ಪ್ಲಾಸ್ಟಿಕ್ ಧ್ವಜ ಬಳಸಿದರೆ ಶಿಕ್ಷೆ...!

Plastic National Flags Ban

10-01-2018

ಇನ್ನೇನು ಕೆಲವೇ ದಿನಗಳಲ್ಲಿ 69ನೇ ಗಣರಾಜ್ಯೋತ್ಸವ ಬಂತು, ಭಾರತ ಸಂವಿಧಾನಾತ್ಮಕ ಪ್ರಜಾತಂತ್ರ ವ್ಯವಸ್ಥೆಯಾಗಿ ರೂಪುಗೊಂಡ ಸುದಿನ ಅದು. ಆದರೆ, ನಿಜವಾಗಿಯೂ ಪ್ರಜಾತಂತ್ರ ವ್ಯವಸ್ಥೆ ಎಂದರೇನು? ಅದರಲ್ಲಿ ಸಾರ್ವಜನಿಕರ ಪಾತ್ರವೇನು? ಅನ್ನುವ ವಿಚಾರಗಳ ಬಗ್ಗೆ ದೇಶದ ಹೆಚ್ಚಿನ ನಾಗರಿಕರಿಗೆ ಮಾಹಿತಿ ಇಲ್ಲ. ಹೇಳಬೇಕೆಂದರೆ, ದೇಶದಲ್ಲಿ ಆಡಳಿತ ನಡೆಸುತ್ತಿರುವ ರಾಜಕಾರಣಿಗಳಲ್ಲೂ ಬಹುತೇಕರಿಗೆ, ಗಣರಾಜ್ಯ ಅನ್ನುವುದರ ಅರ್ಥವೇ ಸರಿಯಾಗಿ ಗೊತ್ತಿಲ್ಲ.

ಇರಲಿ, ಸದ್ಯಕ್ಕೆ ವಿಚಾರವೇನೆಂದರೆ, ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಪ್ರೇಮ ತೋರಿಸಲು ನಾವೆಲ್ಲರೂ ಕೇಸರಿ, ಬಿಳಿ, ಹಸಿರು ಬಣ್ಣದ ರಾಷ್ಟ್ರ ಧ್ವಜವನ್ನು ಹಾರಿಸುತ್ತೇವೆ, ಕೈಗಳಲ್ಲಿ ಹಿಡಿದು ಮೆರವಣಿಗೆ ಹೋಗುತ್ತೇವೆ, ನಮ್ಮ ವಾಹನಗಳ ಮೇಲೂ ಹಾಕಿಕೊಂಡು ತಿರುಗಾಡುತ್ತೇವೆ. ಆದರೆ, ಬಹುತೇಕರು ಫೂಟ್‌ಪಾತ್ ಮೇಲೆ ಸಿಗುವ ಕಳಪೆ ದರ್ಜೆ ಪ್ಲಾಸ್ಟಿಕ್‌ ಧ್ವಜಗಳನ್ನು ಖರೀದಿಸಿ ಮಧ್ಯಾಹ್ನದವರೆಗೂ ಅದನ್ನು ಮೆರೆಸುತ್ತಾರೆ. ಸಂಜೆಯಾಗುವಷ್ಟರಲ್ಲಿ ಬೀದಿ ಬೀದಿಗಳಲ್ಲಿ ಮುರಿದ, ಮುದುಡಿದ, ಹರಿದುಹೋದ ಪ್ಲಾಸ್ಟಿಕ್ ಧ್ವಜಗಳು ಇಟ್ಟಾಡುತ್ತಿರುತ್ತವೆ. ಕೆಲ ಹೊತ್ತಿನ ಹಿಂದೆ ದೇಶ ಪ್ರೇಮ ಮತ್ತು ಗೌರವದ ಸಂಕೇತವಾಗಿದ್ದ ಧ್ವಜಗಳು ಈ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದರೆ ಬೇಸರ ಮತ್ತು ಕೋಪ ಬರದೇ ಇರದು.

ಭಾರತದ ಜನರ ನಿರೀಕ್ಷೆ ಮತ್ತು ಆಶೋತ್ತರಗಳ ಸಂಕೇತವೂ ಆಗಿರುವ ರಾಷ್ಟ್ರ ಧ್ವಜವನ್ನು ಎಲ್ಲೆಂದರಲ್ಲಿ ಎಸೆದು, ಅಗೌರವ ತೋರುವುದು, 1971ರ ರಾಷ್ಟ್ರ ಗೌರವಕ್ಕೆ ಧಕ್ಕೆ ನಿಯಂತ್ರಣ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ರಾಷ್ಟ್ರ ಧ್ವಜವನ್ನು ಸುಡುವುದು, ಹರಿಯುವುದು, ಎಸೆಯುವುದು, ತುಳಿಯುವುದು ಅಥವ ಯಾವುದೇ ರೀತಿಯಲ್ಲಿ ಅಗೌರವ ತೋರುವ ನಡವಳಿಕೆಗೆ ಗರಿಷ್ಟ 3 ವರ್ಷಗಳ ಜೈಲು ಶಿಕ್ಷೆ ಅಥವ ದಂಡ ಅಥವ ಅವೆರಡನ್ನೂ ವಿಧಿಸಬಹುದಾಗಿದೆ. ಹೀಗಾಗಿ, ದೇಶದ ಜನರಲ್ಲಿ ಅರಿವು ಮೂಡಿಸಲು ಮತ್ತು ರಾಷ್ಟ್ರದ್ವಜಕ್ಕೆ ಅಪಮಾನವುಂಟಾಗುವ ಸಂದರ್ಭಗಳನ್ನು ತಪ್ಪಿಸಲು, ಕೇಂದ್ರ ಗೃಹ ಇಲಾಖೆ ಮುಂದಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಗೃಹ ಇಲಾಖೆ, ಪ್ಲಾಸ್ಟಿಕ್‌ ನಿಂದ ತಯಾರಿಸಿದ ಧ್ವಜ ಬಳಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲು ಹೇಳಿದೆ ಮತ್ತು ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ಬಹು ಮುಖ್ಯವಾದ ರಾಷ್ಟ್ರೀಯ ಹಬ್ಬ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ವೇಳೆ, ಪೇಪರ್ ನಿಂದ ತಯಾರಿಸಿದ ಧ್ವಜಗಳನ್ನು ಸಾರ್ವಜನಿಕರು ಬಳಸುವುದಕ್ಕೆ, ಫ್ಲಾಗ್ ಕೋಡ್ ಆಫ್ ಇಂಡಿಯ, 2002ರ ಅನುಸಾರ ಅವಕಾಶವಿದೆ. ಆದರೆ, ಯಾವುದೇ ರೀತಿಯ ಧ್ವಜಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮಾತ್ರ ನಿಷಿದ್ಧ. ಈ ಬಾರಿ ನೀವು, ನಿಮ್ಮ ಮನೆಯವರು ಮತ್ತು ಸ್ನೇಹಿತರು ಯಾರೂ ಕೂಡ ಪ್ಲಾಸ್ಟಿಕ್ ಧ್ವಜ ಬಳಸುವುದಿಲ್ಲ ತಾನೇ?


ಸಂಬಂಧಿತ ಟ್ಯಾಗ್ಗಳು

Flag plastic ಗಣರಾಜ್ಯ ಪ್ರಜಾತಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ