮಂತ್ರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ