‘ಮುಕ್ತ-ನ್ಯಾಯಸಮ್ಮತ ಚುನಾವಣೆಗೆ ಕ್ರಮ’

election deputy commisioner press meet in vidhana soudha

10-01-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರತಿ ಅಭ್ಯರ್ಥಿ ಮಾಡುವ ಚುನಾವಣಾ ವೆಚ್ಚ ಇಪ್ಪತ್ತೆಂಟು ಲಕ್ಷಕ್ಕೇರಿಸಲಾಗಿದೆ. ಚುನಾವಣೆಯಲ್ಲಿ ಹಣ ಬಲ ತಗ್ಗಿಸಲು ಹಿಂದೆಂದೂ ಇಲ್ಲದ ಬಿಗಿ ಭದ್ರತೆ ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ. ರಾಜ್ಯದ ಗಡಿಭಾಗಗಳು, ವಿಮಾನ ನಿಲ್ದಾಣಗಳಾದಿಯಾಗಿ ಯಾವುದೇ ಮೂಲದಿಂದಲೂ ಹಣ ಹರಿದುಬರದಂತೆ ಬಂದೋಬಸ್ತ್ ಗೊಳಪಡಿಸಲು ಮತ್ತು ಮದ್ಯ, ಉಡುಗೊರೆಯ ಮೇಲೂ ಕಣ್ಗಾವಲು ಹಾಕಲು ತೀರ್ಮಾನಿಸಿದೆ.

ವಿಧಾನಸೌಧದಲ್ಲಿಂದು ಜಂಟಿಸುದ್ದಿ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಉಪಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಮತ್ತಿತರರು, ಮುಂದಿನ ವಿಧಾನಸಭಾ ಚುನಾವಣೆ ಮುಕ್ತ, ನ್ಯಾಯ ಸಮ್ಮತವಾಗಿ ನಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಳೆದ ವಿದಾನಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಏಳೂವರೆ ಲಕ್ಷ ರೂಗಳನ್ನು ವೆಚ್ಚ ಮಾಡಬಹುದಿತ್ತು. ಆದರೆ ನಂತರ ಬಂದಿರುವ ತಿದ್ದುಪಡಿ ಅನ್ವಯ ವಿಧಾನಸಭೆಗೆ ಸ್ಪರ್ಧಿಸುವವರು ಇಪ್ಪತ್ತೆಂಟು ಲಕ್ಷ, ಸಂಸತ್ತಿಗೆ ಸ್ಪರ್ಧಿಸುವವರು ಐವತ್ತು ಲಕ್ಷ ರೂ. ವೆಚ್ಚ ಮಾಡಲು ಅವಕಾಶವಿದೆ.

ರಾಜ್ಯದಲ್ಲಿ ಸಧ್ಯಕ್ಕೆ 4.90 ಕೋಟಿ ಮತದಾರರಿದ್ದು ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ನೀಡಲಾಗಿದ್ದ ಜನವರಿ ಹನ್ನೆರಡರ ಕಾಲಾವಕಾಶವನ್ನು ವಿಸ್ತರಿಸುವಂತೆ ರಾಜಕೀಯ ಪಕ್ಷಗಳು ಹೇಳಿವೆ. ಅದನ್ನು ಪರಿಗಣಿಸಲಾಗುವುದು ಎಂದರು. ಇದೇ ರೀತಿ 97319 79899 ಸಂಖ್ಯೆಗೆ ಮತದಾರರ ಚೀಟಿಯ ಎಪಿಕ್ ನಂಬರ್ ಅನ್ನು ಎಸ್.ಎಂ.ಎಸ್ ಮಾಡಿದರೆ ಪ್ರತಿ ಮತದಾರರ ಕ್ಷೇತ್ರ, ಮತ ಚಲಾವಣೆ ಮಾಡುವ ಬೂತ್ ವಿವರ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆಯೇ?ತೆಗೆದು ಹಾಕಲ್ಪಟ್ಟಿದೆಯೇ?ಎಂಬುದು ಸೇರಿದಂತೆ ಹಲವು ವಿವರಗಳು ಲಭ್ಯವಾಗಲಿವೆ ಎಂದರು.

ಈ ಮಧ್ಯೆ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಬೇಕೆಂದು ಕೆಲವು ರಾಜಕೀಯ ಪಕ್ಷಗಳು ಹೇಳಿವೆ. ಇನ್ನೂ ಕೆಲವು ಪಕ್ಷಗಳು,ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿವೆ. ಆದರೆ ಈ ಕುರಿತು ಇದುವರೆಗೂ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಗಡಿಭಾಗಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಒಟ್ಟಿನಲ್ಲಿ ಹೊರಗಿನಿಂದ ಯಾವುದೇ ಹಣ ಹಾಗೂ ಮದ್ಯ ಬರುವ ಕುರಿತು ಪರಿಶೀಲನೆ ನಡೆಸಲಾಗುವುದು ಎಮದು ಹೇಳಿದರು.

ಈ ವರ್ಷದ ಜನವರಿ 1 ರಂದು ಹದಿನೆಂಟು ವರ್ಷ ತುಂಬಿದವರು ಮತದಾನಕ್ಕೆ ಅರ್ಹರು. ಅವರು ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅದೇ ರೀತಿ ಮತದಾರರು ಕೂಡಾ ತಮ್ಮ ಕ್ಷೇತ್ರದ ಕುರಿತು ಅರಿವು ಇರಿಸಿಕೊಳ್ಳಲು ಮೇಲೆ ಹೇಳಿದ ದೂರವಾಣಿ ಸಂಖ್ಯೆಗೆ ತಮ್ಮ ಮತದಾರರ ಚೀಟಿಯ ಗುರುತಿನ ಸಂಖ್ಯೆ ಕಳಿಸಬೇಕು ಎಂದು ಅವರು ವಿವರ ನೀಡಿದರು.

ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಪೋಲೀಸ್ ಪಡೆಯ ಸೇವೆಯನ್ನು ಬಳಸಿಕೊಳ್ಳಲಾಗುವುದು, ಯಾವ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲಾಗಿದ್ದು ಎಲ್ಲ ಕೆಲಸಗಳು ಸಮಂಜನಸವಾಗಿ ನಡೆಯುತ್ತಿವೆ ಎಂದು ಹೇಳಿದರು.

ಮತಗಟ್ಟೆಗೆ ಬರುವ ಯಾವ ಮತದಾರರು ನಿರಾಸೆಯಿಂದ ಹಿಂತಿರುಗಬಾರದು. ತಮ್ಮ ಹಕ್ಕನ್ನು ಚಲಾಯಿಸಿ ಹಿಂತಿರುಗುವಂತಾಗಬೇಕು ಎಂಬ ಉದ್ದೇಶದಿಂದ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಹಿರಿಯ ನಾಗರೀಕರು ಸೇರಿದಂತೆ ಎಲ್ಲ ಬಗೆಯ ಮತದಾರರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ಕಾರಣಕ್ಕಾಗಿ ಸ್ಬಯಂಸೇವಕರನ್ನು ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಸಂದೀಪ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ