‘ಹ್ಯಾಪಿ ನಾರಿ’ ಯಂತ್ರ ಸ್ಥಾಪನೆ

First Railway Station To Install Sanitary Pad Dispenser

10-01-2018

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಗರದ ರೈಲ್ವೆ ನಿಲ್ದಾಣದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾನಿಟರ್ ಪ್ಯಾಡ್ ವಿತರಿಸುವ ಯಂತ್ರ ಸ್ಥಾಪಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಕೊಡುಗೆಯಾಗಿ ಸ್ಥಾಪಿಸಿರುವ ‘ಹ್ಯಾಪಿ ನಾರಿ’ ಎಂಬ ಹೆಸರಿನ ಈ ಯಂತ್ರ, 5 ರೂಪಾಯಿಗೆ ಎರಡು ನ್ಯಾಪ್‌ಕಿನ್ ವಿತರಿಸುತ್ತದೆ.  ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ಆರುಷಿ ನೆರವಿನೊಂದಿಗೆ ಸ್ಥಾಪಿಸಿರುವ ಈ ಯಂತ್ರ, ಒಂದು ಬಾರಿಗೆ 75 ನ್ಯಾಪ್‌ಕಿನ್ ಸ್ಟೋರ್‌ ಮಾಡಿಟ್ಟುಕೊಳ್ಳುತ್ತದೆ. ಯಂತ್ರದಲ್ಲಿನ ನ್ಯಾಪ್‌ಕಿನ್‌ಗಳು ಮುಗಿದ ಬಳಿಕ ಮತ್ತೆ ಹಾಕುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಬಳಸಿದ ನ್ಯಾಪ್‌ಕಿನ್‌ ಗಳನ್ನು ವಿಲೇವಾರಿ ಮಾಡಲು ಇನ್ಸಿನೆರೇಟರ್ ಕೂಡ ಸ್ಥಾಪಿಸಲಾಗುತ್ತದಂತೆ. ಭೋಪಾಲ್ ರೈಲ್ವೆ ಸ್ಟೇಷನ್‌ನಲ್ಲಿ ಸ್ಥಾಪಿಸಿರುವ ಈ ಯಂತ್ರದಿಂದ ದೊರೆಯುವ ನ್ಯಾಪ್‌ಕಿನ್‌ಗಳನ್ನು ರೈಲು ಪ್ರಯಾಣಿಕರು ಮತ್ತು ನಿಲ್ದಾಣದ ಸುತ್ತಲಿನ ಬಡಮಹಿಳೆಯರೂ ಪಡೆದುಕೊಳ್ಳುತ್ತಿದ್ದಾರಂತೆ.

2015ರಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ, ಕೇರಳದ ಸರ್ಕಾರಿ ಶಾಲೆಗಳಲ್ಲಿ ಸ್ಯಾನಿಟರ್ ನ್ಯಾಪ್‌ಕಿನ್ ವಿತರಣೆ ಯಂತ್ರಗಳನ್ನು ಸ್ಥಾಪಿಸಲಾಗಿತ್ತು. ಇದೆಲ್ಲವನ್ನೂ ಗಮನಿಸಿರುವ ಸುಪ್ರೀಂಕೋರ್ಟ್‌ ಕೂಡ, ತನ್ನ ಆವರಣದಲ್ಲಿ ನ್ಯಾಪ್‌ಕಿನ್ ವಿತರಣೆ ಯಂತ್ರ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹೆಣ್ಣಿನ ಒಂದು ಸಹಜ ದೈಹಿಕ ಪ್ರಕ್ರಿಯೆ ಆಗಿರುವ ಮುಟ್ಟು ಅಥವ ಋತುಸ್ರಾವ ಅನ್ನುವುದನ್ನು, ಭಾರತದಲ್ಲಿ ಇನ್ನೂ ಕೂಡ ಒಂದು ರೀತಿಯ ನಿಷಿದ್ಧ ಭಾವನೆಯಿಂದಲೇ ಕಾಣುತ್ತಾರೆ. ಭಾರತದ ಬಹುತೇಕ ಮಹಿಳೆಯರಿಗೆ, ಈಗಲೂ ಯಾವುದೇ ನ್ಯಾಪ್‌ಕಿನ್ ಸಿಗುತ್ತಿಲ್ಲ, ಹೆಚ್ಚಿನವರು ಋುತುಸ್ರಾವದ ವೇಳೆ ಅನಾರೋಗ್ಯಕರವಾದ ರೀತಿಯಲ್ಲಿ ಹಳೆಯ ಬಟ್ಟೆಗಳನ್ನೇ ಬಳಸುತ್ತಾರೆ. ಇಂಥ ಸನ್ನಿವೇಶದಲ್ಲಿ, ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ನ್ಯಾಪ್‌ಕಿನ್ ವಿತರಣೆ ಯಂತ್ರಗಳನ್ನು ಸ್ಥಾಪನೆ ಮಾಡಬೇಕಾಗಿದೆ. ಇದರ ಜೊತೆಗೆ ಹೆಣ್ಣು ಮಕ್ಕಳು, ತಮ್ಮ ಆರೋಗ್ಯ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವೂ ಇದೆ. 


ಸಂಬಂಧಿತ ಟ್ಯಾಗ್ಗಳು

Sanitary Pad Bhopal ರಾಜಧಾನಿ ಆರೋಗ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ