ಪರಂ ವಿರುದ್ಧ ಏಕವಚನದಲ್ಲೇ ವೈಜನಾಥ್ ಸಿಟ್ಟು

param v/s Vaijnath Patil

09-01-2018

ಬೆಂಗಳೂರು: “ಏಯ್, ಅಧ್ಯಕ್ಷ, ಓಡಬ್ಯಾಡಲೇ, ಚಮಚಾ”.. ಹಿರಿಯ ನಾಯಕ ವೈಜನಾಥ ಪಾಟೀಲ್ ಕೆಪಿಸಿಸಿ ಕಛೇರಿಯಲ್ಲಿಂದು ಪಕ್ಷಾಧ್ಯಕ್ಷ ಜಿ.ಪರಮೇಶ್ವರ್ ಅವರ ವಿರುದ್ಧ ಸಿಟ್ಟಿನಿಂದ ತಮ್ಮ ಆಕ್ರೋಶವನ್ನು ತೋಡಿಕೊಂಡ ಪರಿ ಇದು. ವೈಜನಾಥ್ ಪಾಟೀಲ್ ಅವರ ಸಿಟ್ಟಿಗೆ ಇಡೀ ಕೆಪಿಸಿಸಿ ಕಛೇರಿ ಮೂಕವಾಯಿತಲ್ಲದೆ ಅಧ್ಯಕ್ಷ ಪರಮೇಶ್ವರ್ ಅವರು ತೀವ್ರ ಮುಜುಗರಕ್ಕೆ ಈಡಾಗುವಂತಾಯಿತು.

ಅಂದ ಹಾಗೆ ಇದು ಶುರುವಾಗಿದ್ದು ಇಂದು ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಜಿ.ಪರಮೇಶ್ವರ್ ಸುದ್ದಿಗೋಷ್ಟಿಯ ನಂತರ. ಈ ಸಂದರ್ಭದಲ್ಲಿ ತಮ್ಮ ಸೀಟಿನಲ್ಲೇ ಕುಳಿತಾಗ ತಮ್ಮ ಬೆಂಬಲಿಗರ ಸಹಾಯದಿಂದ ಅಲ್ಲಿಗೆ ಬಂದ ಮಾಜಿ ಸಚಿವ ವೈಜನಾಥ ಪಾಟೀಲ್ ಅವರು, ಎರಡು ಬೇಡಿಕೆಗಳನ್ನು ಪರಮೇಶ್ವರ್ ಅವರ ಎದುರು ಮಂಡಿಸಿದರು.

ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೇಟ್ ನೀಡಿ ಎಂಬುದು ಅವರ ಮೊದಲ ಬೇಡಿಕೆಯಾಗಿತ್ತು. ಆದರೆ ಇದಕ್ಕುತ್ತರಿಸಿದ ಪರಮೇಶ್ವರ್, ಈ ವಿಷಯದಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಮಗನಿಗೆ ಸೀಟು ಕೊಡುವ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪತ್ರ ತೆಗೆದುಕೊಂಡು ಬರಬೇಕು ಎಂದರು.

ಇದರಿಂದ ಸಿಟ್ಟಿಗೆದ್ದ ವೈಜನಾಥ ಪಾಟೀಲ್, ಅಲ್ರೀ ಅಧ್ಯಕ್ಷರೇ ಆ ಧರ್ಮಸಿಂಗ್ ಅವರ ಇಬ್ಬರು ಮಕ್ಕಳಿಗೆ ಯಾರ ಶಿಫಾರಸೂ ಇಲ್ಲದೆ ಟಿಕೇಟ್ ಕೊಡುತ್ತೀರಿ. ಧರ್ಮಸಿಂಗ್ ಅವರ ಒಬ್ಬ ಮಗ ಎಮ್ಮೆಲ್ಲೆ. ಮತ್ತೊಬ್ಬ ಮಗ ಎಮ್ಮೆಲ್ಸಿ. ಖರ್ಗೆ ಅವರ ಮಗ ಎಮ್ಮೆಲ್ಲೆ ಜತೆಗೆ ಮಂತ್ರಿ. ಇದೇನಾ ನಿಮ್ಮ ನ್ಯಾಯ ಎಂದು ಪ್ರಶ್ನಿಸಿದರು.

ಆದರೆ ಮೊದಲ ಬೇಡಿಕೆಯನ್ನು ಅರಗಿಸಿಕೊಳ್ಳಲಾಗದ ಪರಮೇಶ್ವರ್ ಅವರು ಖುರ್ಚಿಯಿಂದ ಎದ್ದು ಹೊರಗೆ ಹೊರಟರು. ಇದರಿಂದ ಕೋಪಗೊಂಡ ವೈಜನಾಥ ಪಾಟೀಲ್, ಏಯ್ ಅಧ್ಯಕ್ಷ, ಓಡಬ್ಯಾಡಲೇ ಚಮಚಾ ಎಂದು ಕೈ ಬೀಸುತ್ತಾ ಕೂಗತೊಡಗಿದರು. ವೈಜನಾಥ ಪಾಟೀಲರ ಸಿಟ್ಟು ಕಂಡು ಕೆಪಿಸಿಸಿ ಕಛೇರಿಯಲ್ಲಿದ್ದವರೆಲ್ಲ ಒಂದು ಕ್ಷಣ ಧಿಗ್ಭ್ರಮೆಗೊಂಡರು. ಆದರೆ ಅವರ ಸಿಟ್ಟಿನ ಮುಂದೆ ಯಾರೇನೂ ಮಾಡಲು ಸಾಧ್ಯವಾಗಲಿಲ್ಲ.

ನಂತರದಲ್ಲಿ ಸುದ್ದಿಗಾರರ ಮುಂದೆ ತಮ್ಮ ಆಕ್ರೋಶವನ್ನು ಬಿಚ್ಚಿಟ್ಟ ವೈಜನಾಥ ಪಾಟೀಲ್. ಕಾಂಗ್ರೆಸ್ ಪಕ್ಷದಲ್ಲಿ ನ್ಯಾಯ ಸಿಗುತ್ತಿಲ್ಲ. ಮಗನಿಗೆ ಎಮ್ಮೆಲ್ಸಿ ಸೀಟು ಕೇಳಲು ಬಂದಿದ್ದೆ. ಹಾಗೆಯೇ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳಲು ಬಂದಿದ್ದೆ ಎಂದರು. ಮಗನಿಗೆ ಎಮ್ಮೆಲ್ಸಿ ಟಿಕೇಟ್ ಕೊಡಿ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ರ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಹಾಗಿದ್ದರೆ ಧರ್ಮಸಿಂಗ್ ಅವರ ಒಬ್ಬ ಮಗನಿಗೆ ಎಂ.ಎಲ್.ಎ ಟಿಕೇಟು, ಮತ್ತೊಬ್ಬ ಮಗನಿಗೆ ಎಮ್ಮೆಲ್ಸಿ ಟಿಕೇಟ್ ಕೊಟ್ಟರಲ್ಲ ಯಾಕೆ? ಖರ್ಗೆ ಅವರ ಮಗನಿಗೆ ಎಂ.ಎಲ್.ಎ ಟಿಕೇಟ್ ಕೊಟ್ಟರು.

ಒಂದು ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸು ಪತ್ರ ಬೇಕೆಂದಾಗಿದ್ದರೆ ಇವರೆಲ್ಲ ಯಾರ ಶಿಫಾರಸು ತಂದಿದ್ದರು. ಚಮಚಾಗಿರಿ ಮಾಡಿ ಟಿಕೇಟ್ ಪಡೆದು ಬಿಟ್ಟರೆ ಉಳಿದವರು ಏನು ಮಾಡಬೇಕು? ಹೀಗಾಗಿ ಈ ಕುರಿತು ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ, ಸೋನಿಯಾಗಾಂಧಿಯವರಿಗೆ ದೂರು ಕೊಡುತ್ತೇನೆ ಎಂದರು. ಪಕ್ಷದ ವೇದಿಕೆಯಲ್ಲಿ ಈ ಕುರಿತು ಮಾತನಾಡುತ್ತೇನೆ. ನಾನೇನೂ ಸುಮ್ಮನಿರುವುದಿಲ್ಲ. ಆಗುತ್ತಿರುವ ಅನ್ಯಾಯದ ಕುರಿತು ಮಾತನಾಡಲೇಬೇಕಲ್ಲ. ಒಂದು ವೇಳೆ ಮಾತನಾಡದೆ ಸುಮ್ಮನಿದ್ದರೆ ಇವರು ಹೇಳಿದ್ದೇ ಆಟವಾಗುತ್ತದೆ ಎಂದರು.

ಈ ಮಧ್ಯೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ. ಇತ್ತೀಚೆಗೆ ಆರು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಯಿತು. ಎಲ್ಲ ಪಂಚಾಯ್ತಿಗಳಿಗೆ ಒಂದೊಂದರ ಹಾಗೆ. ಆದರೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ 371(ಜೆ)ಅಡಿ ಬರಬೇಕಿದ್ದ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ಇದು ಅನ್ಯಾಯ. ಈ ಕುರಿತು ನಾವು ಹಲವು ಬಾರಿ ಪ್ರಸ್ತಾಪಿಸಿದ್ದೇವೆ. ಆದರೆ ಸರಿಪಡಿಸಲಾಗಿಲ್ಲ. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಬ್ಬರೂ ದಕ್ಷಿಣ ಕರ್ನಾಟಕದವರೇ ಆಗಿರುವುದು ಈ ಅನ್ಯಾಯಕ್ಕೆ ಕಾರಣ ಎಂದರು.

ಹೀಗಾಗಿ ಮುಖ್ಯಮಂತ್ರಿ ಇಲ್ಲವೇ ಕೆಪಿಸಿಸಿ ಅಧ್ಯಕ್ಷರಲ್ಲಿ ಒಬ್ಬರು ಕೆಳಗಿಳಿಯಬೇಕು. ಇಲ್ಲದೇ ಇದ್ದರೆ ನಮಗೆ ನ್ಯಾಯಸಿಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆ ಇಲ್ಲವೇ ಕೆಪಿಸಿಸಿ ಅಧ್ಯಕ್ಷರ ಹುದ್ದೆಗಳ ಪೈಕಿ ಒಂದು ಹುದ್ದೆ ಉತ್ತರ ಕರ್ನಾಟಕ ಭಾಗದವರಿಗೆ ಸಿಗಬೇಕು. ಆಗ ನ್ಯಾಯ ಪಡೆಯಲು ಸಾಧ್ಯ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ