ಬಜೆಟ್ ಸಿದ್ಧತೆಯಲ್ಲಿ ಸರ್ಕಾರ..!

Budget preparation from government ..!

10-01-2018

ಬೆಂಗಳೂರು: ರಾಜ್ಯದ 2018-19 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆಗಳು ನಡೆಯುತ್ತಿವೆ. ಬಜೆಟ್ ಪೂರ್ವಭಾವಿ ಸಭೆಗಳಿಗೆ ಸಮಯ ನಿಗದಿಯಾಗಿದ್ದು, ಜನವರಿ 18 ರಿಂದ ಬಜೆಟ್ ಪೂರ್ವಭಾವಿ ಸಭೆಗಳು ಪ್ರಾರಂಭವಾಗಲಿವೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ  2018-19 ನೇ ಸಾಲಿನ ರಾಜ್ಯ ಬಜೆಟ್ ಪೂರ್ವಭಾವಿ ಇಲಾಖಾವಾರು ಸಭೆಗಳಿಗೆ ಜನವರಿ 18ರಿಂದ ಚಾಲನೆ ನೀಡಲಿದ್ದು, ಸಿದ್ದರಾಮಯ್ಯ  ರಾಜ್ಯದ ಹಣಕಾಸು ಸಚಿವರಾಗಿ ತಮ್ಮ ಹದಿಮೂರನೇ ಆಯವ್ಯಯ ಮಂಡನೆಗೆ ಸಿದ್ಧತೆಗಳು ನಡಯುತ್ತಿವೆ.

ಪ್ರಪ್ರಥಮವಾಗಿ ಜನವರಿ 18 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಯವರು ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದು, ಜನವರಿ 19 ರಿಂದ ಫೆಬ್ರವರಿ 1ರವರೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳು, ಕರ್ನಾಟಕ ವಿದ್ಯುತ್ ನಿಗಮದ ಶಕ್ತಿ ಭವನದ ಸಭಾಂಗಣದಲ್ಲಿ ನಡೆಯಲಿವೆ.

ಜನವರಿ 19ರಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕಾರ್ಮಿಕ, ಕೌಶಲ್ಯಾಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ, ಇಂಧನ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ.  

ತದನಂತರ, ಜನವರಿ 20ರಂದು ಕನ್ನಡ ಮತ್ತು ಸಂಸ್ಕತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ ವ್ಯಾಪ್ತಿಗೆ ಒಳಪಟ್ಟ ಮುಜರಾಯಿ, ಜವಳಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಔಕಾಫ್ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಭೆಗಳು. ಜನವರಿ 22ರಂದು ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಸಣ್ಣ ನೀರಾವರಿ ಸೇರಿದಂತೆ ಜಲಸಂಪನ್ಮೂಲ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳು ನಡೆಯಲಿವೆ.

ಅದೇ ರೀತಿ ಜನವರಿ 25ರಂದು ಕೃಷಿ, ಆಹಾರ ಸಂಸ್ಕರಣೆ, ಪಶುಸಂಗೋಪನೆ, ರೇಷ್ಮೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಇ-ಆಡಳಿತ ಒಳಗೊಂಡಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಭೆ, ಜನವರಿ 30ರಂದು ಸಹಕಾರ, ವಸತಿ, ಸಾರ್ವಜನಿಕ ಉದ್ದಿಮೆಗಳು, ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಮಹಾನಗರ ಪಾಲಿಕೆಗಳು ಒಳಗೊಂಡಂತೆ ನಗರಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವ್ಯಾಪ್ತಿಯ ಹಜ್ ಸಭೆಗಳು ನಡೆಯಲಿವೆ.

ಜನವರಿ 31ರಂದು ಗೃಹ, ಲೋಕೋಪಯೋಗಿ, ಸಾರಿಗೆ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಇಲಾಖೆ ಸಭೆಗಳು ಮತ್ತು ಫೆಬ್ರವರಿ 1ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ,ವಾಣಿಜ್ಯ ಮತ್ತು ಕೈಗಾರಿಕಾ ವ್ಯಾಪ್ತಿಯ ಸಣ್ಣ ಕೈಗಾರಿಕೆ, ಸಕ್ಕರೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಗಣ ಮತ್ತು ಭೂ ವಿಜ್ಞಾನ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡಯಲಿದೆ.

ಫೆಬ್ರವರಿ 2 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ಸಂಘಟನೆ ಸಂಸ್ಥೆಗಳು, ಸಾರಿಗೆ ಸಂಘ ಸಂಸ್ಥೆಗಳು, ಅಬಕಾರಿ ಸಂಘ ಸಂಸ್ಥೆಗಳು ಹಾಗೂ  ಭೂ ಮಾರುಕಟ್ಟೆ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಫೆಬ್ರವರಿ 3ರಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ದಲಿತ ಸಂಘಟನೆಗಳ ಮುಖಂಡರು, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಅಲ್ಪಸಂಖ್ಯಾತರ ಸಮುದಾಯದ ಸಂಸತ್ ಸದಸ್ಯರು ಮತ್ತು ಶಾಸಕರೊಂದು ಸಭೆ ನಡೆಯಲಿದ್ದು, ಕಡೆಯದಾಗಿ ಫೆಬ್ರವರಿ 5ರಂದು ಕರ್ನಾಟಕ ವಿದ್ಯುತ್ ನಿಗಮದ ಶಕ್ತಿ ಭವನ ಸಭಾಂಗಣದಲ್ಲಿ ರಾಜಸ್ವ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆಗಳು, ಅಬಕಾರಿ, ಸಾರಿಗೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಮುಖ್ಯಸ್ಥರೊಂದಿಗೆ ಪರಿಶೀಲನಾ ಸಭೆಗಳು ನಡಯಲಿವೆ ಎಂದು ತಿಳಿದು ಬಂದಿದೆ. 


ಸಂಬಂಧಿತ ಟ್ಯಾಗ್ಗಳು

Karnataka Budget ವಿಜ್ಞಾನ ಒಕ್ಕೂಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ