ಬಿಪಿಎಲ್ ಕಟುಂಬಗಳಿಗೆ ಕುರಿ-ಕೋಳಿ-ಮೇಕೆ…!

Sheep-Poultry-Goat for BPL Families ...!

09-01-2018

ಬೆಂಗಳೂರು: ರಾಜ್ಯಾದ್ಯಂತ ಬಿಪಿಎಲ್ ಕುಟುಂಬಗಳಿಗೂ ಕುರಿ,ಮೇಕೆ,ಕೋಳಿ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಪಶುಸಂಗೋಪನೆ ಸಚಿವ ಎ.ಮಂಜು, ಸಧ್ಯಕ್ಕೆ ಪಶುಭಾಗ್ಯ ಯೋಜನೆ ಸೇರಿದಂತೆ ಕೆಲ ಯೋಜನೆಗಳಡಿ ಕೆಲವರಿಗೆ ಈ ಸೌಲಭ್ಯ ದೊರೆಯುತ್ತಿದ್ದರೂ ಬಿಪಿಎಲ್ ಕುಟುಂಬಳಿಗೆ ಇದು ವಿಸ್ತರಣೆಯಾಗಬೇಕು ಎಂದರು.

ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕಡಿಮೆ ಇದ್ದು ಈ ಹಿನ್ನೆಲೆಯಲ್ಲಿ ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಕುರಿ, ಮೇಕೆ, ಕೋಳಿಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಲೇಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕುರಿ, ಮೇಕೆ, ಕೋಳಿ ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಅವನ್ನು ಒದಗಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಒಬ್ಬ ವ್ಯಕ್ತಿ ವಾರ್ಷಿಕ ಹನ್ನೊಂದು ಕೆಜಿಗಳಷ್ಟು ಮಾಂಸವನ್ನು ಸೇವಿಸುತ್ತಾನೆ. ಆದರೆ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕೇವಲ ಮೂರು ಕೆ.ಜಿ.ಯಷ್ಟಿದೆ ಎಂದು ವಿವರಿಸಿದರು. ಹೀಗಾಗಿ ಮನುಷ್ಯನ ಬೇಡಿಕೆಯ ಪ್ರಮಾಣಕ್ಕಿಂತಲೂ ತಲಾ ಎಂಟು ಕೆಜಿಗಳಷ್ಟು ಮಾಂಸದ ಕೊರತೆ ಇದೆ. ಹೀಗಾಗಿ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಹೊರರಾಜ್ಯಗಳಿಂದ ಕುರಿ,ಮೇಕೆ,ಕೋಳಿಗಳನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಯಿದೆ.

ಇದನ್ನು ತಪ್ಪಿಸಲು ರಾಜ್ಯದಲ್ಲಿ ಕುರಿ, ಮೇಕೆ, ಕೋಳಿಗಳನ್ನು ಸಾಕಲು ಬಯಸುವ ಬಿಪಿಎಲ್ ಕುಟುಂಬಗಳಿಗೆ ಒದಗಿಸಬೇಕು ಎಂಬುದು ಸರ್ಕಾರದ ಯೋಚನೆ.ಎರಡು ಕುರಿ, ಮೇಕೆ ಮತ್ತು ಹಲ ಕೋಳಿಗಳನ್ನು ಒದಗಿಸಿದರೆ ಅವನ್ನು ಪಾಲನೆ, ಪೋಷಣೆ ಮಾಡುವುದರ ಮುಖಾಂತರ ವರ್ಷಕ್ಕೆ ಮೂವತ್ತೈದರಿಂದ ನಲವತ್ತು ಸಾವಿರ ರೂಪಾಯಿಗಳಷ್ಟು ಆದಾಯ ಮಾಡಿಕೊಳ್ಳಬಹುದು ಎಂದು ವಿವರಿಸಿದರು. ರಾಜ್ಯದಲ್ಲಿ ಪಶು ಆಹಾರದ ಬೆಲೆಯನ್ನು ಪ್ರತಿ ಟನ್ ಗೆ ಎರಡು ಸಾವಿರ ರೂಗಳಷ್ಟು ಕಡಿಮೆ  ಮಾಡಲು ಆದೇಶ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಇದರಿಂದ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದ ಅವರು, ಕೆಎಂಎಫ್ ತಯಾರಿಸುತ್ತಿರುವ ಹಾಲಿನ ಪುಡಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಫೆಬ್ರವರಿ ವೇಳೆಗೆ ದಾಸ್ತಾನಿರುವ ಎಲ್ಲ ಹಾಲಿನ ಪುಡಿ ಮಾರಾಟವಾಗುತ್ತದೆ ಎಂದರು.

ಈ ತಿಂಗಳ 4 ರಿಂದ 6 ನೇ ತಾರೀಖಿನವರೆಗೆ ಅರಕಲಗೂಡಿನಲ್ಲಿ ನಡೆದ ರಾಜ್ಯ ಮಟ್ಟದ ಪಶುಮೇಳ ಯಶಸ್ವಿಯಾಗಿದ್ದು ಹಸು,ಕುರಿ,ಕೋಳಿ,ಮೊಲ ಸೇರಿದಂತೆ ವಿವಿಧ ಪ್ರಾಣಿಗಳ ತಳಿಗಳನ್ನು ಪಡೆಯುವ ವಿಷಯದಲ್ಲಿ ರೈತರು ಹೆಚ್ಚು ಉತ್ಸಾಹ ತೋರಿದ್ದಾರೆ ಎಂದರು.

ಯಾವ ತಳಿಗಳನ್ನು ಪಡೆದರೆ ಹೆಚ್ಚು ಹಾಲು ಉತ್ಪಾದಿಸಬಹುದು. ಮಾಂಸ ಉತ್ಪಾದಿಸಬಹುದು ಎಂಬುದನ್ನು ಪಶುಮೇಳದಿಂದ ಅವರು ಕಂಡುಕೊಂಡಿದ್ದು ಇದರಿಂದಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಹಾಲಿನ ಉತ್ಪಾದನೆ ಪ್ರಮಾಣ ಒಂದು ಕೋಟಿ ಲೀಟರ್ಗಳಿಗೇರಲಿದೆ ಎಂದರು. ಸಧ್ಯಕ್ಕೆ ಹಾಲಿನ ಉತ್ಪಾದನೆ ಪ್ರಮಾಣ ದಿನವೊಂದಕ್ಕೆ 77 ಲಕ್ಷ ಲೀಟರ್ ಗಳಷ್ಟಿದ್ದು ಇದು ಒಂದು ಕೋಟಿ ಲೀಟರ್ ಗಳಿಗೆ ಏರಿದರೆ ರೈತರಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

A.manju Poultry ಬಿಪಿಎಲ್ ಉತ್ಸಾಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ