ವ್ಯಕ್ತಿ ಅಪಹರಣ: ಮಾರಣಾಂತಿಕ ಹಲ್ಲೆ

abduction and deadly assault

09-01-2018

ಬೆಂಗಳೂರು: ನೆಲಮಂಗಲದ ಟಿ.ಬೇಗೂರು ಬಳಿಯಿಂದ ಕೋಳಿ ಅಂಗಡಿ ಮಾಲೀಕರೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ಹೊರತಬ್ಬಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಟಿ.ಬೇಗೂರಿನ ಆನಂದನಗರ ನಿವಾಸಿ ಕೋಳಿ ಅಂಗಡಿ ಮಾಲೀಕ ರಾಜು (26) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೇಗೂರಿನಲ್ಲಿ ಕೋಳಿ ಅಂಗಡಿಯಲ್ಲಿ ವ್ಯಾಪಾರ ನೆಡೆಸುತ್ತಿದ್ದ ರಾಜುವನ್ನು ಸ್ಕಾರ್ಪಿಯೋ ಕಾರಿನಲ್ಲಿ ಏಕಾಏಕಿ ಬಂದ ನಾಲ್ವರು ದುಷ್ಕರ್ಮಿಗಳು ಅಪಹರಿಸಿ ರಾಮನಗರ ಜಿಲ್ಲೆಯ ಕಡೆ ಹೊತ್ತೊಯ್ದು ದಾರಿಯುದ್ದಕ್ಕೂ ರಾಜುವಿನ ಮೇಲೆ ರಾಡ್ ಮತ್ತು ಕೋಲಿನಿಂದ ತೀವ್ರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಹಲ್ಲೆಗೊಳಗಾದ ಗಾಯಾಳು ರಾಜುವನ್ನು ಮಾದನಾಯಕನಹಳ್ಳಿಯ ಸೊಂಡೆಕೊಪ್ಪದ ಕೆರೆಯ ರಸ್ತೆಯ ಬದಿಯಲ್ಲಿ ಕಸದ ರೀತಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ರಸ್ತೆಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಜು ಸ್ಥಳೀಯರ ಸಹಾಯದಿಂದ ಆತನ ಕೆಲ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಸ್ಥಳೀಯರು ಮತ್ತು ಸ್ನೇಹಿತರು ತಕ್ಷಣ ತಾವರೆಕೆರೆಯಿಂದ ಆಂಬುಲೆನ್ಸ್ ಕರೆಸಿ ಚಿಕಿತ್ಸೆಗಾಗಿ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ರಾಜು ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿರುವ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kidnap scorpio ಗ್ರಾಮಾಂತರ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ