ಬೆಳ್ಳಿ ಚಮಚ ಕದ್ದ ಪತ್ರಕರ್ತರು…

Senior Journalists Steal Silver Cutlery During Official Dinner Meet:London

10-01-2018

ಕಳ್ಳ ಬುದ್ಧಿ ಅನ್ನುವುದು ಇಂಥವರಲ್ಲಿರುತ್ತದೆ ಅಥವ ಇಂಥವರಲ್ಲಿ ಇರುವುದಿಲ್ಲ ಎಂದು ಹೇಳುವುದು ತುಂಬಾ ಕಷ್ಟ. ಯಾಕಪ್ಪಾ ಈ ಮಾತನ್ನು ಹೇಳುತ್ತಿದ್ದೀರಿ ಅಂದ್ರಾ? ಕಾರಣ ಇದೆ. ಮೊನ್ನೆಯಷ್ಟೇ ನಮ್ಮ ಅಕ್ಕ, ಅದೇ ಸ್ವಾಮಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲಂಡನ್‌ಗೆ ಅಧಿಕೃತ ಭೇಟಿ ಕೊಟ್ಟಿದ್ದರು. ಈ ವೇಳೆ, ಬಂಗಾಳದ ಹಿರಿಯ ಪತ್ರಕರ್ತರ ತಂಡವನ್ನೂ ಜೊತೆಗೆ ಕರೆದೊಯ್ದಿದ್ದರು, ಬೇಡವೇ ಮತ್ತೆ, ಮಮತಾ ದೀದಿ ಏನೆಲ್ಲ ಸಾಧನೆ ಮಾಡಿದರು, ಯಾವ ರೀತಿಯಲ್ಲಿ ಬಂಗಾಳಕ್ಕೆ ಲಾಭ ಮಾಡಿಕೊಟ್ಟರು ಅನ್ನುವುದನ್ನು ಎಲ್ಲರಿಗೂ ತಿಳಿಸಬೇಕು ತಾನೆ? ಹಲವು ಪತ್ರಿಕೆಗಳು ಮತ್ತು ಚಾನಲ್‌ಗಳವರು ತಾವೇ ಖುದ್ದು ಆಯ್ಕೆ ಮಾಡಿದ ಪತ್ರಕರ್ತರನ್ನು ದೀದಿ ಜೊತೆ ಕಳಿಸಿಕೊಟ್ಟಿದ್ದರು. ಮಮತಾ ಬ್ಯಾನರ್ಜಿ ಮತ್ತು ಜೊತೆಗಿದ್ದವರಿಗೆ ಲಂಡನ್‌ ಮಹಾನಗರದ ಐಶಾರಾಮಿ ಹೋಟೆಲ್ ಒಂದರಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಔತಣ ಕೂಟದಲ್ಲಿ, ಭಾರತ ಮತ್ತು ಇಂಗ್ಲೆಂಡ್‌ ದೇಶದ ಹಲವರು ಗಣ್ಯಾತಿಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳು ಪಾಲ್ಗೊಂಡಿದ್ದರು.

ಎಲ್ಲರೂ ಬೆಳ್ಳಿಯ ತಟ್ಟೆ, ಲೋಟ ಮತ್ತು ಚಮಚಗಳನ್ನು ಬಳಸಿ ಬಗೆ ಬಗೆಯ ಖಾದ್ಯಗಳನ್ನು ಸವಿದರು. ಅಲ್ಲಿಯವರೆಗೆ ಈ ಔತಣ ಕೂಟದಲ್ಲಿ ಎಲ್ಲವೂ ಚೆನ್ನಾಗಿತ್ತು. ಅದ್ಯಾಕೋ ಗೊತ್ತಿಲ್ಲ, ಒಬ್ಬ ಬಂಗಾಳಿ ಪತ್ರಕರ್ತನಿಗೆ ಒಂದಿಷ್ಟು ತನ್ನ ಕೈಚಳಕ ತೋರಿಸಬೇಕು ಅನ್ನಿಸಿಬಿಟ್ಟಿತ್ತು. ಟೇಬಲ್ ಮೇಲಿದ್ದ ಬೆಳ್ಳಿಯ ವಸ್ತುಗಳಲ್ಲಿ ಕೆಲವನ್ನಾದರೂ ಮೆಲ್ಲಗೆ ಬ್ಯಾಗಿನೊಳಕ್ಕೆ ಇಳಿಬಿಟ್ಟುಕೊಳ್ಳಬೇಕು ಅನ್ನಿಸಿತು. ಸರಿ ತಡವೇಕೆ ಎಂದು ಆ ಕೆಲಸ ಮುಗಿಸಿಬಿಟ್ಟ, ಇದನ್ನು ಕಂಡ ಇತರೆ ಕೆಲವರು ಪತ್ರಕರ್ತರು ಅದನ್ನು ಪ್ರಶ್ನಿಸಬಹುದಿತ್ತು, ಹಾಗೆ ಮಾಡುವುದು ತಪ್ಪು ಎಂದು ಹೇಳಬಹುದಿತ್ತು. ಆದರೆ ಅವರು ಮಾಡಿದ್ದೇನು ಗೊತ್ತೇ? ಅವರಲ್ಲೂ ಕೆಲವರು, ಮೆಲ್ಲಗೆ ಒಂದೆರಡು ಬೆಳ್ಳಿ ಐಟಮ್‌ಗಳನ್ನು ತಮ್ಮ ತಮ್ಮ ಬ್ಯಾಗುಗಳಿಗೆ ಇಳಿಬಿಟ್ಟು, ನಸುನಗುತ್ತಾ ಹೋಟೆಲ್‌ನಿಂದ ಹೊರಟು ನಿಂತರು. ಆಗಲೇ ನೋಡಿ, ಎಡವಟ್ಟಾಗಿದ್ದು.

ಪತ್ರಕರ್ತರ ಕೈ ಕೆಲಸವನ್ನು ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ವೀಕ್ಷಿಸಿದ್ದ ಹೋಟೆಲ್‌ ಸಿಬ್ಬಂದಿ, ಈ ಗಣ್ಯ ವ್ಯಕ್ತಿಗಳ ಬಳಿಗೆ ಬಂದು, ತಾವು ತೆಗೆದುಕೊಂಡಿರುವ ಬೆಳ್ಳಿಯ ವಸ್ತುಗಳನ್ನು ವಾಪಸ್ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಎಂದು ನಯವಾಗಿ ಹೇಳಿದರು. ಕೆಲವರಿಗೆ ಇಷ್ಟು ಸಾಕಾಗಿತ್ತು, ನಾಚಿಕೆಯಿಂದ, ಹೆಚ್ಚು ಮಾತನಾಡದೆ ಕದ್ದದ್ದೆಲ್ಲವನ್ನೂ ಕಕ್ಕಿ ಹೊರನಡೆದರು. ಆದರೆ, ಒಬ್ಬ ಪತ್ರಕರ್ತ ಮಾತ್ರ ಹೋಟೆಲ್ ಸಿಬ್ಬಂದಿಯನ್ನೇ ದಬಾಯಿಸಲು ಆರಂಭಿಸಿದ, ನನ್ನನ್ನು ಬೇಕಾದರೆ ತಪಾಸಣೆ ಮಾಡಿಕೊಳ್ಳಿ ಎಂದು ಸವಾಲೆಸೆದ. ಆದರೆ, ಈ ವ್ಯಕ್ತಿ, ಬೆಳ್ಳಿ ವಸ್ತುಗಳನ್ನು ಕದ್ದು ಮತ್ತೊಬ್ಬ ಪತ್ರಕರ್ತನ ಬ್ಯಾಗಿಗೆ ತುರುಕಿದ್ದ, ಅದೂ ಕೂಡ ಅಲ್ಲಿ ಬಯಲಾಗಿತ್ತು. ಹೀಗಿದ್ದರೂ, ಭಂಡಾಟ ಮುಂದುವರೆಸಿದ ಈ ಗೌರವಾನ್ವಿತ ಪತ್ರಕರ್ತ, ಪೊಲೀಸರಿಗೆ ತಿಳಿಸುತ್ತೇವೆ ಎಂದು ಹೇಳಿದ ಮೇಲೆ ತಪ್ಪೊಪ್ಪಿಕೊಂಡ. ಈತನಿಂದ 50 ಪೌಂಡ್ ಅಂದರೆ ಸುಮಾರು 4 ಸಾವಿರ ರೂಪಾಯಿ ದಂಡ ವಸೂಲಿ ಮಾಡಿಯೇ ಅಲ್ಲಿಂದ ಸೆಂಡ್ ಆಫ್ ನೀಡಲಾಯಿತು. ಒಟ್ಟಿನಲ್ಲಿ, ಕಳ್ಳಬುದ್ಧಿ ಅನ್ನುವುದು, ಇಂಥವರಿಗೇ ಸೀಮಿತವಾದ ಸಂಗತಿಯಂತೂ ಅಲ್ಲ. ಕಳ್ಳಬುದ್ಧಿ  ತೋರಿಸಿ ಸಿಕ್ಕಿಬಿದ್ದವರಲ್ಲಿ ಜಗತ್ತಿನ ಹೆಸರಾಂತ ನಟ ನಟಿಯರು, ಕ್ರೀಡಾ ತಾರೆಗಳು ಮತ್ತು ರಾಜಕಾರಣಿಗಳೂ ಇದ್ದಾರೆ ಅನ್ನುವುದು ಆಶ್ಚರ್ಯವಾದರೂ, ಸತ್ಯದ ಸಂಗತಿ


ಸಂಬಂಧಿತ ಟ್ಯಾಗ್ಗಳು

Mamata Banerjee Silver Cutlery ಮರ್ಯಾದೆ ವಸೂಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ