‘ವಿಪಕ್ಷ ವಿನಾಕಾರಣ ಸುಳ್ಳು ಹೇಳಬಾರದು’09-01-2018

ಕೊಡಗು: ಮಡಿಕೇರಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಹಲವೆಡೆ ನಡೆಯಲಿರುವ ಒಟ್ಟು 121.55 ಕೋಟಿ ರೂಪಾಯಿ ವೆಚ್ಚದ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದರು. ಇದೇ ವೇಳೆ ವಾರ್ತಾ ಇಲಾಖೆ ಹೊರತಂದಿರುವ ಸಾಧನಾ ಸಂಭ್ರಮ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಅವರು, ಇದೇ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ಹಾಗೂ ಪರಿಕರಗಳ ವಿತರಣೆ ಮಾಡಿದರು.

ಇನ್ನು ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಣಾಳಿಕೆ ಮೂಲಕ ನೀಡಿದ ವಚನವನ್ನು ನೂರಕ್ಕೆ ನೂರರಷ್ಟು ಈಡೇರಿಸಿದ್ದೇವೆ, ಪ್ರಣಾಳಿಕೆ ಮೀರಿ ಹೊಸ ಹೊಸ ಭಾಗ್ಯಗಳನ್ನು ಸರ್ಕಾರ ಜನರಿಗೆ ನೀಡಿದೆ, ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಕೊಟ್ಟ ಭರವಸೆ ಈಡೇರಿಸಿದ ಮೊದಲ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಅಧಿಕಾರ ಸಿಗೋದು ಮಜಾ ಮಾಡೋಕೆ, ಅನುಭವಿಸೋಕೆ ಅಲ್ಲ, ಆರ್ಥಿಕತೆ ಬಗ್ಗೆ ಗೊತ್ತಿಲ್ಲದವರು, ಅಜ್ಞಾನಿಗಳು ಸರ್ಕಾರ ಸಾಲ ಮಾಡಿದೆ ಎಂದು ಕೂಗಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಪ್ರೊಡಕ್ಷನ್ ಮತ್ತು ಡಿಸ್ಟ್ರಿಬ್ಯೂಷನ್ ನಲ್ಲಿ ಜನರೆಲ್ಲಾ ಪಾಲ್ಗೊಳ್ಳಬೇಕು ಸಿಎಂ ಸಲಹೆ ನೀಡಿದ್ದಾರೆ.

ಸುಂದರ ಸಮಾಜವನ್ನು ಜಾತಿ ಧರ್ಮದ ಹೆಸರಿನಲ್ಲಿ ಒಡೆಯಬಾರದು, ಕುವೆಂಪು ಅವರು ಬರೆದಿರುವ ನಾಡಗೀತೆಯ ಸಾಲುಗಳಂತೆ ಬದುಕಬೇಕು ಎಂದು ಹೇಳಿದರು. ವಾಸಿಸುವವನೇ ಮನೆ ಒಡೆಯ ಎಂಬ ವಿನೂತನ ಕಾನೂನು ತಂದಿದ್ದೇವೆ, ರಾಜ್ಯದಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ನಮಗಿದೆ. ವಿಪಕ್ಷ ಎಂಬ ಕಾರಣಕ್ಕೆ ಸುಮ್ಮನೆ ಸುಳ್ಳು ಹೇಳಬಾರದು, ಸುಳ್ಳಿಗೂ ಮಿತಿ ಇರಬೇಕು, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಅಂತ ಸುಮ್ಮನೆ ಪುಂಗಿ ಊದುತ್ತಿದ್ದಾರೆ ಆದರೆ ಅವರ ಬುಟ್ಟಿಯಲ್ಲಿ ಹಾವೇ ಇಲ್ಲ ಎಂದು ಲೇವಡಿ ಮಾಡಿದರು.

ಇನ್ನು ಇದೇ ವೇಳೆ ಮಾತನಾಡಿದ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ 5 ವರ್ಷಗಳ ಕಾಲ ಹಗರಣ ಇಲ್ಲದೆ ಆಡಳಿತ ನೀಡಿದ್ದು, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದೆ ಎಂದರು. ಜಾತಿ ಮತ ಧರ್ಮ ಮೀರಿ ಸಿದ್ದರಾಮಯ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಸರ್ಕಾರ ಶ್ರಮಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ 151 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದೇವೆ, ಕೊಡಗಿಗೆ ಕಳೆದ 5 ವರ್ಷಗಳಲ್ಲಿ 2097 ಕೋಟಿ ಅಭಿವೃದ್ಧಿ ಕಾರ್ಯಗಳು ನಡೆದಿವೆ, ಅಲ್ಲದೆ ಕೊಡಗು ಜಿಲ್ಲೆಗೆ 200 ಕೋಟಿ ವಿಶೇಷ ಅನುದಾನ ನೀಡಲಾಗಿದೆ, ಎಲ್ಲಾ ಜಿಲ್ಲೆಗಳಿಗಿಂತ ಕೊಡಗು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಕೊಡಗು ಜಿಲ್ಲೆಯ 14 ಸಾವಿರಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ನಿರಾಶ್ರಿತ ದಿಡ್ಡಳ್ಳಿ ಆದಿವಾಸಿ ಜನರಿಗೆ 500 ನಿವೇಶನ ನೀಡಲಾಗಿದೆ ಎಂದು ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

siddaramaiah M.R.Seetharam ಸರ್ವಾಂಗೀಣ ಹಕ್ಕುಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ