ಮೋದಿ ವರ್ಸಸ್ ರಾಹುಲ್...!

PM modi and Rahul gandhi going to visit karnataka this month

09-01-2018

ಬೆಂಗಳೂರು: ಗುಜರಾತ್ ಚುನಾವಣೆಯ ಬಳಿಕ ಇದೀಗ ಕರ್ನಾಟಕದತ್ತ ಕಣ್ಣು ಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ತಿಂಗಳು ರಾಜ್ಯಕ್ಕೆ ವಿಶೇಷ ಭೇಟಿ ನೀಡಲಿದ್ದಾರೆ. ಇನ್ನೊಂದು ವಿಶೇಷ ಅಂದರೆ ಇಬ್ಬರೂ ನಾಯಕರು ಒಂದೇ ಅವಧಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.

ರಾಹುಲ್ ಗಾಂಧಿ ರಾಜ್ಯ ಪ್ರವಾಸವು ಜನವರಿ 27ರಿಂದ 3 ದಿನ ನಿಗದಿಯಾಗಿದೆ. ಈ ಕುರಿತ ವೇಳಾಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ರಾಹುಲ್ ಗಾಂಧಿ ಕಚೇರಿಗೆ ಕಳುಹಿಸಿಕೊಟ್ಟಿದೆ. ಇದು ಬಹುತೇಕ ಅಂತಿಮವಾಗುವ ಸಾಧ್ಯತೆಯಿದೆ. ಬಿಜೆಪಿಯ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಜನವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.

ಈ ಮೂಲಕ ಹೊಸ ವರ್ಷ ಆರಂಭದ ತಿಂಗಳೇ ಭಾರಿ ರಾಜಕೀಯ ಚಟುವಟಿಕೆಗೆ ವೇದಿಕೆಯಾಗುತ್ತಿದೆ. ಮೋದಿ ವರ್ಸಸ್ ರಾಹುಲ್ ಹೋರಾಟ ಈ ಮೂಲಕ ರಾಜ್ಯದಲ್ಲಿ ಆರಂಭವಾಗಲಿದೆ. ಈ ತಿಂಗಳು ರಾಹುಲ್ ಗಾಂಧಿ ಭೇಟಿ ಮೂರು ದಿನದ್ದಾದರೆ, ಪ್ರಧಾನಿ ನರೇಂದ್ರ ಮೋದಿ ಭೇಟಿ ಒಂದು ದಿನದ್ದಾಗಿದೆ. ಮೋದಿ ಕೇವಲ ಸಾರ್ವಜನಿಕ ಸಭೆಗೆ ಸೀಮಿತವಾದರೆ, ರಾಹುಲ್ ಗಾಂಧಿ ಸಂವಾದದಲ್ಲಿಯೂ ಭಾಗಿಯಾಗುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೊದಲ ದಿನ ಹೊಸಪೇಟೆಯಲ್ಲಿ ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಾದ ಬಳಿಕ ಜ.28ರಂದು ವಿದುರಾಶ್ವತ್ಥದಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ ಮೈಸೂರಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅಂತಿಮ ದಿನ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಬುದ್ಧಿ ಜೀವಿಗಳೊಂದಿಗೆ ಸಂವಾದ ನಡೆಯಲಿದೆ.

ರಾಜ್ಯ ಕಾಂಗ್ರೆಸ್ ನಾಯಕರು ಅದಾಗಲೇ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪ್ರವಾಸದ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ನಗರಕ್ಕೆ ಹಿಂದಿರುಗಿದ ಮೇಲೆ ರಾಜ್ಯ ನಾಯಕರ ಜತೆ ಕೂಡ ಚರ್ಚಿಸಲಿದ್ದಾರೆ. ಈ ಸಂಬಂಧವಾಗಿಯೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಗರದಲ್ಲಿ ಇಂದು ಅಥವಾ ನಾಳೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Rahul gandhi Narendra modi ಸಂವಾದ ಬುದ್ಧಿ ಜೀವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ